Webdunia - Bharat's app for daily news and videos

Install App

ಭೂ ಹಗರಣ ಪಕ್ಷಾತೀತ: ಪತ್ರಕರ್ತ, ಕೆಲಸದಾಳಿಗೂ ಭೂಮಿ!

Webdunia
ಸೋಮವಾರ, 29 ನವೆಂಬರ್ 2010 (19:03 IST)
PTI
ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಬಂದಿರುವ ಭೂಹಗರಣ ಆರೋಪಗಳಿಗೆ ಸಂಬಂಧಿಸಿದ ಹೋರಾಟದಲ್ಲಿ ಒಂದೊಂದೇ ಹುಳುಕುಗಳು ಹೊರಬರುತ್ತಿದ್ದು, ರಾಜಕಾರಣಿಗಳು, ಅವರ ಕೆಲಸದಾಳುಗಳು, ಪತ್ರಕರ್ತರು ಎಲ್ಲರೂ ಭೂಮಿ ಪಡೆದಿದ್ದಾರೆ ಮತ್ತು ಜಮೀನನ್ನು ಹಂಚುವುದರಲ್ಲಿ ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳೂ ಸ್ವಜನಪಕ್ಷಪಾತ ಮೆರೆದಿದ್ದಾರೆ ಎಂಬುದು ದೃಢಪಟ್ಟಿದೆ.

ಹಿಂದಿನ ಮುಖ್ಯಮಂತ್ರಿಗಳೆಲ್ಲರೂ ತಮಗೆ ಬೇಕಾದವರಿಗಾಗಿ ಜಮೀನನ್ನು ಡೀನೋಟಿಫೈ ಮಾಡಿದ್ದಾರೆ, ಆದರೆ ನನ್ನನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಯಡಿಯೂರಪ್ಪ ಇತ್ತೀಚೆಗೆ ಅಲವತ್ತುಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಹಿಂದಿನ ಮುಖ್ಯಮಂತ್ರಿಗಳಾದ ಕಾಂಗ್ರೆಸ್‌ನ ಎಸ್.ಎಂ.ಕೃಷ್ಣ 633.33 ಎಕರೆ, ಕಾಂಗ್ರೆಸ್‌ನ ಧರ್ಮ ಸಿಂಗ್ 110.33 ಎಕರೆ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ 346.23 ಎಕರೆ ಜಮೀನನ್ನು ಡೀನೋಟಿಫೈ ಮಾಡಿದ್ದರು. ತನ್ನ ಪಾಲು 259.12 ಎಕರೆ ಎಂದು ಯಡಿಯೂರಪ್ಪ ಹೋಲಿಕೆ ನೀಡಿದ್ದರು.

ಇದೀಗ 'ತೆಹಲ್ಕಾ ಮ್ಯಾಗಜಿನ್' ಮತ್ತಷ್ಟು ಮಾಹಿತಿಗಳನ್ನು ಬಯಲಿಗೆಳೆದು ಪ್ರಕಟಿಸಿದ್ದು, ಯಡಿಯೂರಪ್ಪ ಕಾಟಾಚಾರಕ್ಕೆ ಇದನ್ನು ಹೇಳಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಅದರ ಪ್ರಕಾರ, 1989ರಿಂದೀಚೆಗೆ ಕೋಟ್ಯಂತರ ರೂಪಾಯಿ ಜಮೀನನ್ನು ಉದಾರವಾಗಿ ನೀಡಲಾಗಿದೆ. ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳು ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ, ಪಾರ್ಟಿ ಕಾರ್ಯಕರ್ತರಿಗೆ, ಶಾಸಕರಿಗೆ, ಮಂತ್ರಿಗಳಿಗೆ, ಕುಟುಂಬಿಕರಿಗೆ, ಮಿತ್ರರಿಗೆ, ಚಾಲಕರಿಗೆ, ಸೇವಕರಿಗೆ ಮತ್ತು ಸಹಾಯಕರಿಗೆ ನೀಡಿ ಸ್ವಜನ ಪಕ್ಷಪಾತ ಮೆರೆದಿದ್ದಾರೆ. ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಕಾಯ್ದೆಯಡಿ, 'ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳಿಗೆ' ನೀಡಲಾಗಿರುವ ವಿಶೇಷ ಅಧಿಕಾರವನ್ನು ಅವರು 'ಸಮರ್ಥ'ವಾಗಿ ಬಳಸಿಕೊಂಡಿದ್ದಾರೆ!

ಈಗ ವಿದೇಶಾಂಗ ಸಚಿವರಾಗಿರುವ ಕೃಷ್ಣ, ಸಂಸದ ಧರಂ ಸಿಂಗ್, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಎಲ್ಲರೂ ಕೂಡ ತಮಗೆ ಬೇಕಾದವರಿಗೆ ಜಮೀನು ಕೊಡಿಸುವ ಮೂಲಕ ರಾಜ್ಯದ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟವಾಗುವಂತೆ ಮಾಡಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಬೆಂಗಳೂರಿನ ಬಹುಮೂಲ್ಯ ಪ್ರದೇಶಗಳಲ್ಲಿರುವ 50 x80 ಮತ್ತು 60 x40 ಅಳತೆಯ ಸೈಟುಗಳನ್ನು ಅಗ್ಗದ ಬೆಲೆಗೆ ನೀಡಲಾಗಿದೆ. ಅಂದರೆ, ಬಿಡಿಎಗೆ 2 ಕೋಟಿಯಷ್ಟು ತಂದುಕೊಡಬಹುದಾಗಿದ್ದ ಸೈಟುಗಳನ್ನು ಕೇವಲ 10 ಲಕ್ಷ ರೂ.ನಷ್ಟು ಕಡಿಮೆ ಬೆಲೆಗೆ ಮಾರಲಾಗಿದೆ.

ಜವಾನರಿಗೂ ಸೈಟು ನೀಡಿದ ಧರ್ಮ ಸಿಂಗ್
ವಿಚಿತ್ರವೆಂದರೆ, ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್, ತಮ್ಮ 'ವೈಯಕ್ತಿಕ ಇಲಾಖೆಯಲ್ಲಿ' ಕೆಲಸ ಮಾಡಿದ್ದಾರೆ ಎಂಬ ಕಾರಣಕ್ಕೆ 15 ಮಂದಿ ಜವಾನರಿಗೂ ಸೈಟುಗಳನ್ನು ಕೊಡಿಸಿದ್ದರು.

ಎಸ್ಎಂ ಕೃಷ್ಣ ಅವರು ಕೋರಮಂಗಲದಲ್ಲಿನ ಪ್ರೈಮ್ ಲೊಕೇಶನ್‌ನಲ್ಲಿರುವ 50 x80 ಸೈಟನ್ನು ರಾಘವೇಂದ್ರ ಶಾಸ್ತ್ರಿ ಎಂಬವರಿಗೆ ನೀಡಿದ್ದರು. ಇದೇ ರಾಘವೇಂದ್ರ ಶಾಸ್ತ್ರಿ, ಕೃಷ್ಣ ಅವರ ವಿಶೇಷ ಕರ್ತವ್ಯ ಅಧಿಕಾರಿ. ಕೃಷ್ಣ ಅವರ ಅಳಿಯ ವಿ.ಜಿ.ಸಿದ್ದಾರ್ಥರ ಹೆಳೆಯನಾಗಿರುವ ಶಾಸ್ತ್ರಿ, ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮಾಧ್ಯಮ ವ್ಯವಹಾರಗಳ ಉಸ್ತುವಾರಿಯಾಗಿದ್ದರು.

ಕೊನೆ ಕೊನೆಗೆ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿತೆಂದರೆ, ಕುಮಾರಸ್ವಾಮಿ ಅವರು ಬಿಡಿಎಯ ಜಮೀನಿನ ಬ್ಯಾಂಕನ್ನೇ ಖಾಲಿ ಮಾಡಿದಂತೆ ತೋರಿತ್ತು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿದ್ದ ಅವರು, ಜಿ ಕೆಟಗರಿ ಸೈಟುಗಳನ್ನು ಮಾರಿದ ಬಳಿಕ, ತನ್ನ ಬಳಿ ಸೈಟುಗಳೇ ಇಲ್ಲ ಎಂದುಬಿಟ್ಟಿತ್ತು ಬಿಡಿಎ!

ತೆಹಲ್ಕಾ ನಡೆಸಿರುವ ತನಿಖೆಗಳ ಪ್ರಕಾರ, ಹಂಚಿದ ಬಿಡಿಎ ನಿವೇಶನಗಳ ಪಟ್ಟಿಯಲ್ಲಿ ಫಲಾನುಭವಿಗಳ ಮೊದಲ ಹೆಸರು ಮಾತ್ರವೇ ಇದೆ. ಅಂದರೆ, ಬದಲಾವಣೆಗೆ ಅವಕಾಶ ಮಾಡಿಕೊಟ್ಟಂತೆ.

ಜಿ ಕೆಟಗರಿಯ ಫಲಾನುಭವಿಗಳು ಬೆಂಗಳೂರಿನಲ್ಲಿ ಬೇರೆ ಆಸ್ತಿ ಹೊಂದಿರುವಂತಿಲ್ಲ ಎಂಬ ನಿಯಮವಿದೆ. ಆದರೆ ಇಲ್ಲಿ ಉಳ್ಳವರಿಗೇ ನಿವೇಶನ ಹಂಚಿಕೆಯಾಗಿದೆ. ಹೀಗಾಗಿ, ವಸತಿ ಇಲ್ಲದವರಿಗೆ, ಬಡವರಿಗೆ ಮೀಸಲಾಗಿರುವ ಈ ನಿವೇಶನಗಳನ್ನು ವಿತರಿಸುವ ಕುರಿತು ಮುಖ್ಯಮಂತ್ರಿಗೆ ಇರುವ ಇಂತಹಾ ವಿವೇಚನಾಧಿಕಾರವೇ ಇದೀಗ ಚರ್ಚೆಗೆ ಗ್ರಾಸವಾಗಿರುವ ಸಂಗತಿ.

ಈ ಸೈಟುಗಳನ್ನು ಪಡೆದ ನೂರಾರು ಮಂದಿಯಲ್ಲಿ ಕೆಲವರ ಹೆಸರನ್ನು ತೆಹಲ್ಕಾ ಪ್ರಕಟಿಸಿದೆ. ಅವುಗಳು ಇಂತಿವೆ:
1. ರಾಘವೇಂದ್ರ ಶಾಸ್ತ್ರಿ, (ಎಸ್.ಎಂ.ಕೃಷ್ಣರ ಹಾಲಿ ವಿಶೇಷ ಕರ್ತವ್ಯಾಧಿಕಾರಿ, ಕೃಷ್ಣರ ಅಳಿಯ ಸಿದ್ಧಾರ್ಥರ ಗೆಳೆಯ), ಸೈಟಿನ ಮೌಲ್ಯ ಸುಮಾರು 4.8 ಕೋಟಿ.

2. ವಿಜಯಲಕ್ಷ್ಮಿ ರಾಮಣ್ಣ (ಮಾಜಿ ಸ್ಪೀಕರ್ ವೆಂಕಟಪ್ಪ ಅವರ ನಾದಿನಿ) ಎಸ್.ಎಂ.ಕೃಷ್ಣ ಕೊಡಿಸಿದ್ದು. ಬೆಲೆ ಅಂದಾಜು 2 ಕೋಟಿ.

3. ಎಂ.ವಿ.ವೆಂಕಟಪ್ಪ (ಕಾಂಗ್ರೆಸ್‌ನ ಮಾಜಿ ಅಸೆಂಬ್ಲಿ ಸ್ಪೀಕರ್) ಈಗಾಗಲೇ ಬಿಡಿಎ ನಿವೇಶನ ಹೊಂದಿದ್ದರೂ ಕೊಡಿಸಿದ್ದು-ಎಸ್.ಎಂ.ಕೃಷ್ಣ, ಬೆಲೆ ಅಂದಾಜು 2 ಕೋಟಿ.

4. ರಾಜೀವ್ ಗೌಡ (ಕಾಂಗ್ರೆಸ್ ಮಾಜಿ ಸ್ಪೀಕರ್ ವೆಂಕಟಪ್ಪ ಅವರ ಪುತ್ರ) ಕೊಡಿಸಿದ್ದು ಎಸ್.ಎಂ.ಕೃಷ್ಣ, ಬೆಲೆ ಅಂದಾಜು 1.6 ಕೋಟಿ.

5. ಪ್ರಿಯದರ್ಶಿನಿ (ಕಾಂಗ್ರೆಸ್ ಮುಖ್ಯಮಂತ್ರಿ ಧರ್ಮ ಸಿಂಗ್ ಪುತ್ರಿ), ಕೊಡಿಸಿದ್ದು ಧರ್ಮ ಸಿಂಗ್, ಬೆಲೆ - ಅಂದಾಜು 2 ಕೋಟಿ.

6. ಮಲ್ಲಿಕಾರ್ಜುನ ನಾಗಪ್ಪ (ಕಾಂಗ್ರೆಸ್‌ನ ಮಾಜಿ ನಗರಾಡಳಿತ ಸಚಿವ), ಕೊಡಿಸಿದ್ದು-ಎಸ್.ಎಂ.ಕೃಷ್ಣ, ಬೆಲೆ-ಅಂದಾಜು 2 ಕೋಟಿ. ಇವರು ಖರೀದಿಸಿ ಒಂದೇ ವರ್ಷದಲ್ಲಿ ಮಾರಿದ್ದಾರೆ. ಬಿಡಿಎ ನಿಯಮದ ಪ್ರಕಾರ 10 ವರ್ಷ ಮಾರುವಂತಿಲ್ಲ.

7. ಪದ್ಮಾ ಬಾಯಿ (ಕಾಂಗ್ರೆಸ್ ಸಿಎಂ ಧರ್ಮ ಸಿಂಗ್ ಬಂಧು), ಕೊಡಿಸಿದ್ದು ಧರ್ಮ ಸಿಂಗ್, ಬೆಲೆ-ಅಂದಾಜು 2 ಕೋಟಿ.

8. ಕೆ.ಎಸ್.ಈಶ್ವರಪ್ಪ (ಹಾಲಿ ಬಿಜೆಪಿ ಅಧ್ಯಕ್ಷ) ಈಗಾಗಲೇ ಬಿಡಿಎ ಸೈಟಿದ್ದರೂ ಕೊಡಿಸಿದ್ದು- ಧರ್ಮ ಸಿಂಗ್, ಬೆಲೆ-ಅಂದಾಜು 2 ಕೋಟಿ.

9. ಕಟ್ಟಾ ಸುಬ್ರಹ್ಮಣ್ಯ ನಾಯ್ಡು (ಬಿಜೆಪಿಯ ಹಾಲಿ ಸಚಿವ), ಕೊಡಿಸಿದ್ದು ಎಸ್.ಎಂ.ಕೃಷ್ಣ. ಇವರು ಸೈಟು ಪಡೆಯುವಾಗ ತಮಗೆ ಬೇರೆ ಸೈಟಿದೆ ಅಂತ ಘೋಷಿಸಿರಲಿಲ್ಲ. ಬೆಲೆ-ಅಂದಾಜು-4.8 ಕೋಟಿ.

10. ಸಿ.ಪುಟ್ಟಣ್ಣ (ಜೆಡಿಎಸ್, ವಿಧಾನಪರಿಷತ್ ಉಪಸಭಾಪತಿ) ಕೊಡಿಸಿದ್ದು ಧರ್ಮ ಸಿಂಗ್, ಇವರ ಅಫಿದವಿತ್ ಸಿಕ್ಕಿಲ್ಲ.

11. ಬಿ.ಎಸ್.ಪ್ರೇಮಮ್ಮ (ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಹೋದರಿ) ಕೊಡಿಸಿದ್ದು - ಯಡಿಯೂರಪ್ಪ. ಇವರಿಗೆ ಹಿಂದೆಯೇ ಬಿಡಿಎ ಸೈಟಿತ್ತು. ಮುಖ್ಯಮಂತ್ರಿ ಸೂಚನೆಯಂತೆ ಈಗ ಮರಳಿಸಲಾಗಿದೆ ಎನ್ನಲಾಗುತ್ತಿದೆ.

12. ಸಿ.ಎಚ್.ವಿಜಯಶಂಕರ್ (ಬಿಜೆಪಿಯ ಹಾಲಿ ಅರಣ್ಯ ಸಚಿವ), ಕೊಡಿಸಿದ್ದು ಕುಮಾರಸ್ವಾಮಿ. ಈಗಾಗಲೇ ಬೇರೆ ಸೈಟು ಇತ್ತು.

13. ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ, ಪ್ರಾಥಮಿಕ ಶಿಕ್ಷಣ ಸಚಿವ), ಕೊಡಿಸಿದ್ದು ಕುಮಾರಸ್ವಾಮಿ, ಅಂದಾಜು ಬೆಲೆ 1.2 ಕೋಟಿ. ಇವರ ಅಫಿದವಿತ್ ಸಿಕ್ಕಿಲ್ಲ.

14. ಎಂ. ಪ್ರಿಯಾಂಕ್ ಖರ್ಗೆ (ಕಾಂಗ್ರೆಸ್, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಪುತ್ರ), ಕೊಡಿಸಿದ್ದು, ಧರ್ಮ ಸಿಂಗ್, ಅಂದಾಜು ಬೆಲೆ 2 ಕೋಟಿ.

15. ಬಿ.ಶ್ರೀರಾಮುಲು (ಬಿಜೆಪಿ, ಆರೋಗ್ಯ ಸಚಿವ) ಕೊಡಿಸಿದ್ದು ಧರ್ಮ ಸಿಂಗ್, ಬೇರೆ ಸೈಟು ಇದೆ ಅಂತ ಅಫಿದವಿತ್‌ನಲ್ಲಿದೆ. ಅಂದಾಜು ಬೆಲೆ 80 ಲಕ್ಷ.

16. ವೈ.ಎಸ್.ವಿ. ದತ್ತ (ಜೆಡಿಎಸ್ ಮುಖಂಡ) ಕೊಡಿಸಿದ್ದು ಕುಮಾರಸ್ವಾಮಿ.

17. ವಿ.ಎಸ್.ಆಚಾರ್ಯ (ಬಿಜೆಪಿ ಸಚಿವ), ಕೊಡಿಸಿದ್ದು ಕುಮಾರಸ್ವಾಮಿ, ಅಂದಾಜು ಬೆಲೆ 1.2 ಕೋಟಿ. ಇವರ ಅಫಿದವಿತ್ ಸಿಕ್ಕಿಲ್ಲ.

18. ರೋಷನ್ ಬೇಗ್ (ಕಾಂಗ್ರೆಸ್ ಶಾಸಕ) ಕೊಡಿಸಿದ್ದು ಕುಮಾರಸ್ವಾಮಿ, ಅಂದಾಜು ಬೆಲೆ 2 ಕೋಟಿ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅವರಿಗೆ ಈಗಾಗಲೇ ಜಮೀನಿದೆ.

19. ಬಿ.ವೈ. ರಾಘವೇಂದ್ರ (ಬಿಜೆಪಿ ಸಂಸದ) ಕೊಡಿಸಿದ್ದು ಯಡಿಯೂರಪ್ಪ, ಅಂದಾಜು ಬೆಲೆ 1.2 ಕೋಟಿ. ಸಂಸದನ ಕೋಟಾದಲ್ಲಿ ಸಿಕ್ಕಿದೆ. ಸಿಎಂ ಮಗ ಎಂಬ ಕಾರಣಕ್ಕೆ ಈಗ ಹುಯಿಲೆದ್ದಿದೆ. ಅದನ್ನು ಈಗ ಮರಳಿಸಿದ್ದಾರೆ ಎಂಬ ವರದಿಗಳಿವೆ.

20. ಆನಂದ ಅಸ್ನೋಟಿಕರ್ (ಅನರ್ಹ ಬಿಜೆಪಿ ಶಾಸಕ, ಮಾಜಿ ಸಚಿವ) ಕೊಡಿಸಿದ್ದು ಯಡಿಯೂರಪ್ಪ, ಬೆಂಗಳೂರಲ್ಲಿ ಈಗಾಗಲೇ ಜಮೀನಿದೆ.

21. ಎಂ.ಪಿ.ಪ್ರಕಾಶ್ (ದಳದಲ್ಲಿದ್ದು, ಈಗ ಕಾಂಗ್ರೆಸ್ ಸೇರಿರುವ ಮಾಜಿ ಉಪಮುಖ್ಯಮಂತ್ರಿ) ಕೊಡಿಸಿದ್ದು ಜನತಾ ದಳದ ಬೊಮ್ಮಾಯಿ ಸರಕಾರ, ಅಂದಾಜು ಬೆಲೆ 1.2 ಕೋಟಿ.

22. ಕೆ.ಜೆ.ಜಾರ್ಜ್ (ಕಾಂಗ್ರೆಸ್), ಕೊಡಿಸಿದ್ದು ಬೊಮ್ಮಾಯಿ ಸರಕಾರ, ಅಂದಾಜು ಬೆಲೆ 2 ಕೋಟಿ.

23. ಎಂ.ಟಿ.ಕೃಷ್ಣಪ್ಪ (ಜೆಡಿಎಸ್ ಶಾಸಕ), ಕೊಡಿಸಿದ್ದು ಕುಮಾರಸ್ವಾಮಿ ಸರಕಾರ, ಅಂದಾಜು ಬೆಲೆ 1.2 ಕೋಟಿ. ಬೆಂಗಳೂರಲ್ಲಿ 2ಕ್ಕಿಂತಲೂ ಹೆಚ್ಚು ಪ್ಲಾಟುಗಳಿವೆ.

24. ಅಜಯ್ ಕುಮಾರ್ ಸರ್‌ನಾಯಕ್ (ಜೆಡಿಎಸ್ ಮಾಜಿ ಸಚಿವ), ಕೊಡಿಸಿದ್ದು ದೇವೇಗೌಡ ಸರಕಾರ, ಅಂದಾಜು ಬೆಲೆ 2 ಕೋಟಿ.

25. ಸಿ.ಎಸ್.ಪುಟ್ಟ ರಾಜು (ಜೆಡಿಎಸ್ ಮುಖಂಡ), ಕೊಡಿಸಿದ್ದು ಧರ್ಮ ಸಿಂಗ್ ಸರಕಾರ, ಅಂದಾಜು ಬೆಲೆ 1.2 ಕೋಟಿ. ಬೇರೆಯೂ ಜಮೀನಿದೆ.

26. ಪುಷ್ಪಲತಾ (ಧರ್ಮ ಸಿಂಗ್ ಅವರ ಆಪ್ತ ಸಿಬ್ಬಂದಿ), ಕೊಡಿಸಿದ್ದು ಧರ್ಮ ಸಿಂಗ್ ಸರಕಾರ, ಅಂದಾಜು ಬೆಲೆ 66 ಲಕ್ಷ.

27. ಎಂ.ಪಿ.ರೇಣುಕಾಚಾರ್ಯ (ಹಾಲಿ ಬಿಜೆಪಿ ಸಚಿವ), ಕೊಡಿಸಿದ್ದು ಕುಮಾರಸ್ವಾಮಿ ಸರಕಾರ, ಅಂದಾಜು ಬೆಲೆ 1.2 ಕೋಟಿ. ಈಗಾಗಲೇ ಬೇರೆ ಜಮೀನು ಹೊಂದಿದ್ದಾರೆ.

28. ನಾರಾಯಣ ಸ್ವಾಮಿ (ಬಿಜೆಪಿ, ಹಾಲಿ ಸಮಾಜ ಕಲ್ಯಾಣ ಸಚಿವ) ಕೊಡಿಸಿದ್ದು, ಎಸ್.ಎಂ.ಕೃಷ್ಣ ಸರಕಾರ, ಅಂದಾಜು ಬೆಲೆ 2 ಕೋಟಿ. ಅಫಿದವಿತ್ ಸಿಕ್ಕಿಲ್ಲ.

29. ಅರುಣ್ ಬಾಬು (ಧರ್ಮ ಸಿಂಗ್ ಅವರ ಆಪ್ತ ಸಿಬ್ಬಂದಿ) ಕೊಡಿಸಿದ್ದು ಧರ್ಮ ಸಿಂಗ್, ಅಂದಾಜು ಬೆಲೆ 66 ಲಕ್ಷ.

ಇದೇ ರೀತಿ ಪತ್ರಕರ್ತರಿಗೂ ಕೂಡ ಮುಖ್ಯಮಂತ್ರಿಗಳು ಆಗಾಗ್ಗೆ ಸೈಟುಗಳನ್ನು ಕೊಡಮಾಡಿದ್ದಾರೆ. ಅವರಿಗೆ ಕೂಡ 'ಸಾರ್ವಜನಿಕ ಜೀವನದಲ್ಲಿರುವವರು' ಎಂಬ ಮಾನದಂಡದಲ್ಲಿ ಕಾನೂನುಬದ್ಧವಾಗಿಯೇ ಸೈಟು ವಿತರಿಸಲಾಗಿದೆ. ಈ ಹೆಸರುಗಳಲ್ಲಿ ಪ್ರಮುಖವಾದವುಗಳೆಂದರೆ,
ಎಚ್.ಆರ್.ರಂಗನಾಥ್
ಎಸ್.ರಾಜೇಂದ್ರನ್
ಸ್ಟೀಫನ್ ಡೇವಿಡ್
ಗಿರೀಶ್ ರಾವ್
ಎಂ.ಎನ್.ಗುರುಮೂರ್ತಿ
ಗಂಗಾಧರ ಕುಷ್ಟಗಿ
ವೆಂಕಟನಾರಾಯಣ್
ಎ.ಗುಂಡಾಭಟ್
ಇ.ವಿ.ಸತ್ಯನಾರಾಯಣ
ಎಂ.ಸಿ.ಸತ್ಯನಾರಾಯಣನ್
ಜಿ.ಎ.ಪ್ರಸನ್ನಕುಮಾರ್
ಬಿ.ವಿ.ಮಲ್ಲಿಕಾರ್ಜುನ್
ಇಂದ್ರಜಿತ್ ಲಂಕೇಶ್

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments