Select Your Language

Notifications

webdunia
webdunia
webdunia
webdunia

ಮತ್ತೊಬ್ಬ ವಿಚಾರವಾದಿಗೆ ಬೆದರಿಕೆ: ಭಜರಂಗ ದಳದ ನಾಯಕನ ಬಂಧನ

ಮತ್ತೊಬ್ಬ ವಿಚಾರವಾದಿಗೆ ಬೆದರಿಕೆ: ಭಜರಂಗ ದಳದ ನಾಯಕನ ಬಂಧನ
ಬಂಟ್ವಾಳ , ಸೋಮವಾರ, 31 ಆಗಸ್ಟ್ 2015 (15:33 IST)
ವಿಚಾರವಾದಿ ಸಾಹಿತಿ ಎಮ್.ಎಮ್. ಕಲಬುರ್ಗಿಯವರ ಹತ್ಯೆಯ ಬೆನ್ನಲ್ಲೇ ವಿಚಾರವಾದಿ ಬರಹಗಾರರಾದ ಕೆ.ಎಸ್. ಭಗವಾನ್ ಅವರಿಗೂ ಬೆದರಿಕೆ ಒಡ್ಡಿದ ಭಜರಂಗ ದಳದ ನಾಯಕನೊಬ್ಬನನ್ನು ದಕ್ಷಿಣ ಕನ್ನಡದಲ್ಲಿ ಬಂಧಿಸಲಾಗಿದೆ. 
 
ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನಲ್ಲಿ ಭಜರಂಗ ದಳದ ಸಹ ಸಂಚಾಲಕರಾಗಿರುವ ಭುವಿತ್ ಶೆಟ್ಟಿ ಭಾನುವಾರ ಬೆಳಗ್ಗೆ, 'ಯು. ಆರ್. ಅನಂತಮೂರ್ತಿಯವರ ಬಳಿಕ ಈಗ ಎಮ್.ಎಮ್. ಕಲಬುರ್ಗಿ. ಹಿಂದೂ ಧರ್ಮವನ್ನು ಅಣಕಿಸಿ ನಾಯಿಯಂತೆ ಸಾಯಿರಿ. ಪ್ರೀತಿಯ ಕೆ. ಎಸ್. ಭಗವಾನ್ ಅವರೇ ಮುಂದಿನ ಸರದಿ ನಿಮ್ಮದು', ಎಂದು ಟ್ವೀಟ್ ಮಾಡಿದ್ದರು. 
 
ಗಲಭೆಗೆ ಪ್ರಚೋದನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಭುವಿತ್ ಶೆಟ್ಟಿ ಅವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಟ್ವೀಟ್‌ನ್ನು ಅಳಿಸಿ ಹಾಕಿರುವ ಭುವಿತ್, ಈ ಕುರಿತು ಕ್ಷಮೆಯನ್ನು ಸಹ ಕೇಳಿದ್ದಾರೆ. 
 
ಭಾನುವಾರ ಬೆಳಗ್ಗೆ ಕಲಬುರ್ಗಿ ಅವರ ಧಾರವಾಡದ ನಿವಾಸಕ್ಕೆ ಬೈಕ್ ಮೇಲೆ ಬಂದಿದ್ದ ವ್ಯಕ್ತಿಗಳಿಬ್ಬರು ಬಾಗಿಲ ಹೊರಗೆ ನಿಂತು ತಾವು ವಿದ್ಯಾರ್ಥಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಕಲಬುರ್ಗಿ ಅವರು ಬಾಗಿಲು ತೆರೆಯುತ್ತಿದ್ದಂತೆ ಹಣೆಗೆ ಪಿಸ್ತೂಲ್‍ನಿಂದ ಶೂಟ್ ಮಾಡಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದರು.
 
ಸಾಹಿತಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದು ಇದೇ ಮೊದಲು. ಸಾಹಿತಿಯೊಬ್ಬರು ದುಷ್ಕರ್ಮಿಗಳಿಗೆ ಬಲಿಯಾದ ನಿದರ್ಶನಗಳು ಇಲ್ಲ. ಕಲಬುರ್ಗಿಯವರಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಆದರೆ, ಅವರೇ ಅದನ್ನು ನಿರಾಕರಿಸಿದ್ದರು ಎನ್ನಲಾಗಿದೆ.

Share this Story:

Follow Webdunia kannada