ಕಾರವಾರ: ಎಲ್ಲಾ ಸರಿ ಹೋಗಿದ್ದರೆ ಇಂದು ಕುಮಟಾದಲ್ಲಿ ಬುಧವಾರದ ಸಂತೆಯಲ್ಲಿ ಕುಳಿತು ತಾವು ಬೆಳ್ಳಂ ಬೆಳಿಗ್ಗೆಯೇ ತಂದ ತರಕಾರಿಗಳನ್ನು ಹರವಿ ಕುಳಿತುಕೊಂಡು ಮಾರಾಟದ ಭರಾಟೆಯಲ್ಲಿ ತೊಡಗಿಕೊಳ್ಳಬೇಕಿತ್ತು. ಅವರಿಗೆ ಇದು ಹೊಟ್ಟೆ ಪಾಡು. ಜೊತೆಗೆ ತರಕಾರಿ ತುಂಬಿಕೊಂಡು ಬೆಳಿಗ್ಗೆಯೇ ಎಲ್ಲರೂ ಒಟ್ಟಾಗಿ ಒಂದೇ ಲಾರಿಯಲ್ಲಿ ನಗು, ಹರಟೆ ಹೊಡೆಯುತ್ತಾ ಬರುವುದೇ ಅವರ ನಿತ್ಯದ ಕಾಯಕ.
ಆದರೆ ಇಂದು ಅದೇನಾಯಿತೋ ಗೊತ್ತಿಲ್ಲ ಗುಳ್ಳಾಪುರದಲ್ಲಿ ಇನ್ನೇನು ಘಾಟಿ ರಸ್ತೆ ಮುಗಿದರೆ ಒಂದು ಹನುಮಂತನ ದೇವಸ್ಥಾನ ಬರುತ್ತದೆ. ಬಹುಶಃ ಅದಕ್ಕೆ ಮೊದಲೇ ಅದೇನಾಯ್ತೋ ಲಾರಿ ಪಲ್ಟಿಯಾಗಿಬಿಟ್ಟಿದೆ.
ವಾರಕ್ಕೊಮ್ಮೆ ಆಗದಿದ್ದರೂ, 15 ದಿನಕ್ಕೊಮ್ಮೆಯಾದರೂ ಹೊತ್ತುಕೊಂಡು ಬರಲಾಗದಷ್ಟು ತರಕಾರಿ ಹೊತ್ತು ತರಲು ಕುಮಟಾ, ಗೋಕರ್ಣ ಅಥವಾ ಪಕ್ಕದ ಮಿರ್ಜಾನ್ ಹೋಗೋದು ಇದ್ದಿದ್ದೆ. ನಮ್ಮಂತಹ ಸಸ್ಯಾಹಾರಿಗಳಿಗೆ ಸಂತೆ ಅನಿವಾರ್ಯ.
ಕಳೆದ 15 ದಿನಗಳ ಹಿಂದೆ ಪಶು ಆಸ್ಪತ್ರೆಗೆಂದು ನಸುಕಿನ ಜಾವ 6.30ಕ್ಕೆ ಮಿರ್ಜಾನ್ ಹೋದಾಗ, ಎದೆ ನಡುಗಿಸುವ ಚಳಿಯಲ್ಲಿ ಬಯಲಲ್ಲಿ ಮಲಗಿದ್ದ ರೈತರನ್ನು, ವ್ಯಾಪಾರಿಗಳನ್ನು ನೋಡಿ ಕರುಳು ಹಿಂಡಿದಂತಾಗಿತ್ತು. ಬುಧವಾರ ಕುಮಟಾ, ಗುರುವಾರ ಗೋಕರ್ಣ, ಶುಕ್ರವಾರ ಮಿರ್ಜಾನ್, ಶನಿವಾರ ಅಂಕೋಲಾ, ರವಿವಾರ ಕಾರವಾರ- ಹೀಗೆ ಉಳಿದ ವಾರ ಮತ್ತೆಲ್ಲೆಲ್ಲಿ ಹೋಗುವವರೋ ಅವರು! ಬರುವ ವ್ಯಾಪಾರಿಗಳಲ್ಲಿ ಹೆಚ್ಚಿನವರು ಮುಸ್ಲಿಂ ಸಮುದಾಯದವರು.
ಹೊಟ್ಟೆಪಾಡಿಗಾಗಿ, ನಿದ್ದೆಗೆಟ್ಟು ಅದೆಷ್ಟೋ ಕಷ್ಟಗಳನ್ನು ಸಹಿಸಿ ನಮ್ಮ ಹೊಟ್ಟೆ ತುಂಬಿಸಲು ದೂರದೂರದಿಂದ ಬರುತ್ತಿದ್ದ ರೈತರು, ವ್ಯಾಪಾರಿಗಳು ನಮ್ಮಲ್ಲಿ ಒಂದಾಗಿ ನಮ್ಮವರೇ ಆಗಿಬಿಟ್ಟಿದ್ದರು. ಎಂದಿನಂತೆ ನಿನ್ನೆ ಸಹ ಒಂದಷ್ಟು ಸಂಪಾದಿಸಿಕೊಂಡು ಹೋಗೋಣ ಎಂದು ರೊಟ್ಟಿ ಬುತ್ತಿ ಕಟ್ಟಿಕೊಂಡು ಮೂಟೆಯ ಮೇಲೆ ಕುಳಿತು ಹೊರಟವರಲ್ಲಿ ಕೆಲವರು ತೂಕಡಿಸುತ್ತಿದ್ದಿರಬೇಕು. ಬದುಕಿನ ಬಹುತೇಕ ಭಾಗ ಅವರ ನಿದ್ದೆ ಪ್ರಯಾಣ ಅಥವಾ ಬೀದಿಯಲ್ಲೇ ಆಗಿರುವುದರಿಂದ ಮತ್ತೆ ಹಲವರು ಗಾಢ ನಿದ್ದೆಯಲ್ಲಿದ್ದಿರಬೇಕು. ಆದರೆ... ವಿಧಿಯ ಕ್ರೂರ ಆಟ ಬೇರೆಯದ್ದೇ ಇತ್ತು.
ನಮಗಾಗಿ ಬರುತ್ತಿದ್ದ ಅವರು ಇನ್ನೆಂದೂ ಬಾರದ ಲೋಕಕ್ಕೆ ಹೋಗುವ ದಿನಗಳು ಕಾದಿವೆ ಎಂಬುದನ್ನು ನಾವು ಮತ್ತೆ ಅವರು ಕೂಡ ಊಹಿಸಿರಲಿಕ್ಕಿಲ್ಲ. ಆದರೆ ನಡೆಯಬಾರದ್ದು ನಡೆದು ಹೋಗಿದೆ. ಕುಮಟಾ ಸಂತೆಗೆಂದು ಬರುತ್ತಿದ್ದಾಗ, ಅರಬೈಲ್ ಘಾಟ್‌ನಲ್ಲಿ ಹಿರಿಕಿರಿಯರೆನ್ನದೆ ಹಲವರು ಜೀವನ ಸಂತೆಯನ್ನೇ ಮುಗಿಸಿ ಮಲಗಿದ್ದಾರೆ. ದೂರದ ಸವಣೂರವರು, ಪಕ್ಕದ ಯಲ್ಲಾಪುರದ ಬಳಿ ಉಸಿರು ಚೆಲ್ಲಿದರೆ, ಸಂಪೂರ್ಣ ಕುಮಟಾಕ್ಕೆ ಸೂತಕ ಬಡಿದಂತಾಗಿದೆ..
ಇದು ನಿಜಕ್ಕೂ ಎದೆ ಒಡೆಯುವಂತಹ ದುರಂತ. ಚಳಿ, ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೇ, ಏನೇನೋ ತಮಾಷೆಯಾಗಿ ಕೂಗುತ್ತ ವ್ಯಾಪಾರ ಮಾಡಿಕೊಂಡು ಮನೆಗೆ ಮರಳುತ್ತಿದ್ದವರು ಕಣ್ಣ ಮುಂದೆ ಬಂದು ನಿಂತ, ಕೂಗಿದ ಭಾವ. ಫ್ರೀ ಫ್ರೀ ಫ್ರೀ. ಇಲ್ಲಿ ಒಂದು ಕೆಜಿ ತರಕಾರಿ ಟೊಮೆಟೊಗೆ ಮತ್ತೊಂದು ಕೆಜಿ ಫ್ರೀ; ಗ್ಯಾರಂಟಿ ಗ್ಯಾರಂಟಿ ಗ್ಯಾರಂಟಿ- ಹೀಗೆ ಏನೇನೋ ಹೇಳುತ್ತ ದಣಿವರಿಯದೆ ದುಡಿಯುತ್ತಿದ್ದವರ ಧ್ವನಿ, ಮುಖ ಇನ್ನು ನೆನಪಷ್ಟೇ. ನಮ್ಮೂರಿಗೆ, ನಮಗಾಗಿ ಬರಬೇಕಾದರೆ ಹೀಗೆ ಆಗಿದ್ದು ನಿಜಕ್ಕೂ ತೀರ ಪಶ್ಚಾತಾಪಕ್ಕೆ ದೂಡುತ್ತಿದೆ. ಅವರ ಬೆವರ ಹನಿ, ನಮ್ಮ ಹೊಟ್ಟೆಯ ತಣ್ಣಗಾಗಿರಿಸುತ್ತಿತ್ತು. ಮತ್ತೀಗ ಅವರ ನಂಬಿದವರ ಹೊಟ್ಟೆ ಎಷ್ಟು ತಣ್ಣಗಿರಲು ಸಾಧ್ಯ? ಇಲ್ಲವಾದವರ, ಅವರ ಕುಟುಂಬದವರ ನೆನಸಿಕೊಂಡರೆ ಎದೆ ಝಲ್ ಎನ್ನುತ್ತಿದೆ....
ಕಳೆದ ಗುರುವಾರ ಗೋಕರ್ಣ ಸಂತೆಯಿಂದ ನಮ್ಮಕ್ಕ ಹೊತ್ತು ತಂದ ತರಕಾರಿಗಳು ಮನೆಯಲ್ಲಿ ಇನ್ನೂ ಇವೆ. ಆದರೆ ಅವರಿಲ್ಲ. ನಿಜಕ್ಕೂ ಅರಗಿಸಿಕೊಳ್ಳಲಾಗುತ್ತಿಲ್ಲ.
ಹೇಳಲು ಪದಗಳಿಲ್ಲ, ಔಪಚಾರಿಕತೆಯಿಂದ ಹೇಳೋಕೆ ಉಳಿದಿರೋದು ಇಷ್ಟೇ... ಅವರು ನಂಬಿರುವ ಅಲ್ಲಾ, ಅವರ ಆತ್ಮಕ್ಕೆ ಶಾಂತಿ ನೀಡಲಿ...