ಬೆಂಗಳೂರು : ದೆಹಲಿಗೆ ಪ್ರತಿಭಟನೆಗಾಗಿ ತೆರಳುತ್ತಿದ್ದ ರೈತರನ್ನು ದೇಶಾದ್ಯಂತ ಬಂಧಿಸಲಾಗಿದೆ. ಈ ಪೈಕಿ ಕರ್ನಾಟಕದ ರೈತರೂ ಸಹ ಸೆರೆಯಾಗಿದ್ದು ಅವರ ಬಿಡುಗಡೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸದನದಲ್ಲಿ ದನಿಯತ್ತಿದರು. 70 ಬಂಧಿತ ರೈತರ ಪೈಕಿ 25 ಮಂದಿ ಮಹಿಳೆಯರೂ ಇದ್ದಾರೆ. ರೈತರ ಬಂಧನ ಖಂಡನೀಯ ಅವರ ಬಿಡುಗಡೆಗೆ ಸರ್ಕಾರ ಕೂಡಲೇ ಪ್ರಯತ್ನಿಸಬೇಕು ಎಂದು ಅವರು ಸ್ಪೀಕರ್ ಬಳಿ ಮನವಿ ಮಾಡಿದರು.
ಪ್ರತಿಭಟನೆ ಹಾಗೂ ಧರಣಿಗಳು ಜನಸಾಮಾನ್ಯರ ಹಕ್ಕು ಎಂದು ಇದಕ್ಕೆ ಮಹದೇವಪ್ಪ ಉತ್ತರ ನೀಡಿದರು.ಸರ್ಕಾರ ಈ ಬಗ್ಗೆ ಈಗಾಗಲೇ ಕ್ರಮಕ್ಕೆ ಮುಂದಾಗಿದೆ. ಖುದ್ದು ಮುಖ್ಯಮಂತ್ರಿ ಹಾಗೂ ಗೃಹಸಚಿವರೇ ಈ ಬಗ್ಗೆ ಸಭೆಗೆ ಸ್ಪಷ್ಟೀಕರಣ ನೀಡಲಿದ್ದಾರೆ ಎಂದರು. ಸಭಾಪತಿ ಯು.ಟಿ. ಖಾದರ್ ಮಾತನಾಡಿ, ದೆಹಲಿಗೆ ತೆರಳುತ್ತಿದ್ದ ರೈತರನ್ನು ಮಧ್ಯಪ್ರದೇಶ ಸರ್ಕಾರ ಬಂಧಿಸಿದೆ. ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರದೇಶ ಸರ್ಕಾರದ ಜೊತೆ ಮಾತನಾಡಿ ರೈತರ ಬಿಡುಗಡೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.