Select Your Language

Notifications

webdunia
webdunia
webdunia
webdunia

ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಕಾಂಗ್ರೆಸ್‌ನ 27 ಸಂಸದರು ಅಮಾನತು

ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಕಾಂಗ್ರೆಸ್‌ನ 27 ಸಂಸದರು ಅಮಾನತು
ನವದೆಹಲಿ , ಸೋಮವಾರ, 3 ಆಗಸ್ಟ್ 2015 (16:37 IST)
ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಸದನದಲ್ಲಿ ಗದ್ದಲ ಎಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸಿದರು ಎಂಬ ಕಾರಣದಿಂದ ಕಾಂಗ್ರೆಸ್ ಪಕ್ಷದ 27 ಮಂದಿ ಸಂಸದರನ್ನು ಲೋಕಸಭಾ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಇಂದು ಐದು ದಿನಗಳ ಕಾಲ ಅಮಾನತುಗೊಳಿಸಿ ಆದೇಶಿಸಿದ್ದಾರೆ. 
 
ಇಂದು ಮಧ್ಯಾಹ್ನ ನಡೆಯುತ್ತಿದ್ದ ಕಲಾಪ ವೇಳೆಯಲ್ಲಿ ಅಮಾನತುಪಡಿಸಿದ ಸಭಾಧ್ಯಕ್ಷೆ, ಅಮಾನತುಗೊಂಡ ಕಾಂಗ್ರೆಸ್‌ನ ಎಲ್ಲಾ ಸದಸ್ಯರ ಹೆಸರುಗಳನ್ನು ಪ್ರಕಟಿಸಿದರು. ಅಲ್ಲದೆ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಸದನದ ಕಲಾಪಕ್ಕೆ ಅಡ್ಡಿಯುಂಟು ಮಾಡಿದ ಕಾರಣದಿಂದ ಇವರೆಲ್ಲರನ್ನೂ ಐದು ದಿನಗಳ ಕಾಲ ಅಮಾನತುಗೊಳಿಸುತ್ತಿದ್ದೇನೆ ಎಂಬುದಾಗಿ ಘೋಷಿಸಿದರು. 
 
ಕಾಂಗ್ರೆಸ್‌ನ ಒಟ್ಟು 44 ಸದಸ್ಯರ ಪೈಕಿ 27 ಮಂದಿ ಅಮಾನತಾಗಿರುವ ಹಿನ್ನೆಲೆಯಲ್ಲಿ ಸದನದಲ್ಲಿ ಕೇವಲ 17 ಮಂದಿ ಸಂಸದರು ಮಾತ್ರ ಭಾಗವಹಿಸಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಹಲವು ಬೇಡಿಕೆಗಳನ್ನು ತಮ್ಮ ಹೋರಾಟದ ಮೂಲಕ ಈಡೇರಿಸಿಕೊಳ್ಳಬೇಕು ಎಂದಿದ್ದ ಕಾಂಗ್ರೆಸ್‌ಗೆ ಕಂಟಕ ಎದುರಾದಂತಾಗಿದೆ. 
 
ಲಲಿತ್ ಮೋದಿಗೆ ವೀಸಾ ನೀಡಿದ ಪ್ರಕರಣದಲ್ಲಿ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾಗಿಯಾಗಿದ್ದಾರೆ. ಆದ್ದರಿಂದ ಅವರು ನಿರ್ವಹಿಸುತ್ತಿರುವ ಸ್ಥಾನಗಳಿಗೆ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸುತ್ತಿದ್ದ ಕಾಂಗ್ರೆಸ್ ಸದಸ್ಯರು, ಇಂದು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಸದನದಲ್ಲಿ ಭಿತ್ತಿ ಪತ್ರಗಳನ್ನಿಡಿದು ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಈ ರೀತಿಯ ಕ್ರಮ ಕೈಗೊಂಡಿದ್ದಾರೆ.  
 
ಇನ್ನು ರಾಜಕೀಯ ತಜ್ಞರು ಸಭಾಧ್ಯಕ್ಷರ ಈ ನಿರ್ಧಾರವನ್ನು ಟೀಕಿಸಿದ್ದು, ಸರ್ಕಾರಕ್ಕೆ ಎದುರಾಳಿ ಪ್ರಬಲ ಪಕ್ಷವಾಗಿ ಕಾಂಗ್ರೆಸ್ ಇತ್ತು. ಆದರೆ ಕಾಂಗ್ರೆಸ್ ಸದಸ್ಯರಲ್ಲಿ ಅರ್ಧದಷ್ಟು ಜನರನ್ನು ಪ್ರಸ್ತುತ ಅಮಾನತುಗೊಳಿಸಲಾಗಿದೆ. ತಮಗೆ ಬೇಕಾದಂತಹ ಮಸೂದೆಗಳನ್ನು ಮಂಡಿಸಿಕೊಳ್ಳಲು ಈ ತಂತ್ರ ರೂಪಿಸಲಾಗಿದೆ ಎನ್ನುತ್ತಿದ್ದಾರೆ. ಅಲ್ಲದೆ ಈ ಹಿಂದೆ ಯಾವ ಸಭಾಧ್ಯಕ್ಷರೂ ಕೂಡ ಇಂತಹ ನಿರ್ಧಾರಗಳನ್ನು ಕೈಗೊಂಡಿರಲಿಲ್ಲ. ಪ್ರತಿಪಕ್ಷಗಳನ್ನು ಹೊರಗಿಟ್ಟು ಕಲಾಪ ನಡೆಸುವುದು ಎಷ್ಟು ಸರಿ. ಇದು ಪ್ರಜಾಪ್ರಭುತ್ವ ರಾಷ್ಟ್ರದ ಆಡಳಿತ ಲಕ್ಷಣವೇ ಎಂದು ಗುನುಗುತ್ತಿದ್ದಾರೆ. ಅಮಾನತಿಗೊಳಗಾದ ಸದಸ್ಯರಲ್ಲಿ ರಾಜ್ಯದ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಅವರೂ ಕೂಡ ಇದ್ದಾರೆ. 

Share this Story:

Follow Webdunia kannada