Select Your Language

Notifications

webdunia
webdunia
webdunia
webdunia

ಯಾವುದೇ ಕ್ಷಣದಲ್ಲಿ ಬಿಜೆಪಿ ಸರಕಾರ ಪತನ: ಎಚ್‌ಡಿಕೆ ಭವಿಷ್ಯ

ಯಾವುದೇ ಕ್ಷಣದಲ್ಲಿ ಬಿಜೆಪಿ ಸರಕಾರ ಪತನ: ಎಚ್‌ಡಿಕೆ ಭವಿಷ್ಯ
ಬೆಂಗಳೂರು , ಭಾನುವಾರ, 24 ಜನವರಿ 2010 (11:37 IST)
ಪ್ರಸಕ್ತ ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿ ಸರಕಾರ ಯಾವ ಕ್ಷಣದಲ್ಲಾದರೂ ಪತನಗೊಳ್ಳುವ ಸಾಧ್ಯತೆಗಳಿದ್ದು, ಜೆಡಿಎಸ್ ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ಧರಾಗಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಬೆಳಗಾವಿಯ ಅಥಣಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ಪಕ್ಷದ ರಾಜ್ಯಾಧ್ಯಕ್ಷ, ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆಗಳು ಕಾಣಬಹುದು; ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾಗಬಹುದು. ಹಾಗಾಗಿ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಿ ಎಂದರು.

ಬೇಕಾದಾಗ ಬಳಸಿಕೊಂಡ ಬಿಜೆಪಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹೊರಗೆ ದಬ್ಬಿತ್ತು. ಅವರು ಜೆಡಿಎಸ್ ಸೇರ್ಪಡೆಗೊಂಡಿರುವುದರಿಂದ ಉತ್ತರ ಕರ್ನಾಟಕದಲ್ಲಿ ನಮಗೆ ಬಲ ಹೆಚ್ಚಾಗಿದೆ. ಇದು ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಲಿದೆ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ರೈತರ ಮೇಲಿನ ಲಾಠಿ ಚಾರ್ಜ್, ಗೋಲಿಬಾರ್, ರಸಗೊಬ್ಬರ ನೀಡದೇ ಇರುವುದು, ನೆರೆ ಸಂತ್ರಸ್ತರ ನಿರ್ಲಕ್ಷ್ಯ ಮುಂತಾದುವು ರಾಜಕೀಯ ಬದಲಾವಣೆಗೆ ಹೇತುವಾಗಲಿದೆ. ಯಾವುದಕ್ಕೂ ಕಾದು ನೋಡಿ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾಡಿರುವ ತಪ್ಪುಗಳಿಗೆ ಅವರು ಮುಂದಿನ ದಿನಗಳಲ್ಲಿ ಪ್ರಶ್ಚಾತಾಪ ಪಡಲಿದ್ದಾರೆ ಎಂದು ಭವಿಷ್ಯ ನುಡಿದರು.

ಜೆಡಿಎಸ್ ಸೇರ್ಪಡೆಗೊಂಡ ಯತ್ನಾಳ್, ಬಿಜೆಪಿ ಕೊನೆಗಾಲ ಕಾಣುತ್ತಿದೆ ಎಂದರು. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ತಳಮಟ್ಟ ತಲುಪಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಪಕ್ಷವನ್ನು ಎಷ್ಟು ಸಾಧ್ಯವೋ ಅಷ್ಟು ನಾಶ ಮಾಡಿದ್ದಾರೆ. ಈಗ ಈಶ್ವರಪ್ಪನವರು ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.

Share this Story:

Follow Webdunia kannada