Webdunia - Bharat's app for daily news and videos

Install App

ಇಂದು ಭೀಮನ ಅಮಾವಾಸ್ಯೆ; ಪೂಜಾ ವಿಧಾನ ಹಾಗೂ ವ್ರತ ಆಚರಣೆ ಮಾಡುವುದು ಹೇಗೆಂದು ತಿಳಿಯಿರಿ

Webdunia
ಭಾನುವಾರ, 8 ಆಗಸ್ಟ್ 2021 (10:15 IST)
ಸನಾತನ ಸಂಸ್ಕೃತಿಯಲ್ಲಿ ದೇವರ ಮೊರೆ ಹೋಗಲು ನಮ್ಮ ಪೂರ್ವಜರು ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ದೇವರ ಪೂಜೆ ಮಾಡುವುದು, ಭಜನೆ ಮಾಡುವುದು, ವ್ರತಗಳನ್ನು ಆಚರಿಸುವುದು, ಹೋಮ-ಹವನವನ್ನು ಮಾಡುವುದು, ಯಜ್ಞ-ಯಾಗಾದಿಗಳನ್ನು ಮಾಡುವುದು, ದಾನವನ್ನು ಮಾಡುವುದಂತಹ ಹಲವಾರು ಮಾರ್ಗಗಳನ್ನು ಈಗಿನ ನಮ್ಮ ಜೀವನದಲ್ಲಿ ನೋಡಬಹುದು.


ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಭೀಮನ ಅಮಾವಾಸ್ಯೆ ಎಂಬ ವ್ರತವನ್ನು ಆಚರಿಸುತ್ತೇವೆ. ಈ ವ್ರತದ ಉದ್ದೇಶ ಒಂದೇ ಆದರೂ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗುತ್ತದೆ. ಭಾರತದ ದಕ್ಷಿಣದ ಕಡೆಯಲ್ಲಿ ಆಟಿ ಅಮಾವಾಸ್ಯೆ ಎಂದು, ಉತ್ತರ ಕನ್ನಡದ ಕಡೆಯಲ್ಲಿ ಕೊಡೆ ಅಮವಾಸ್ಯೆಯೆಂದು ಹಾಗೂ ಕೆಲವು ಕಡೆಯಲ್ಲಿ ಅಳಿಯನ ಅಮಾವಾಸ್ಯೆಯೆಂದು, ಪೌರಾಣಿಕವಾಗಿ ಪತಿ ಸಂಜೀವಿನಿ ವ್ರತ, ಜ್ಯೋತಿರ್ಭೀಮೇಶ್ವರ ವ್ರತ ಎಂದೂ ಕರೆಯುವುದು ರೂಢಿಯಲ್ಲಿ ಬಂದಿದೆ. ಹೆಣ್ಣು ಮಕ್ಕಳು ಮದುವೆಯಾದ ನಂತರ ಪ್ರತೀ ವರ್ಷದ ಆಷಾಢ ಮಾಸದ ಅಮಾವಾಸ್ಯೆಯ ದಿನದಲ್ಲಿ ಒಟ್ಟು ಒಂಭತ್ತು ವರ್ಷಗಳ ಕಾಲ ತನ್ನ ಸೌಮಂಗಲ್ಯದ ವೃದ್ಧಿಗೋಸ್ಕರವಾಗಿ, ಗಂಡನ ಅಭ್ಯುದಯಕ್ಕಾಗಿ ಈ ವ್ರತ ಮಾಡುವ ಪದ್ಧತಿ ಇದೆ.
ಭೀಮನ ಅಮಾವಾಸ್ಯೆಯ ಪುರಾಣ ಆಧಾರವೇನೆಂದರೆ ಸೌರಾಷ್ಟ್ರ ದೇಶದಲ್ಲಿ ವಜ್ರಬಾಹುವೆಂಬ ರಾಜನಿಗೆ ಜಯಶೇಖರ ಎಂಬ ಕುಮಾರನಿದ್ದನು. ಜಯಶೇಕರನು ರಾಜಕುಮಾರನಾಗಿ ಪ್ರಜೆಗಳಿಗೆ ಅಚ್ಚುಮೆಚ್ಚಾಗಿದ್ದನು. ದುರಾದೃಷ್ಟವಶದಿಂದ ರಾಜಕುಮಾರನು ಮರಣ ಹೊಂದಿದನು. ಪುತ್ರ ಶೋಕ ಹೊಂದಿದ ರಾಜ-ರಾಣಿಯರು ಕುಟುಂಬಕ್ಕೆ ದಿಕ್ಕಿಲ್ಲದಂತಾಗುವುದು ಎಂದು ತಿಳಿದು ಮೃತನಾದ ರಾಜಕುಮಾರನಿಗೆ ಮದುವೆ ಮಾಡುವುದಾಗಿ ತೀರ್ಮಾನಿಸಿದರು. ಮೃತ ರಾಜಕುಮಾರನಿಗೆ ಕನ್ಯೆಯನ್ನು ಕೊಡಲು ಮುಂದಾದವರಿಗೆ ವಿಶೇಷ ಬಹುಮಾನವೆಂದು ತೀರ್ಮಾನಿಸಿ ವಿಷಯವನ್ನು ಡಂಗೂರ ಸಾರಿಸಿದರು.
ಪಕ್ಕದ ಊರಿನಲ್ಲಿದ ಬಡ ಬ್ರಾಹ್ಮಣನಾದ ಮಾಧವಶರ್ಮರು ಬಹುಮಾನದಿಂದ ಬಡತನ ಹೋಗಲಾಡಿಸಿಕೊಳ್ಳಬಹುದು ಎಂದು ಯೋಚಿಸಿ ಮಗಳನ್ನು ಕೊಡುವುದಾಗಿ ತೀರ್ಮಾನಿಸಿದರು, ಹಾಗೆಯೇ ನೆರವೇರಿಸಿದರು. ಆ ಕನ್ಯೆಗೆ ಒಂದು ಕಡೆಯಿಂದ ತವರು ಮನೆಗೆ ಸಹಾಯ ಆಗುತ್ತದೆ ಎಂಬ ಆಸೆ, ಇನ್ನೊಂದು ಕಡೆ ತನ್ನ ಬದುಕು ಹಾಳಾಗುತ್ತದೆ ಎಂಬ ಯೋಚನೆಯು ಪ್ರಾರಂಭವಾಗಿ ಸಂದಿಗ್ಧ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡಳು.
ಸಮಸ್ಯೆ ನಿವಾರಣೆ ಮಾಡುವುದಾಗಿ ಭೀಮೇಶ್ವರನಲ್ಲಿ “ಪ್ರಭು ನೀನು ಮಾತ್ರ ನನ್ನ ಸಮಸ್ಯೆಯನ್ನು ಪರಿಹಾರ ಮಾಡುವೆ, ನನ್ನ ಪತಿಯನ್ನು ಜೀವಿಸುವಂತೆ ಮಾಡು. ಅದಕ್ಕಾಗಿ ನಾನೇನು ಮಾಡುವುದಾದರೂ ಸಿದ್ಧ. ನನಗೆ ಅನುಗ್ರಹಿಸು ” ಎಂದು ಪ್ರಾರ್ಥಿಸಿದಳು. ಪರಶಿವನು ಅನುಗ್ರಹಿಸಿ ಜ್ಯೋತಿರ್ಭೀಮೇಶ್ವರ ವ್ರತದ ಕ್ರಮವನ್ನು ತಿಳಿಸಿ ಆಚರಿಸಲು ಸೂಚಿಸಿದನು. ಹಾಗೆಯೇ ಅವಳು ಜ್ಯೋತಿರ್ಭೀಮೇಶ್ವರ ವ್ರತವನ್ನು ನಡೆಸಿ ಪತಿಯನ್ನು ಬದುಕಿಸಿಕೊಂಡಳೆಂದು ಪುರಾಣದಲ್ಲಿ ಹೇಳಿದೆ.ಈ ವ್ರತದ ಆಚರಣೆಯ ಬಗ್ಗೆ ಹೇಳುವುದಾದರೆ, ಒಂದು ತಟ್ಟೆಯಲ್ಲಿ ಧಾನ್ಯ ರಾಶಿ (ಅಕ್ಕಿ) ಹಾಕಿ, ಅದರ ಮೇಲೆ ಕಲಶ ಸ್ಥಾಪನೆ ಮಾಡಿಕೊಂಡು ಎರಡು ದೀಪದ ಕಂಭಗಳಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಈ ದೀಪಸ್ತಂಭದಲ್ಲಿ ಮತ್ತು ಕಲಶದಲ್ಲಿ ಈಶ್ವರ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಮಾಡಬೇಕು. ಸಾಮಾನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ವಿಶೇಷವಾಗಿ 9 ಗಂಟಿನಿಂದ ಕೂಡಿದ ಮಂಗಳ ಸೂತ್ರವನ್ನು (ದಾರವನ್ನು) ಇಟ್ಟು ಪೂಜೆ ಮಾಡಬೇಕು. ಪೂಜೆಯ ನಂತರ ಕೈಗೆ ಕಟ್ಟಿಕೊಳ್ಳಬೇಕು.
ಹಾಗೆಯೇ ವ್ರತದ ಇನ್ನೊಂದು ಅಂಗವಾಗಿ ಸುಮಂಗಲಿಯರು ತಮ್ಮ ಪತಿಯನ್ನು ದೇವರ ಸ್ವರೂಪವೆಂದು ಭಾವಿಸಿ ಭಕ್ತಿ ಭಾವನೆಯನ್ನು ಇಟ್ಟುಕೊಂಡು ಪಾದ ಪೂಜೆಯನ್ನು ಮಾಡಿ ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳಬೇಕು. ಇಂತಹ ಪುರಾಣಗಳ ಆಧಾರದ ಮೇಲೆ ನಾವೆಲ್ಲರೂ ವ್ರತಗಳನ್ನು ಆಚರಿಸುತ್ತಿದ್ದೇವೆ. ನಮ್ಮ ಪೂರ್ವಜರು ಹೇಳಿದ ಸಂಪ್ರದಾಯಗಳ ಮೇಲೆ ಭಕ್ತಿ ಭಾವವನ್ನು ತೋರುವ ಗುಣವನ್ನು ಬೆಳೆಸಿಕೊಳ್ಳೋಣ. ಪೂಜೆ ಪುನಸ್ಕಾರಗಳಿಂದ ದೇವರ ಕೃಪೆಗೆ ಪಾತ್ರರಾಗುವ ಪ್ರಯತ್ನವನ್ನು ಮಾಡೋಣ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments