ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ಅಭಾವ ತಾರಕಕ್ಕೇರಿದೆ. ಇದು ರಾಜಕೀಯ ನಾಯಕರಿಗೂ ತಟ್ಟಿದೆ. ಸಿಎಂ ಸಿದ್ದರಾಮಯ್ಯ ಕೂಡಾ ತಮ್ಮ ಮನೆಗೆ ನೀರಿಲ್ಲದೇ ಟ್ಯಾಂಕರ್ ಮೊರೆ ಹೋಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಮನೆಗೆ ಟ್ಯಾಂಕರ್ ನಲ್ಲಿ ನೀರು ತರಿಸುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆಡಳಿತದ ಚುಕ್ಕಾಣಿ ಹಿಡಿದವರ ಮನೆಯಲ್ಲಿಯೇ ಇದೇ ಕತೆಯೇ ಆಗಿದ್ದರೆ ಜನಸಾಮಾನ್ಯರ ಕತೆಯೇನು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ನಿನ್ನೆಯಷ್ಟೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡಾ ತಮ್ಮ ಅಸಹಾಯಕತೆ ಹೇಳಿಕೊಂಡಿದ್ದರು. ನಮ್ಮ ಮನೆಯ ಕೊಳವೆ ಬಾವಿಯಲ್ಲೂ ನೀರು ಬತ್ತಿ ಹೋಗಿದೆ ಎಂದು ಡಿಕೆಶಿ ಹೇಳಿಕೊಂಡಿದ್ದರು. ಸಿಎಂ ಮನೆಗೆ ಟ್ಯಾಂಕರ್ ನಲ್ಲಿ ನೀರು ತರಿಸಿಕೊಳ್ಳುತ್ತಿರುವ ದೃಶ್ಯ ರಾಷ್ಟ್ರಾದ್ಯಂತ ಸುದ್ದಿಯಾಗಿದೆ.
ಇನ್ನು ಸಂಸದ ತೇಜಸ್ವಿ ಸೂರ್ಯ ಕೂಡಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದ್ದು ರಾಜ್ಯ ಸರ್ಕಾರಕ್ಕೆ ಮೊದಲೇ ಮುನ್ನೆಚ್ಚರಿಕೆಯಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಹೊರಿಸಿದ್ದಾರೆ. ಇನ್ನು, ಜನರೂ ನೀರಿನ ಕೊರತೆಯಿಂದಾಗಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.