Select Your Language

Notifications

webdunia
webdunia
webdunia
webdunia

'ಮದುವೆ ಮಂಟಪದಲ್ಲೇ ವರನ ಅನೈತಿಕ ಸಂಬಂಧ ಬಯಲು'

'ಮದುವೆ ಮಂಟಪದಲ್ಲೇ ವರನ ಅನೈತಿಕ ಸಂಬಂಧ ಬಯಲು'
ಮೈಸೂರು , ಶುಕ್ರವಾರ, 24 ಫೆಬ್ರವರಿ 2012 (18:10 IST)
PR
ವರನ ಅನೈತಿಕ ಸಂಬಂಧ ವಿವಾಹ ಮಂಟಪದಲ್ಲಿ ಬಯಲಾದ ಹಿನ್ನಲೆಯಲ್ಲಿ ವಧು ಮದುವೆ ನಿರಾಕರಿಸಿದ್ದರಿಂದ ಬೇಸತ್ತ ವರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ಗುರುವಾರ ರಾತ್ರಿ ನಡೆದಿದ್ದು, ವರ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ ವಧುವನ್ನು ಅದೇ ಮುಹೂರ್ತದಲ್ಲಿ ಸಂಬಂಧಿಯೊಬ್ಬ ವಿವಾಹವಾಗುವ ಮೂಲಕ ಅಮಾಯಕ ವಧುವಿಗೆ ಕಂಕಣ ಭಾಗ್ಯ ನೀಡಿದ ಅಪರೂಪದ ಘಟನೆ ನಡೆದಿದೆ.

ಮೈಸೂರಿನ ಇಲವಾಲದ ನಿವಾಸಿ ಶಿಕ್ಷಕಿಯೂ ಆಗಿರುವ ಗೀತಾ ಎಂಬಾಕೆಗೂ ಹೆಚ್.ಡಿ.ಕೋಟೆ ತಾಲೂಕು ಹಳ್ಳದಮನುಗನಹಳ್ಳಿಯ ನಿವಾಸಿ ಮಂಜುನಾಥ ಎಂಬಾತನಿಗೆ ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಪಾಲಿಕೆ ಸಮುದಾಯ ಭವನದಲ್ಲಿ ಫೆಬ್ರವರಿ 23 ಮತ್ತು 24ರಂದು ವಿವಾಹ ನಿಶ್ಚಯವಾಗಿತ್ತು. ಅದರಂತೆ ಮದುವೆ ಮಂಟಪಕ್ಕೆ ಎರಡು ಕಡೆಯವರು ಆಗಮಿಸಿದ್ದರು.

ಮದುವೆ ಸಂಪ್ರದಾಯದಂತೆ ನಿನ್ನೆ ರಾತ್ರಿ(ಫೆಬ್ರವರಿ 23) ವರೋಪಚಾರವೂ ನಡೆದಿತ್ತು. ಆದರೆ ವಿವಾಹ ಮಂಟಪದಲ್ಲಿದ್ದ ವರ ಮಂಜುನಾಥ ವಿವಾಹಕ್ಕೆ ಬಂದಿದ್ದ ಹೆಂಗಸಿನೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದದ್ದು ಕೆಲವರ ಅನುಮಾನಕ್ಕೆ ಕಾರಣವಾಗಿತ್ತು. ವಿಷಯ ತಿಳಿದ ಕೆಲವರು ಈ ಬಗ್ಗೆ ವಿಚಾರಿಸಿದಾಗ ಆಕೆ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದು, ಗಂಡನೊಂದಿಗೆ ವಿಚ್ಛೇದನೆ ಪಡೆದಿರುವುದಾಗಿಯೂ ಆಕೆಗೂ ಮಂಜುನಾಥನಿಗೂ ಅನೈತಿಕ ಸಂಬಂಧವಿರುವುದು ಬಯಲಾಯಿತು.

ವಿಷಯ ತಿಳಿದ ವಧು ಗೀತಾ ನಾನು ಮಂಜುನಾಥನನ್ನು ಮದುವೆಯಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ. ಈ ಸಂದರ್ಭ ಗೊಂದಲ ಉಂಟಾಗಿ ವಧುವಿನ ಮನೆಯವರು ವಿವಾಹವನ್ನು ನಿಲ್ಲಿಸಿದ್ದಾರೆ. ಅಲ್ಲದೆ ವರನ ಹಾಗೂ ವಧುವಿನ ಕುಟುಂಬದ ನಡುವೆ ರಂಪಾಟವೂ ನಡೆದಿದೆ. ಆಗ ವಧುವಿನ ಕಡೆಯವರು ಮದುವೆಗಾಗಿ ಖರ್ಚು ಮಾಡಿದ ಹಣವನ್ನು ಕೂಡಲೇ ನೀಡುವಂತೆ ಆಗ್ರಹಿಸಿದ್ದಾರೆ. ಕೊನೆಗೂ ಅನ್ಯಮಾರ್ಗವಿಲ್ಲದೆ ವರನ ಕಡೆಯವರುಮದುವೆ ಖರ್ಚು 5ಲಕ್ಷ ರೂ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ.

ಅದರಂತೆ ಹಣವನ್ನು ತರುವುದಾಗಿ ಹೇಳಿ ಮದುವೆ ಮಂಟಪದಿಂದ ಹೊರ ನಡೆದ ವರ ಮಂಜುನಾಥ ಭಯದಿಂದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ಮದುವೆ ಅರ್ಧಕ್ಕೆ ನಿಂತು ಹೋದ ವಿಚಾರ ತಿಳಿದ ಗೀತಾಳ ದೂರದ ಸಂಬಂಧಿ ಶಿವರಾಜ್ ಎಂಬಾತ ಆಕೆಯನ್ನು ಮದುವೆಯಾಗಲು ಮುಂದೆ ಬಂದ ಹಿನ್ನಲೆಯಲ್ಲಿ ಇಂದು ಮೈಸೂರಿನ ವಿಜಯನಗರದಲ್ಲಿರುವ ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ಇಬ್ಬರು ಸಪ್ತಪದಿ ತುಳಿದು ಬಾಳಸಂಗಾತಿಯಾದರು.

ಬಿ.ಎಂ.ಲವಕುಮಾರ್, ಮೈಸೂರು

Share this Story:

Follow Webdunia kannada