Webdunia - Bharat's app for daily news and videos

Install App

ಲೋಕಸಭೆ ಚುನಾವಣೆ: ಸುರಕ್ಷಿತ ಕ್ಷೇತ್ರದತ್ತ ಡಿವಿಎಸ್ ಚಿತ್ತ

Webdunia
ಸೋಮವಾರ, 22 ಜುಲೈ 2013 (14:10 IST)
PR
ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಕಾಲಿಡುತ್ತಿದ್ದಾರೆ.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸದಾನಂದಗೌಡ ಅವರು ತೀರ್ಮಾನಿಸಿದ್ದು, ಇದಕ್ಕೆ ಪಕ್ಷವೂ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಲೋಕಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದ್ದರೂ ಈಗಿನಿಂದಲೇ ಸದಾನಂದಗೌಡ ಅವರು ಮೈಸೂರು ವಿಭಾಗದಲ್ಲಿ ಚಟುವಟಿಕೆಯಿಂದ ಓಡಾಡುತ್ತಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ, ಮಂಗಳೂರು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಒಂದು ಬಾರಿ ಲೋಕಸಭೆಗೆ ಪ್ರವೇಶಿಸಿದ್ದ ಸದಾನಂದಗೌಡ ಅವರು ಇದೀಗ ಆ ಎಲ್ಲಾ ಪ್ರದೇಶಗಳನ್ನು ಬಿಟ್ಟು ಮೈಸೂರನ್ನು ಆರಿಸಿಕೊಳ್ಳಲು ಮುಖ್ಯ ಕಾರಣ ಮಡಿಕೇರಿ.

2009 ರ ಲೋಕಸಭೆ ಚುನಾವಣೆಯಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಸದಾನಂದಗೌಡ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ಈ ಬಾರಿ ಉದ್ದೇಶಪೂರ್ವಕವಾಗಿಯೇ ಮೈಸೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಶಕ್ತಿ ಕಳೆದುಕೊಂಡ ಬಿಜೆಪಿ: ಈ ಹಿಂದೆ ಬಿಜೆಪಿ ಬಲಾಢ್ಯವಾಗಿದ್ದ ಮಂಗಳೂರು ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅದು ತನ್ನ ಶಕ್ತಿ ಕಳೆದುಕೊಂಡಿದೆ.

ಅದರಲ್ಲೂ ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಸದಾನಂದಗೌಡರು ಕೂಡ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಅಷ್ಟೇ ಅಲ್ಲದೆ, ಇಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಹೀಗಾಗಿ ಈ ಎರಡೂ ಕ್ಷೇತ್ರಗಳನ್ನು ಬಿಟ್ಟು ಮೈಸೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಸದಾನಂದಗೌಡ ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನು ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ನೀರಸ ಪ್ರದರ್ಶನ ನೀಡಿದರೂ ಮಡಿಕೇರಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಗೆದ್ದಿತ್ತು. ಹಿಂದೆ ಮಂಗಳೂರು ಲೋಕಸಭೆ ಕ್ಷೇತ್ರಕ್ಕೆ ಸೇರಿದ್ದ ಈ ಎರಡೂ ಕ್ಷೇತ್ರಗಳು 2007ರಲ್ಲಿ ಮೈಸೂರು ಲೋಕಸಭೆ ಕ್ಷೇತ್ರಕ್ಕೆ ಸೇರಿಕೊಂಡಿದೆ. ಸದಾನಂದಗೌಡ ಅವರು ಮೈಸೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಇದು ಒಂದು ಪ್ರಮುಖ ಕಾರಣ ಎನ್ನಲಾಗಿದೆ.

ಮೈಸೂರಿನಲ್ಲಿ ಪೂರಕ ಅಂಶಗಳು: ಅದೇ ರೀತಿ ಮೈಸೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲೂ ಒಂದಷ್ಟು ಪೂರಕ ಅಂಶಗಳು ಇವೆ. ಈ ಕ್ಷೇತ್ರದಲ್ಲಿ ಒಕ್ಕಲಿಗ, ಲಿಂಗಾಯತ ಸೇರಿದಂತೆ ಮೇಲ್ವರ್ಗದವರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಲ್ಲಿ ಜೆಡಿಎಸ್ ಸ್ವಲ್ಪ ಪ್ರಮಾಣದಲ್ಲಿ ಶಕ್ತಿ ಹೊಂದಿದೆಯಾದರೂ ಅದು ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವಷ್ಟರ ಮಟ್ಟಕ್ಕೆ ಇಲ್ಲ.

ಹೀಗಾಗಿ ಸದಾನಂದಗೌಡ ಅವರು ಮೈಸೂರು ಕ್ಷೇತ್ರದಿಂದ ಕಣಕ್ಕಿಳಿದರೆ ಜೆಡಿಎಸ್ ಕೂಡ ಪರೋಕ್ಷವಾಗಿ ಬೆಂಬಲಿಸಬಹುದು. ಹಿಂದುಳಿದ ವರ್ಗದ ಕುರುಬ ಸಮುದಾಯಕ್ಕೆ ಸೇರಿದ ಹಾಲಿ ಸಂಸದ ಕಾಂಗ್ರೆಸ್‌ನ ಎಚ್. ವಿಶ್ವನಾಥ್ ವಿರುದ್ಧ ಹಿಂದುಳಿದ ವರ್ಗದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಅದು ತಮಗೆ ಅನುಕೂಲವಾಗಲಿದೆ ಎಂಬುದು ಸದಾನಂದಗೌಡರ ಲೆಕ್ಕಾಚಾರ.

ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜೆಡಿಎಸ್ ಅವರ ಬಗ್ಗೆ ಮೃಧು ಧೋರಣೆ ಅನುಸರಿಸಿತ್ತು. ಅಲ್ಲದೆ, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಸಂದರ್ಭದಲ್ಲಿ ಮೈಸೂರು ಭಾಗದ ಒಕ್ಕಲಿಗ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಸದಾನಂದಗೌಡರಿಗೆ ಬೆಂಬಲ ವ್ಯಕ್ತಪಡಿಸಿದ್ದವು. ಈ ಎಲ್ಲಾ ಅಂಶಗಳು ತಮಗೆ ಪೂರಕವಾಗಲಿದೆ ಎಂಬ ನಿರೀಕ್ಷೆ ಅವರದ್ದು. ಇದನ್ನು ಪಕ್ಷದ ಗಮನಕ್ಕೂ ಅವರು ತಂದಿದ್ದು, ಪಕ್ಷವೂ ಸಹಮತ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಇನ್ನೊಂದೆಡೆ ಕಳೆದ ವಿಧಾನಸಭೆ ಚುನಾವಣೆ ಬಳಿಕ ಸದಾನಂದಗೌಡ ಅವರು ಮೈಸೂರು ಲೋಕಸಭೆ ಕ್ಷೇತ್ರದ ಬಗ್ಗೆ ಹೆಚ್ಚು ಗಮನಹರಿಸಿದ್ದು, ಈಗಿನಿಂದಲೇ ಅದಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಆ ಭಾಗದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸೇರಿದಂತೆ ಪಕ್ಷದ ಮೈಸೂರು ವಿಭಾಗದ ಬಲವರ್ಧನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇವೆಲ್ಲವೂ ಅವರು ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವ ಮುನ್ಸೂಚನೆ ಎನ್ನಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments