Select Your Language

Notifications

webdunia
webdunia
webdunia
webdunia

ಜಾತ್ಯತೀತ ಮತಗಳು ವಿಭಜನೆ ಪಕ್ಷದ ಸೋಲಿಗೆ ಕಾರಣ: ಖರ್ಗೆ

ಜಾತ್ಯತೀತ ಮತಗಳು ವಿಭಜನೆ ಪಕ್ಷದ ಸೋಲಿಗೆ ಕಾರಣ: ಖರ್ಗೆ
ಕಲಬುರ್ಗಿ , ಸೋಮವಾರ, 20 ಅಕ್ಟೋಬರ್ 2014 (14:25 IST)
ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಜತೆಗಿನ ಮೈತ್ರಿ ಮುರಿದುಕೊಂಡದ್ದು ಹಾಗೂ ಹರಿಯಾಣದಲ್ಲಿ ಚುನಾವಣಾ ಸಂದರ್ಭದಲ್ಲಿ ಹಲವು ನಾಯಕರು ಪಕ್ಷ ತೊರೆದದ್ದು ಕಾಂಗ್ರೆಸ್‌ ಹಿನ್ನಡೆಗೆ ಕಾರಣವಾಗಿದೆ ಎಂದು ಮಹಾರಾಷ್ಟ್ರ ಚುನಾವಣೆಯ ಟಿಕೆಟ್‌ ಹಂಚಿಕೆ ಉಸ್ತುವಾರಿ ವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. 
 
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಜತೆಗಿನ ಮೈತ್ರಿ ಮುರಿದು ಕೊಂಡಿದ್ದರಿಂದ ಜಾತ್ಯತೀತ ಮತಗಳು ವಿಭಜನೆಯಾಗಿವೆ. ಇದು ಪಕ್ಷದ ಸೋಲಿಗೆ ಪ್ರಮುಖ ಕಾರಣವಾಯಿತು. ಹರಿಯಾಣದಲ್ಲಿ ಚುನಾವಣಾ ಸಂದರ್ಭದಲ್ಲಿ ಹಲವು ನಾಯಕರು ಪಕ್ಷ ಬಿಟ್ಟು ಹೋದರು. ಹೀಗಾಗಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಚುನಾವಣೆ ಸೋಲಿಗೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ದೂಷಿಸುವುದು ಸರಿಯಲ್ಲ. ಸೋನಿಯಾ, ರಾಹುಲ್‌ ನೇತೃತ್ವದಲ್ಲಿ ಎರಡು ಬಾರಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದನ್ನು ಯಾರೂ ಮರೆಯಬಾರದು. ಕಾಂಗ್ರೆಸ್‌ನಲ್ಲಿ ಕೆಲವು ಮುಖಂಡರು ಈ ಇಬ್ಬರು ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ, ಅವರೂ ಸಹ ಸೋನಿಯಾ, ರಾಹುಲ್‌ ಶಕ್ತಿಯಿಂದಲೇ ಬೆಳೆದವರು ಎನ್ನೊದನ್ನು ಮರೆತಿದ್ದಾರೆ ಎಂದು ಛೇಡಿಸಿದರು. 
 
ಪ್ರಿಯಾಂಕಾ ಗಾಂಧಿ ಅವರನ್ನು ಸಕ್ರೀಯ ರಾಜಕಾರಣಕ್ಕೆ ಬರಬೇಡಿ ಎಂದು ಯಾರೂ ಹೇಳಿಲ್ಲ. ಅವರೇ ರಾಜಕೀಯ ಇಚ್ಛೆ ಇಲ್ಲ ಎಂದಿದ್ದಾರೆ. ಹಾಗಾಗಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪಕ್ಷವನ್ನು ಪುನಃ ಶಕ್ತಿಶಾಲಿಯಾಗಿ ಬೆಳೆಸುತ್ತೇವೆ. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಬಿಜೆಪಿ ಸುಳ್ಳನ್ನೇ ಸತ್ಯವನ್ನಾಗಿಸಿ ಜನತೆಯನ್ನು ನಂಬಿಸುತ್ತಿದೆ. ಇದು ಕೆಲ ಕಾಲ ಮಾತ್ರ ನಡೆಯಬಹುದು. ಎಲ್ಲರನ್ನೂ ಎಲ್ಲ ಸಂದರ್ಭದಲ್ಲೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎನ್ನುವುದು ಮುಂದಿನ ದಿನಗಳಲ್ಲಿ ಬಿಜೆಪಿಯವರಿಗೆ ಅರ್ಥವಾಗಲಿದೆ ಎಂದರು.

Share this Story:

Follow Webdunia kannada