ಬೆಂಗಳೂರು: ಇತ್ತೀಚೆಗೆ ನಟ ಅನಿರುದ್ಧ ಜತ್ಕಾರ್ ಶಿವಮೊಗ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ತುಂಗಾ ನದಿ ಅಸ್ವಚ್ಛವಾಗಿರುವ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆದಿದ್ದರು. ಇದೀಗ ಈ ವಿಚಾರವಾಗಿ ಅವರಿಗೆ ಸಿಎಂ ಸಿದ್ದರಾಮಯ್ಯನವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.
ಶಿವಮೊಗ್ಗದಲ್ಲಿ ತುಂಬಾ ನದಿ ತುಂಬಾ ಅಸ್ವಚ್ಛವಾಗಿದ್ದು, ಕೊಳಚೆ ನೀರು ಬಂದು ಸೇರುತ್ತಿದೆ. ನದಿಯ ತುಂಬಾ ಕಸ ಕಡ್ಡಿಗಳು ತುಂಬಿ ಮಲಿನವಾಗಿದೆ. ಈ ಜಾಗ ಕೊಂಪೆಯಂತೆ ಕೆಟ್ಟ ವಾಸನೆ ಬರುತ್ತಿದೆ. ಇದೇ ನೀರನ್ನು ಮಂತ್ರಾಲಯದಲ್ಲಿ ರಾಯರ ದರ್ಶನ ಮಾಡುವಾಗ ಕಣ್ಣಿಗೊತ್ತಿಕೊಂಡು ಸೇವಿಸುತ್ತೇವೆ ಎಂದು ಅನಿರುದ್ಧ ಬೇಸರ ವ್ಯಕ್ತಪಡಿಸಿದ್ದರು.
ಈ ಬಗ್ಗೆ ನಟ ಅನಿರುದ್ಧ ವಿಡಿಯೋ ಮಾಡಿ ಸುಮ್ಮನಾಗಲಿಲ್ಲ. ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಲ್ಲದೆ, ಅಲ್ಲಿನ ಅಸ್ವಚ್ಛತೆ ಬಗ್ಗೆ ವಿಡಿಯೋ ಸಮೇತ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ. ಇದನ್ನು ನೋಡಿದ ಮುಖ್ಯಮಂತ್ರಿಗಳು ತಕ್ಷಣವೇ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ ನದಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ತ್ಯಾಜ್ಯ ನೀರು ನದಿಗೆ ಸೇರ್ಪಡೆಯಾಗುತ್ತಿದೆ. ಇದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಅನಿರುದ್ಧ್ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಷ್ಟೇ ಅಲ್ಲ ಈ ವಿಚಾರವನ್ನು ಮುಖ್ಯಮಂತ್ರಿಗಳ ಕಚೇರಿ ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ಪ್ರಕಟಿಸಿದ್ದಾರೆ.
ನಟ ಅನಿರುದ್ಧ ಕಳೆದ ಕೆಲವು ಸಮಯದಿಂದ ಸ್ವಚ್ಛತೆಗೆ ನಾನೂ ಸಹಭಾಗಿ ಎಂಬ ಅಭಿಯಾನ ನಡೆಸುತ್ತಲೇ ಇದ್ದಾರೆ. ಮುಖ್ಯವಾಗಿ ಬೆಂಗಳೂರಿನ ಅಸ್ವಚ್ಛವಾದ ಪ್ರದೇಶಗಳ ಬಗ್ಗೆ ಬಿಬಿಎಂಪಿ ಗಮನ ಸೆಳೆದು ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಇದೀಗ ಅವರು ತುಂಗಾ ನದಿಯ ಸ್ವಚ್ಛತೆಗೆ ಮುಖ್ಯಮಂತ್ರಿಗಳನ್ನೇ ಭೇಟಿ ಮಾಡಿ ತಮ್ಮಿಂದಾದ ಪ್ರಯತ್ನ ನಡೆಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.