Select Your Language

Notifications

webdunia
webdunia
webdunia
webdunia

ಭಿನ್ನಮತ ತೊಡೆದುಹಾಕಿ ಪಕ್ಷದ ಸಂಘಟನೆಯತ್ತ ಗಮನಹರಿಸಿ: ಮೊಯ್ಲಿ

ಭಿನ್ನಮತ ತೊಡೆದುಹಾಕಿ ಪಕ್ಷದ ಸಂಘಟನೆಯತ್ತ ಗಮನಹರಿಸಿ: ಮೊಯ್ಲಿ
ಚಿಕ್ಕಬಳ್ಳಾಪುರ , ಭಾನುವಾರ, 30 ಜೂನ್ 2013 (11:50 IST)
PTI
ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ ಪಕ್ಷದಲ್ಲಿ ಯಾರನ್ನೂ ಅಮಾನತು ಮಾಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಡಾ.ಎಂ. ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಎದುರು ಸ್ಫೋಟಗೊಂಡ ಪಕ್ಷದಲ್ಲಿನ ಭಿನ್ನಮತ ಚಟುವಟಿಕೆ ಕುರಿತು ಚರ್ಚಿಸಲು ಬೆಂಗಳೂರಿನ ತಮ್ಮ ನಿವಾಸಕ್ಕೆ ಆಗಮಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಆಂಜನಪ್ಪ ಹಾಗೂ ಶಾಸಕ ಸುಧಾಕರ್‌ ತಂದೆ ಕೇಶವ ರೆಡ್ಡಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದಲ್ಲಿ ಭಿನ್ನಮತ ತೊಡೆದು ಹಾಕಿ, ಎಲ್ಲಾ ಒಟ್ಟಾಗಿ ಪಕ್ಷ ಸಂಘಟಿಸುವತ್ತ ಮುನ್ನಡೆಯಬೇಕೆಂದು ತಾಕೀತು ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಪಕ್ಷದ ಕೆಲವರ ಮೇಲೆ ಶಿಸ್ತು ಕ್ರಮ ಜರುಗಿಸಲು ಕೆಪಿಸಿಸಿ ಅಧ್ಯಕ್ಷರಿಗೆ ಶಾಸಕ ಸುಧಾಕರ್‌ ಪತ್ರ ಬರೆದಿದ್ದರು. ಅದರಂತೆ ಕ್ಷೇತ್ರದ ಸಂಸದ ವೀರಪ್ಪ ಮೊಯ್ಲಿಯವರ ಗಮನಕ್ಕೂ ಈ ವಿಷಯ ತರಲಾಗಿತ್ತು. ಈ ವಿಷಯಕ್ಕೆ ಜೂ.18 ರಂದು ಚಿಕ್ಕಬಳ್ಳಾಪುರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಬಂದಾಗ ಎರಡು ಗುಂಪಿನ ಭಿನ್ನಮತ ಸ್ಫೋಟಗೊಂಡಿತ್ತು.

ಶನಿವಾರ ಈ ವಿಷಯದ ಬಗ್ಗೆ ಬೆಂಗಳೂರಿನಲ್ಲಿ ವೀರಪ್ಪ ಮೊಯ್ಲಿಯವರಿಗೆ ಕಾಂಗ್ರೆಸ್‌ ಭಿನ್ನ ಚಟುವಟಿಕೆ ನಡೆಸಿದ 7 ಮಂದಿಗೆ ನೋಟೀಸ್‌ ಕೆಪಿಸಿಸಿಯಿಂದ ನೀಡಲಾಗಿದ್ದು ಅಮಾನತು ಮಾಡಬೇಕೆಂದು ಶಾಸಕ ಸುಧಾಕರ್‌ ತಂದೆ ಕೇಶವ ರೆಡ್ಡಿ, ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ನಗರಸಭೆ ಸದಸ್ಯ ಗಜೇಂದ್ರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಮೂರ್ತಿ ಇತರರು ಮೊಯ್ಲಿ ಅವರಿಗೆ ಮನವರಿಕೆ ಮಾಡಿಕೊಟ್ಟಿದೆ ಎನ್ನಲಾಗಿದೆ.

ಇದೇವೇಳೆ ಹಾಜರಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಆಂಜನಪ್ಪ, ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಸೋಮಶೇಖರ್‌, ಮಾಜಿ ಶಾಸಕ ಎಂ.ಶಿವಾನಂದ್‌, ಕೆಪಿಸಿಸಿ ಸದಸ್ಯರಾದ ಲಾಯರ್‌ ನಾರಾಯಣಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಎಂ.ಪ್ರಕಾಶ್‌, ಭರಣಿ ವೆಂಕಟೇಶ್‌ ಇತರರು ಶಾಸಕರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿತು ಎನ್ನಲಾಗಿದೆ.

ಒಟ್ಟಾರೆ ಸಂಸತ್‌ ಚುನಾವಣೆ ಮೇಲೆ ಕಣ್ಣಿಟ್ಟಿರುವ ಮೊಯ್ಲಿ ಪಕ್ಷದಲ್ಲಿ ಯಾವುದೇ ಮುಖಂಡರ ವೈರುತ್ವ ಕಟ್ಟಿಕೊಳ್ಳುವುದಕ್ಕಿಂತ ಸಮಾನತೆ ಕಾಯ್ದುಕೊಳ್ಳುವ ತಂತ್ರ ಅನುಸರಿಸುತ್ತಿದ್ದು ಜಿಲ್ಲೆಯಲ್ಲಿನ ಪಕ್ಷದಲ್ಲಿನ ಭಿನ್ನಮತ ಮುಂದಿನ ದಿನಗಳ ಯಾವಮಟ್ಟಕ್ಕೆ ಬಂದು ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Share this Story:

Follow Webdunia kannada