Select Your Language

Notifications

webdunia
webdunia
webdunia
webdunia

ಡಿನೋಟಿಫಿಕೇಶನ್ ಗಲಾಟೆ: ಅಬ್ಬರಿಸಿದ ಸಿದ್ದು, ಶೆಟ್ಟರ್ ಗುದ್ದು

ಡಿನೋಟಿಫಿಕೇಶನ್ ಗಲಾಟೆ: ಅಬ್ಬರಿಸಿದ ಸಿದ್ದು, ಶೆಟ್ಟರ್ ಗುದ್ದು
ಬೆಂಗಳೂರು , ಶನಿವಾರ, 26 ಜುಲೈ 2014 (13:10 IST)
ಬೆಂಗಳೂರು ಉತ್ತರದ ಜಕ್ಕೂರು, ಹೆಗಡೆನಗರ, ಯಲಹಂಕದ ಕೆಲವು ಗ್ರಾಮಗಳ ಜಮೀನು ಒಳಗೊಂಡ ಅರ್ಕಾವತಿ ಬಡಾವಣೆ ನಿವೇಶನ ಡಿನೋಟಿಫಿಕೇಶನ್( ಭೂಸ್ವಾಧೀನ ಅಧಿಸೂಚನೆ ರದ್ದು) ಪ್ರಕರಣ ವಿಧಾನಸಭೆಯಲ್ಲಿ ಕೋಲಾಹಲವನ್ನು ಎಬ್ಬಿಸಿದೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು  ಬಿಜೆಪಿ ಸದಸ್ಯರು ಒತ್ತಾಯಿಸಿದರು.ಸರ್ಕಾರ ಅರ್ಕಾವತಿ ಬಡಾವಣೆಯ 983 ಎಕರೆ ಜಮೀನನ್ನು ಡಿನೋಟಿಫೈ ಮಾಡಿದೆ. ಈ ವರ್ಷದ ಜೂನ್‌ನಲ್ಲೇ 541 ಎಕರೆ ಡಿನೋಟಿಫೈ ಮಾಡಿದೆ ಎಂದು ಆರೋಪಿಸಿದರು.  
 
ಅರ್ಕಾವತಿ ಬಡಾವಣೆಯ ನೋಟಿಫಿಕೇಷನ್ 
ಸೆಪ್ಟೆಂಬರ್ 2003ರಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ  ಆರಂಭಿಕ ಭೂ ಸ್ವಾಧೀನ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ 3893 ಎಕರೆ  ರೈತರ ಜಮೀನು ಭೂಸ್ವಾಧೀನ ಮಾಡಲಾಗಿತ್ತು. ಇದರಿಂದ ಅನೇಕ ಭೂಮಾಲೀಕರು ಕೋರ್ಟ್ ಮೆಟ್ಟಿಲು ಹತ್ತಿ ಭೂಸ್ವಾಧೀನದಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. 
 
ಕೋರ್ಟ್ ಆದೇಶದನ್ವಯ 1089 ಎಕರೆಯನ್ನು ಬಡಾವಣೆ ಯೋಜನೆಯಿಂದ ಕೈಬಿಡಲಾಯಿತು. 2,750 ಎಕರೆ ಅರ್ಕಾವತಿ ಬಡಾವಣೆಯ ಅಂತಿಮ ಅಧಿಸೂಚನೆ ಹೊರಡಿಸಲಾಯಿತು. 
 
ಸುದೀರ್ಘ ಕಾನೂನಿನ ಹೋರಾಟ
ಆದಾಗ್ಯೂ ಕಾನೂನಿನ ಹೋರಾಟ ಮುಂದುವರಿಯಿತು. ಭೂಮಿ ಕಳೆದುಕೊಂಡು ಅನೇಕ ರೈತರು ತಾರತಮ್ಯದ ಆರೋಪಗಳನ್ನು ಮಾಡಿದರು. ಇದರಿಂದಾಗಿ ಹೈಕೋರ್ಟ್ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಜಾರಿ ಮಾಡಿತು. 
 
 ಕೆಳಗಿನ ವರ್ಗಕ್ಕೆ ಸೇರಿದ ಯಾವುದೇ ಭೂಮಿ ಡಿನೋಟಿಫಿಕೇಷನ್ ವ್ಯಾಪ್ತಿಗೆ ಬರುತ್ತದೆ ಎಂದು ಹೈಕೋರ್ಟ್ ತಿಳಿಸಿತು. ಗ್ರೀನ್ ಬೆಲ್ಟ್ ಪ್ರದೇಶದಲ್ಲಿರುವ ಭೂಮಿ, ಧರ್ಮದತ್ತಿ, ಶಿಕ್ಷಣ ಮತ್ತು ಧಾರ್ಮಿಕ ಸಂಸ್ಥೆಗಳು ಕಟ್ಟಡಗಳನ್ನು ಸಂಪೂರ್ಣವಾಗಿ ನಿರ್ಮಿಸಿರುವ ಭೂಮಿ, ಕಾರ್ಖಾನೆಗಳನ್ನು ನಿರ್ಮಿಸಿರುವ ಭೂಮಿ ಮತ್ತು ನೆರೆಯ ಭೂಮಿಗೆ ಹೋಲಿಕೆಯಾಗುವ  ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸದ ಭೂಮಿ ಡಿನೋಟಿಫಿಕೇಷನ್‌ಗೆ ಅರ್ಹವಾಗಿದೆ ಎಂದು ಕೋರ್ಟ್ ತಿಳಿಸಿತು.
 ಮುಂದಿನ ಪುಟ ನೋಡಿ
 

ಕೋರ್ಟ್ ಮಾರ್ಗದರ್ಶನದ ಅನ್ವಯ  ಈ ವರ್ಷ ಜೂನ್‌ನಲ್ಲಿ ಬಿಡಿಎ ನೋಟಿಫೈ ಮಾಡಿದ ಪರಿಷ್ಕತ ಬಡಾವಣೆ ಯೋಜನೆಯಲ್ಲಿ 983 ಎಕರೆಯನ್ನು ಕೈಬಿಡಲಾಗಿದ್ದು, ಈಗ 1766 ಎಕರೆ ಭೂಮಿಯನ್ನು ಮಾತ್ರ ಅರ್ಕಾವತಿ ಬಡಾವಣೆಯ ವ್ಯಾಪ್ತಿಗೆ ಸೇರಿಸಿತು.  ಆದರೆ ಡಿನೋಟಿಫಿಕೇಶನ್ ಪ್ರಕ್ರಿಯೆಯಲ್ಲಿ ದೊಡ್ಡ ಹಗರಣ ನಡೆದಿದೆ. ನರ್ಸರಿ ವರ್ಗದ ಹೆಸರಿನಲ್ಲಿ ಭಾರೀ ಪ್ರಮಾಣದ ನಿವೇಶನಗಳನ್ನು ಡಿನೋಟಿಫೈ ಮಾಡಲಾಗಿದ್ದು, 16 ಗ್ರಾಮಗಳಲ್ಲಿ ಒಂದೇ ಒಂದು ನರ್ಸರಿ ಇರಲಿಲ್ಲ ಎಂದು ಶೆಟ್ಟರ್ ಆರೋಪಿಸಿದ್ದರು.

101 ಪ್ರಕರಣಗಳಲ್ಲಿ, ಬಿಲ್ಟ್ ಅಪ್ ಭೂಮಿಯೆಂದು ಭೂಸ್ವಾಧೀನ ಅಧಿಸೂಚನೆ ರದ್ದು(ಡಿನೋಟಿಫಿಕೇಷನ್) ಮಾಡಲಾಗಿದ್ದು, ಕಾರ್ಖಾನೆಗಳಿವೆಯೆಂದು 12 ಪ್ರಕರಣಗಳಲ್ಲಿ ಡಿನೋಟಿಫಿಕೇಶನ್ ಮಾಡಲಾಗಿದೆ. 
 
ತಾವು ಮುಖ್ಯಮಂತ್ರಿಯಾಗಿದ್ದಾಗ, ಅಧಿಕಾರಿಗಳು ಮತ್ತು ಇತರ ಲಾಬಿಗಳಿಂದ ಡಿನೋಟಿಫೈ ಮಾಡಬೇಕೆಂಬ ಒತ್ತಡಕ್ಕೆ ಮಣಿಯಲಿಲ್ಲ ಎಂದು ಶೆಟ್ಟರ್ ತಿಳಿಸಿದರು. 
 
ರೈತರ ಭೂಮಿಯನ್ನು ಪವರ್ ಆಫ್ ಅಟಾರ್ನಿ ಹೊಂದಿರುವವರು, ಸ್ಥಿರಾಸ್ತಿ ಏಜಂಟರು ಮತ್ತು ಮಧ್ಯವರ್ತಿಗಳು ಇದರಿಂದ 10,000 ಕೋಟಿ ರೂ.ಗಿಂತ ಹೆಚ್ಚು ಲಾಭ ಮಾಡಿಕೊಂಡಿದ್ದು, ಪಕ್ಷದ ಹೈಕಮಾಂಡ್ ಆಣತಿ ಮೇಲೆ ಏಪ್ರಿಲ್-ಮೇ ಲೋಕಸಭೆ ಚುನಾವಣೆಗೆ ಮುಂಚೆ ಕಾಂಗ್ರೆಸ್ ಸರ್ಕಾರ ಹಗರಣದಲ್ಲಿ ಕೈಹಾಕಿದೆ. ಅನೇಕ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದು, ಸಿಬಿಐ ತನಿಖೆ ಮಾತ್ರದಿಂದ ಸತ್ಯಾಂಶ ಹೊರಬರುತ್ತದೆ ಎಂದು ಶೆಟ್ಟರ್ ಆರೋಪಿಸಿದ್ದಾರೆ. 
 ಮುಂದಿನ ಪುಟ ನೋಡಿ 

ಸಿದ್ದು ತಿರುಗೇಟು 
ಶೆಟ್ಟರ್ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿ,  198 ಎಕರೆ ಭೂಮಿಯನ್ನು 2007ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಡಿನೋಟಿಫೈ ಮಾಡಿದರು.
ಬಿಜೆಪಿ ಸರ್ಕಾರ ಅರ್ಕಾವತಿ ಯೋಜನೆಯಿಂದ ನೂರಾರು ಎಕರೆಯನ್ನು ಕೈಬಿಟ್ಟಿತು. ವಿಶೇಷ ಭೂಸ್ವಾಧೀನ ಅಧಿಕಾರಿಗಳ ಶಿಫಾರಸಿನ ಮೇಲೆ ಈ ಕ್ರಮ ಕೈಗೊಂಡಿತು ಎಂದು  ಟೀಕಿಸಿದರು. 
 
ನನ್ನ ಅವಧಿಯಲ್ಲಿ ಒಂದು ಗುಂಟೆ ಜಾಗ ಕೂಡ ಡಿನೋಟಿಫೈ ಆಗಿಲ್ಲ. ನನ್ನ ವಿರುದ್ಧ ಬೆಟ್ಟು ಮಾಡಲು ನಿಮಗೆ ನೈತಿಕ ಹಕ್ಕು ಇಲ್ಲ, ನಿಮ್ಮ ಕಾಲದಲ್ಲೇ ಇವೆಲ್ಲಾ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿ ಸಿಐಡಿ ತನಿಖೆಗೆ ಸಿದ್ದವಿರುವುದಾಗಿ ನುಡಿದರು. 
 
ಪರಿಷ್ಕೃತ ಯೋಜನೆಯನ್ವಯ ಅರ್ಕಾವತಿ ಬಡಾವಣೆಯ 11,000 ನಿವೇಶನಗಳನ್ನು ನಾವು ಮಂಜೂರು ಮಾಡುತ್ತೇನೆ. ಯೋಜನೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡುವುದಿಲ್ಲ ಎಂದು ಹೇಳಿದರು. 
 
ಆದರೆ ಸಿಎಂ ಉತ್ತರದಿಂದ ಬಿಜೆಪಿ ಸದಸ್ಯರು ತೃಪ್ತರಾಗಲಿಲ್ಲ. ಹೈಕೋರ್ಟ್ ಡಿನೋಟಿಫಿಕೇಶನ್ ಮನವಿಗಳನ್ನು ಪರಿಶೀಲಿಸಿ ಎಂದು ಮಾತ್ರ ಹೇಳಿದೆ. ಎಲ್ಲ ಮನವಿಗಳಿಗೆ ಅನುಮೋದನೆ ನೀಡಿ ಎಂದು ಹೇಳಿಲ್ಲ ಎಂದು ಸದಸ್ಯರು ತಿಳಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಧರಣಿ ನಡೆಸಿದವು. ಕಾಂಗ್ರೆಸ್ ಸದಸ್ಯರು ಇದಕ್ಕೆ ತೀವ್ರ ಪ್ರತಿಭಟನೆ ಸೂಚಿಸಿದಾಗ ಸದನ ಕೋಲಾಹಲದಲ್ಲಿ ಮುಳುಗಿ ಸ್ಪೀಕರ್ ಕಾಗೋಡು ಸದನ ಮುಂದೂಡಿದರು. 
 
ಅರ್ಕಾವತಿ ಬಡಾವಣೆ ಕಥೆ
2003 ರಲ್ಲಿ ಯೋಜಿಸಿದ ನಿವೇಶನಗಳು 22,000
ಈಗ ಮಂಜೂರಾತಿಗೆ ಸಾಧ್ಯವಾಗಿರುವ ನಿವೇಶನಗಳು 11,000
2003:   3,839 ಎಕರೆ ಡಿನೋಟಿಫೈ ಮಾಡಲಾಯಿತು.
 
2003:  ತಕರಾರು ಅರ್ಜಿಗಳ ಹಿನ್ನೆಲೆಯಲ್ಲಿ 2,750 ಎಕರೆ ಮಾತ್ರ ಒಳಗೊಂಡಿತು.
2007:  ಬಿಜೆಪಿ ಸರ್ಕಾರ 198 ಎಕರೆ ಡಿನೋಟಿಫೈ ಮಾಡಿತು
 
2014:  ಪರಿಷ್ಕೃತ ಯೋಜನೆಯಲ್ಲಿ  986 ಎಕರೆ ಡಿನೋಟಿಫೈ ಮಾಡಲಾಯಿತು
 
ಇಂದು: ಬಡಾವಣೆ ಯೋಜನೆಯಲ್ಲಿ 1,766 ಎಕರೆ ಮಾತ್ರ ಒಳಗೊಂಡಿದೆ.
 
ಡಿನೋಟಿಫಿಕೇಶನ್‌ನಿಂದ ಯಾರಿಗೆ ಲಾಭ?
ನೈಜ ಪ್ರಕರಣಗಳಲ್ಲಿ ರೈತರಿಗೆ ಲಾಭ. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಭೂ ಅಭಿವೃದ್ಧಿದಾರರು, ಕಟ್ಟಡ ನಿರ್ಮಾಣಕಾರರು, ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮತ್ತು ಸ್ಥಿರಾಸ್ತಿ ಮಾಫಿಯಾಗೆ ಲಾಭವಾಗಲಿದೆ. 
 

Share this Story:

Follow Webdunia kannada