ಮತ್ತೊಂದೆಡೆ ದೆಹಲಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ದಂಡೇ ನೆರೆದಿದೆ.. ಸುಮಾರು 50ಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳು ನವದೆಹಲಿ ತಲುಪಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ರಾಜಧಾನಿಯಲ್ಲಿ ಠಿಕಾಣಿ ಹೂಡಿರುವ ಆಕಾಂಕ್ಷಿಗಳು ಟಿಕೆಟ್ಗಾಗಿ ಇನ್ನಿಲ್ಲದ ಲಾಭಿ ನಡೆಸುತ್ತಿದ್ದಾರೆ.. ಈ ಮಧ್ಯೆ ರಾಜಾಜಿನಗರದಲ್ಲಿ BJPಯಿಂದ ವಲಸೆ ಬಂದ MLC ಪುಟ್ಟಣ್ಣಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದೆಂದು ಕೈ ನಾಯಕಿ ಭವ್ಯ ನರಸಿಂಹಮೂರ್ತಿ ನೇತೃತ್ವದಲ್ಲಿ ಲಾಭಿ ನಡೆಯುತ್ತಿದೆ. ಚಿಕ್ಕಪೇಟೆಯಲ್ಲಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಟಿಕೆಟ್ ಕೊಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಈ ಮಧ್ಯೆ ಲಿಂಗಾಯತ ಮುಖಂಡರಿಗೆ ಪ್ರಾತಿನಿಧ್ಯ ನೀಡಬೇಕೆಂದು ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಹಲವು ನಾಯಕರು ಪಟ್ಟು ಹಿಡಿದಿರುವುದು ಕೈ ನಾಯಕರಿಗೆ ತಲೆ ನೋವಾಗಿದೆ.