Select Your Language

Notifications

webdunia
webdunia
webdunia
webdunia

ಹೆಬ್ಬಾಳದಲ್ಲಿ ಭೀಕರ ಅಪಘಾತ: ಇಬ್ಬರ ಸಾವು, ಐವರಿಗೆ ಗಾಯ

ಹೆಬ್ಬಾಳದಲ್ಲಿ ಭೀಕರ ಅಪಘಾತ: ಇಬ್ಬರ ಸಾವು, ಐವರಿಗೆ ಗಾಯ
ಬೆಂಗಳೂರು , ಗುರುವಾರ, 26 ಫೆಬ್ರವರಿ 2015 (16:48 IST)
ನೀರಿನ ಟ್ಯಾಂಕರ್‌ವೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆದು ಬಳಿಕ ರಸ್ತೆ ದಾಟುತ್ತಿದ್ದ ಪಾದಚಾರಿಗಳ ಮೇಲೆ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೆಬ್ಬಾಳದ ಕೆಂಪಾಪುರ ಜಂಕ್ಷನ್ ಬಳಿಯ ದೇವನಹಳ್ಳಿ-ಬೆಂಗಳೂರು ಮುಖ್ಯ ರಸ್ತೆಯಲ್ಲಿ ಜರುಗಿದೆ.  
 
ಘಟನೆಯಲ್ಲಿ ಮೃತಪಟ್ಟವರನ್ನು ದ್ವಿಚಕ್ರ ವಾಹನ ಚಾಲಕ ಆನಂದ್(25) ಹಾಗೂ ಪಾದಚಾರಿ ಅರ್ಪಿತಾ(19) ಎನ್ನಲಾಗಿದ್ದು, ಮೃತ ಯುವತಿ ದೇವನಹಳ್ಳಿ ಮೂಲದವಳು ಎಂದು ತಿಳಿದು ಬಂದಿದೆ. ಇನ್ನು ಘಟನೆಯಲ್ಲಿ ಇಲ್ಲಿನ ಸಿಂಧಿಶ್ರೀ ಕಾಲೇಜಿನ ವಿದ್ಯಾರ್ಥಿಗಳಾದ ಕುಸುಮಾಶ್ರೀ ಮತ್ತು ಅಕ್ಷತಾ ಎಂಬ ಯುವತಿಯರೂ ಸೇರಿ ಒಟ್ಟು ಐವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಎಂ.ಎಸ್.ರಾಮಯ್ಯ ಮತ್ತು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 
 
ಘಟನೆಗೆ ಕಾರಣನಾದ ನೀರಿನ ಟ್ಯಾಂಕರ್ ಚಾಲಕ ಯತೀಶ್ ಬಾಬು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಪಘಾತ ಸಂಭವಿಸಿದರೂ ನಿಲ್ಲಿಸದೆ ಪರಾರಿಯಾಗಲು ಯತ್ನಿಸುತ್ತಿದ್ದ. ಆದರೆ ತಕ್ಷಣವೇ ಆತನನ್ನು ಹಿಂಬಾಲಿಸಿ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ ಆರೋಪಿ ಚಾಲಕನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ತಾನೇ ವೇಗವಾಗಿ ಚಾಲನೆ ಮಾಡುತ್ತಾ ಬರುತ್ತಿದ್ದೆ. ಈ ಕಾರಣದಿಂದ ನಿಯಂತ್ರಣಕ್ಕೆ ಬಾರದೆ ಲಾರಿಯನ್ನು ಪಾದಚಾರಿಗಳ ಮೇಲೆ ಹರಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.  
 
ಘಟನೆ ವಿವರ: ದೇವನಹಳ್ಳಿ ಕಡೆಯಿಂದ ಬರುತ್ತಿದ್ದ ನೀರಿನ ಟ್ಯಾಂಕರ್ ಲಾರಿಯು ವೇಗವಾಗಿ ಬರುತ್ತಿದ್ದಾಗ ಮುಂದೆ ಚಲಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅದೇ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದ ಪಾದಚಾರಿಗಳ ಮೇಲೂ ಹರಿದಿದೆ. ಈ ಪರಿಣಾಮ ಇಬ್ಬರು ಸಾವನ್ನಪ್ಪಿ, ಇತರೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. 
 
ಈ ಅಪಘಾತದ ಸಂಪೂರ್ಣ ದೃಶ್ಯ ಪೊಲೀಸ್ ಇಲಾಖೆ ಸುರಕ್ಷತೆಗಾಗಿ ಇಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣವನ್ನು ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Share this Story:

Follow Webdunia kannada