Select Your Language

Notifications

webdunia
webdunia
webdunia
webdunia

2ನೇ ಹಂತ-ಮತಪೆಟ್ಟಿಗೆ ಸೇರಿದ ಹಣೆಬರಹ;ವಾಮಚಾರ,ಬಹಿಷ್ಕಾರ

2ನೇ ಹಂತ-ಮತಪೆಟ್ಟಿಗೆ ಸೇರಿದ ಹಣೆಬರಹ;ವಾಮಚಾರ,ಬಹಿಷ್ಕಾರ
ಬೆಂಗಳೂರು , ಶುಕ್ರವಾರ, 31 ಡಿಸೆಂಬರ್ 2010 (20:51 IST)
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಯ ಎರಡನೇ ಹಂತದ ಮತದಾನ ರಾಜ್ಯದ 17 ಜಿಲ್ಲೆಗಳಲ್ಲಿ ಶುಕ್ರವಾರ ಸಣ್ಣ-ಪುಟ್ಟ ಘಟನೆಗಳ ಹೊರತಾಗಿ ಬಹುತೇಕ ಶಾಂತಿಯುತವಾಗಿ ನಡೆಯಿತು. ಒಟ್ಟಾರೆ ಶೇ.67ರಷ್ಟು ಮತದಾನವಾಗಿರುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಮತದಾನ ಮಂದಗತಿಯಲ್ಲೇ ಸಾಗಿತ್ತು. ಮಧ್ಯಾಹ್ನದ ನಂತರ ಮತದಾನ ಪ್ರಕ್ರಿಯೆ ಬಿರುಸುಗೊಂಡಿತ್ತು. ಸುಮಾರು 1.54 ಕೋಟಿ ಮತದಾರರು ಇಂದಿನ ಮತದಾನದಲ್ಲಿ 9,595 ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ದೋಣಿಮಲೆಯಲ್ಲಿ ಕಾಂಗ್ರೆಸ್ ಶಾಸಕ ತುಕಾರಾಂ ಅವರ ಮೇಲೆ ಹಲ್ಲೆಗೆ ಯತ್ನ, ರಾಜಕೀಯ ಕಾರ್ಯಕರ್ತರ ನಡುವೆ ಘರ್ಷಣೆ, ಹಣ, ಹೆಂಡ, ಕೋಳಿ ಹಂಚಿಕೆ, ಮತದಾರರಿಗೆ ಹಣ ಹಂಚಲು ಯತ್ನಿಸುತ್ತಿದ್ದ ಹತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ಲಕ್ಷಾಂತರ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನುಳಿದಂತೆ ಮತದಾನ ಬಹಿಷ್ಕಾರ, ಮತಯಂತ್ರಗಳ ದೋಷ, ಮತಗಟ್ಟೆಯಲ್ಲೇ ಮತ ಕೇಳುವ ಕಾರ್ಯಕರ್ತರು, ಹಲ್ಲೆ, ಘರ್ಷಣೆ ಎರಡನೇ ಹಂತದ ಮತದಾನದ ವೇಳೆಯಲ್ಲೂ ತಪ್ಪದ ವಾಮಚಾರದ ಕಾಟ, ಮತದಾರರಿಗೆ ಹಂಚಲು ತಂದಿದ್ದ ಕೋಳಿ, ಹೆಂಡ ವಶ, ಆಮಿಷ, ಆರ್ಭಟಗಳ ಮಧ್ಯೆ 17 ಜಿಲ್ಲೆಗಳಲ್ಲಿನ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಘಟಾನುಘಟಿಗಳ ಪ್ರತಿಷ್ಠೆಯ ಕಣವಾಗಿದ್ದ ಎರಡನೇ ಹಂತದಲ್ಲಿ ಮತದಾರ ಹುಮ್ಮಸ್ಸು ತೋರಿದ್ದ. ಭಾರೀ ಬಂದೋಬಸ್ತ್ ಮಾಡಿಕೊಂಡ ಪರಿಣಾಮ ಹೆಚ್ಚಿನ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ಬಿಜಾಪುರ ಜಿಲ್ಲೆಯ ನಿಡೋಣಿಯಲ್ಲಿ ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದೆ ಎಂದು ಆಕ್ರೋಶಗೊಂಡ ಮತದಾರರು ಮತಗಟ್ಟೆ ಬಳಿ ಪ್ರತಿಭಟನೆ ನಡೆಸಿದ್ದರಿಂದ ಅಲ್ಲಿ ಮತದಾನ ಕೆಲಕಾಲ ಸ್ಥಗಿತಗೊಂಡಿತ್ತು.

ಮೈಸೂರು ಜಿಲ್ಲೆಯ ಇಣಕಲ್ ಗ್ರಾಮದಲ್ಲೂ ಇದೇ ರೀತಿಯ ಘಟನೆಗಳು ನಡೆದಿದ್ದು, ಮತಪಟ್ಟಿಯಿಂದ ಹೆಸರು ಕಾಣೆಯಾಗಿರುವುದಕ್ಕೆ ಆಕ್ರೋಶಗೊಂಡ ಮತದಾರರು ಮತಗಟ್ಟೆ ಮುಂದೆ ಪ್ರತಿಭಟನೆ ನಡೆಸಿದ ಪರಿಣಾಮ ಅವರನ್ನು ಸಮಾಧಾನಪಡಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು.

ಮಂಡ್ಯ ಜಿಲ್ಲೆಯ ಬೊಮ್ಮನಹಳ್ಳಿಯಲ್ಲಿ ಮತಗಟ್ಟೆ ಅಧಿಕಾರಿಯೊಬ್ಬರು ಜೆಡಿಎಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿದ್ದಾರೆ ಎಂದು ರಾಜಕೀಯ ಪಕ್ಷಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು.

ಮೈಸೂರು ಜಿಲ್ಲೆಯ ಸಿದ್ದರಾಮನ ಹುಂಡಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಮತ ಚಲಾಯಿಸಿದರು. ನಾಗಮಂಗಲ ತಾಲೂಕಿನ ಇಜ್ಜಲಘಟ್ಟದಲ್ಲಿ ಸಂಸದ ಚಲುವರಾಯ ಸ್ವಾಮಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಹಾಕಿದರು.

ಹನಕೆರೆಯಲ್ಲಿ ಶಾಸಕ ಶ್ರೀನಿವಾಸ್, ಪಾಂಡವಪುರ ತಾಲೂಕಿನ ಚಿನಕುರಳಿ ಮತಕೇಂದ್ರದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು, ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಹನಕೆರೆ ಗ್ರಾಮದಲ್ಲಿ ಮತ ಚಲಾಯಿಸಿದರು. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ಇಂದು ಮತದಾನ ನಡೆಯಿತು.

Share this Story:

Follow Webdunia kannada