ಬೆಂಗಳೂರು: ದಾಖಲೆಯ ತಾಪಮಾನದಿಂದ ತತ್ತರಿಸಿ ಹೋಗಿದ್ದ ಬೆಂಗಳೂರಿಗರಿಗೆ ನಿನ್ನೆ ರಾತ್ರಿ ಮಳೆರಾಯ ತಂಪೆರಚಿದ್ದಾನೆ. ಇದರಿಂದ ನೀರಿಲ್ಲದೇ ಬವಣೆ ಪಡುತ್ತಿದ್ದ ಬೆಂಗಳೂರಿಗರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ನಿನ್ನೆ ಜಯನಗರ, ಜೆಪಿ ನಗರ, ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್, ಕೋರಮಂಗಲ, ರಿಚ್ಮಂಡ್ ಸರ್ಕಲ್, ಕಬ್ಬನ್ ಪಾರ್ಕ್, ವಿಧಾನಸೌಧ, ಶಾಂತಿನಗರ, ಕೆಆರ್ ಪುರಂ, ಪೀಣ್ಯ, ದಾಸರಹಳ್ಳಿ, ಬಾಗಲಕುಂಟೆ, ಶೆಟ್ಟಿಹಳ್ಳಿ, ಮಲ್ಲಸಂದ್ರ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ.
ಸುಮಾರು 15 ನಿಮಿಷಗಳಷ್ಟು ಕಾಲ ಮಳೆ ಸುರಿದಿದೆ. ಕಳೆದ ಒಂದು ವಾರದಿಂದ ದಾಖಲೆಯ ಪ್ರಮಾಣದಲ್ಲಿ ತಾಪಮಾನ ಕಂಡುಬಂದಿತ್ತು. ಇದೀಗ ಮಳೆ ಬಂದಿದ್ದರಿಂದ ಕೊಂಚ ಸಮಾಧಾನವಾದಂತಾಗಿದೆ. ಸಂಜೆ ವೇಳೆ ದಿಡೀರ್ ಮಳೆಯಿಂದಾಗಿ ವಾಹನ ಸಂಚಾರ ಕೊಂಚ ಏರುಪೇರಾಗಿತ್ತು.
ಮುಂದಿನ ವಾರದವರೆಗೂ ಮಳೆಯಾಗುವ ಸೂಚನೆಯಿದೆ. ಹವಾಮಾನ ವರದಿ ಪ್ರಕಾರ ಬೆಂಗಳೂರು, ಉಡುಪಿ, ತುಮಕೂರು ಮುಂತಾದ ಕಡೆ ಮುಂದಿನ ವಾರ ಮಳೆಯಾಗುವ ಸಾಧ‍್ಯತೆಯಿದೆ. ಇನ್ನಾದರೂ ಬೆಂಗಳೂರನ ನೀರಿನ ಬವಣೆ ಮುಗಿಯಲಿ ಎನ್ನುವುದು ಜನರ ಆಶಯ.