Select Your Language

Notifications

webdunia
webdunia
webdunia
webdunia

ಬಿಜೆಪಿ ರಾಜ್ಯ ನಾಯಕರು ಸರಿಯಾಗಿಲ್ಲ: ಸಾಂಗ್ಲಿಯಾನ

ಬಿಜೆಪಿ ರಾಜ್ಯ ನಾಯಕರು ಸರಿಯಾಗಿಲ್ಲ: ಸಾಂಗ್ಲಿಯಾನ
ಬೆಂಗಳೂರು , ಬುಧವಾರ, 30 ಜುಲೈ 2008 (11:08 IST)
ರಾಜ್ಯದ ಕೆಲವು ನಾಯಕರ ಸಣ್ಣತನದಿಂದ ಬಿಜೆಪಿ ಎಲ್ಲಾ ವರ್ಗದ ವಿಶ್ವಾಸವನ್ನು ಗಳಿಸುವಲ್ಲಿ ವಿಫಲವಾಗುತ್ತಿದೆ ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡ ಸಂಸದ ಡಾ.ಎಚ್.ಟಿ. ಸಾಂಗ್ಲಿಯಾನ ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ವಿಶ್ವಾಸಮತ ಸಂದರ್ಭದಲ್ಲಿ ಯುಪಿಎ ಪರ ಮತ ಚಲಾಯಿಸಿ, ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಅವರು, ನಗರದಲ್ಲಿ ಮಂಗಳವಾರ ನಡೆದ ಹಿತಚಿಂತಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿ ಒಳ್ಳೆಯ ಪಕ್ಷ ಮಾತ್ರವಲ್ಲದೆ, ಬಿಜೆಪಿಯ ಕೇಂದ್ರ ನಾಯಕರು ಉತ್ತಮರಿದ್ದಾರೆ. ಆದರೆ ರಾಜ್ಯದ ಕೆಲ ನಾಯಕರು ಸರಿಯಾಗಿಲ್ಲ ಎಂದು ದೂರಿದರು.

ಅಣು ಒಪ್ಪಂದ ದೇಶದ ಹಿತಾಸಕ್ತಿಗೆ ಪೂರಕವಾದದ್ದರಿಂದ ತಾವು ಲೋಕಸಭೆಯಲ್ಲಿ ವಿಶ್ವಾಸಮತ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಮತ ಚಲಾಯಿಸಿ ಸರಿಯಾದ ನಿರ್ಧಾರವನ್ನೇ ಕೈಗೊಂಡಿದ್ದೇನೆ. ಈ ತೀರ್ಮಾನದ ಬಗ್ಗೆ ಕ್ಷೇತ್ರದ ಮತದಾರರು ಸೇರಿದಂತೆ ಇಡೀ ದೇಶವೇ ಸಂತಸಗೊಂಡಿದೆ ಎಂದು ಅವರು ವಿವರಿಸಿದರು.

ಆದರೆ ವಿಶ್ವಾಸಮತ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಘಟಕದ ಸದಸ್ಯರು ಹಾಗೂ ಮುಖಂಡರು ತಮ್ಮ ಬಳಿ ಅನುಚಿತವಾಗಿ ವರ್ತಿಸಿದರು. ಎಷ್ಟು ಹಣ ಪಡೆದಿರುವೆ ಎಂದು ಕೇಳಿದ್ದಾರೆ. ಇದರಿಂದ ತಮ್ಮ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಬಿಜೆಪಿಯಿಂದ ಉಚ್ಚಾಟಿತಗೊಂಡಿದ್ದೇನೆ. ಮುಂದಿನ ತೀರ್ಮಾನದ ಕುರಿತು ಇನ್ನು ನಿರ್ಧರಿಸಿಲ್ಲ ಎಂದು ತಿಳಿಸಿದರು.

Share this Story:

Follow Webdunia kannada