Select Your Language

Notifications

webdunia
webdunia
webdunia
webdunia

ರಾಜಿ ಪಂಚಾಯಿತಿಯಲ್ಲೇ ಬ್ಯುಸಿಯಾದ ಕಾಂಗ್ರೆಸ್ ಹೈಕಮಾಂಡ್

ರಾಜಿ ಪಂಚಾಯಿತಿಯಲ್ಲೇ ಬ್ಯುಸಿಯಾದ ಕಾಂಗ್ರೆಸ್ ಹೈಕಮಾಂಡ್
ಬೆಂಗಳೂರು , ಶುಕ್ರವಾರ, 29 ಮಾರ್ಚ್ 2013 (15:04 IST)
PR
PR
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಒಂದು ತಿಂಗಳ ಮುಂಚೆ ಪ್ರಕಟಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದ್ದರು. ಆದರೆ ನಾಮಪತ್ರ ಸಲ್ಲಿಸುವ ಗಳಿಗೆ ಸಮೀಪಿಸುತ್ತಿದ್ದರೂ ಇನ್ನೂ ಪಟ್ಟಿ ಪ್ರಕಟಿಸಲಾಗದೇ ಕಾಂಗ್ರೆಸ್ ಹೈಕಮಾಂಡ್ ರಾಜಿ ಪಂಚಾಯಿತಿ ಮಾಡುವುದರಲ್ಲೇ ಹೈರಾಣಾಗಿ ಹೋಗಿದೆ ಎನ್ನಲಾಗಿದೆ.

ತಮ್ಮ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟ್ ಕೊಡಿಸಬೇಕೆನ್ನುವ ಕಾರಣಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರಸ್ಪರ ಮಾತಿನ ಚಕಮಕಿ ನಡೆಸಿದರೆನ್ನಲಾಗುತ್ತಿದ್ದು, ಒಂದು ಹಂತದಲ್ಲಿ ಸಿದ್ದರಾಮಯ್ಯ ಪರಮೇಶ್ವರ್ ಅವರನ್ನು ಉದ್ದೇಶಿಸಿ, ನನ್ನ ಬೆಂಬಲವಿಲ್ಲದೆ ಕೊರಟಗೆರೆ ಕ್ಷೇತ್ರದಲ್ಲಿ ಅದೇಗೆ ಗೆಲ್ಲುತ್ತಿರೋ ನೋಡುತ್ತಿನಿ ಎಂದು ಸವಾಲು ಹಾಕಿದರೆನ್ನಲಾಗಿದೆ.

ಆದರೆ, ಇದು ವೈಯಕ್ತಿಕ ಮಟ್ಟದ ಜಗಳವಲ್ಲ. ಬದಲಾಗಿ, ನಿರ್ದಿಷ್ಟ ಕ್ಷೇತ್ರಗಳಿಗೆ ಆಕಾಂಕ್ಷಿಗಳ ಗುಣಾವಗುಣವನ್ನು ಹೈಕಮಾಂಡ್‌ನ‌ ವರಿಷ್ಠರ ಮುಂದಿಡುವಾಗ ನಡೆಸಲಾದ ವಾಗ್ವಾದ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಕಳೆದ ಮೂರು ದಿನಗಳು ನಡೆದ ಕಾಂಗ್ರೆಸ್‌ ಪರಿಶೀಲನಾ ಸಮಿತಿ ವೇಳೆ ಬೆಂಗಳೂರು ನಗರ, ಮೈಸೂರು ಹಾಗೂ ತುಮಕೂರಿನ ಕೆಲ ಕ್ಷೇತ್ರಗಳು ಮತ್ತು ಮೀಸಲು ಕ್ಷೇತ್ರಗಳ ವಿಚಾರದಲ್ಲಿ ಇಂತಹವರ ಹೆಸರನ್ನು ಅಂತಿಮಗೊಳಿಸಬೇಕು ಎಂದು ಉಭಯ ನಾಯಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ತಾವು ಸೂಚಿಸಿದ ಆಕಾಂಕ್ಷಿಯೇ ಪಟ್ಟಿಯಲ್ಲಿ ಏಕೀರಬೇಕು ಎಂಬುದಕ್ಕೆ ಪರಮೇಶ್ವರ್ ನೀಡಿದ ಕಾರಣಗಳನ್ನು ಸಿದ್ದರಾಮಯ್ಯ ನಿರಾಕರಿಸಿದರೆ, ಸಿದ್ದರಾಮಯ್ಯ ನೀಡಿದ ಕಾರಣಗಳನ್ನು ಪರಮೇಶ್ವರ್ ಅಲ್ಲಗಳೆದಿದ್ದಾರೆ ಎನ್ನಲಾಗಿದೆ. ಇಂತಹ ಕ್ಷೇತ್ರಗಳ ಬಗ್ಗೆ ಎರಡು ಹೆಸರನ್ನು ಸೂಚಿಸಿರುವ ಸಭೆ ಅಂತಿಮ ನಿರ್ಧಾರವನ್ನು ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಬಿಡುವ ನಿರ್ಧಾರವನ್ನು ಕೈಗೊಂಡಿತು ಎಂದು ಮೂಲಗಳು ಹೇಳಿವೆ.

Share this Story:

Follow Webdunia kannada