Select Your Language

Notifications

webdunia
webdunia
webdunia
webdunia

ಬಳ್ಳಾರಿ ಬಿಜೆಪಿ ಕಚೇರಿಯಲ್ಲಿ ಗುಂಡು ಹಾರಾಟ, ಹಲವರಿಗೆ ಗಾಯ

ಬಳ್ಳಾರಿ ಬಿಜೆಪಿ ಕಚೇರಿಯಲ್ಲಿ ಗುಂಡು ಹಾರಾಟ, ಹಲವರಿಗೆ ಗಾಯ
ಬಳ್ಳಾರಿ , ಬುಧವಾರ, 30 ನವೆಂಬರ್ 2011 (11:29 IST)
PR
ಪಾಲಿಕೆ ಸದಸ್ಯರೊಬ್ಬರ ಭದ್ರತಾ ಸಿಬ್ಬಂದಿಯೊಬ್ಬರ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ, ಹತ್ತು ಜನರಿಗೆ ಗಾಯಗಳಾದ ಘಟನೆ ನಗರದ ಮೋಕಾ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಆವರಣದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪಾಲಿಕೆ ಸದಸ್ಯ ಸಂಜಯ್ ಅವರ ಭದ್ರತೆಗಾಗಿ ನಿಯುಕ್ತಿಗೊಂಡಿದ್ದ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಕಾನ್ಸಸ್ಟೇಬಲ್ ಪುರುಷೋತ್ತಮ ಎಂಬುವವರ 9ಎಂಎಂ ಸ್ಟೆನ್‌ಗನ್‌ನಿಂದ 20 ಸುತ್ತು ಗುಂಡುಗಳು ಹಾರಿದ್ದು, ಎಲ್ಲ ಗುಂಡುಗಳೂ ನೆಲಕ್ಕೆ ತಾಕಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆಯಲಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ವಾಹನದಲ್ಲಿ ಆಗಮಿಸಿದ್ದ ಸಂಜಯ್ ಹಾಗೂ ಅವರೊಂದಿಗಿದ್ದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್, ಕಚೇರಿಯ ಬಾಗಿಲ ಬಳಿ ಬಂದಾಗ ದಿಢೀರ್ ಗುಂಡುಗಳು ಹಾರಿದ್ದವು.

ಗುಂಡು ತಾಕಿದ ರಭಸಕ್ಕೆ ನೆಲದಲ್ಲಿದ್ದ ಚಿಕ್ಕಚಿಕ್ಕ ಕಲ್ಲುಗಳು ಸಿಡಿದು ಸಂಜಯ್, ವಿನೋದ್ ಒಳಗೊಂಡಂತೆ ಅಲ್ಲೇ ಇದ್ದ 10ಕ್ಕೂ ಹೆಚ್ಚು ಜನರಿಗೆ ತಾಕಿದ್ದರಿಂದ ಕಾಲು, ಎದೆ ಮತ್ತು ಬೆನ್ನುಗಳಿಗೆ ತರಚಿದ ಗಾಯಗಳಾಗಿವೆ. ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.

ಉಪ ಚುನಾವಣೆ ನಾಮಪತ್ರ ಪ್ರಕ್ರಿಯೆ ಆರಂಭವಾಗುವವರೆಗೂ ಬಿ.ಶ್ರೀರಾಮುಲು ಪರ ಇದ್ದ ಪಾಲಿಕೆ ಸದಸ್ಯ ಸಂಜಯ್, ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ ನಾಪಪತ್ರ ಸಲ್ಲಿಸಿದ ನಂತರ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಬೆಂಬಲ ಸೂಚಿಸಿ, ಬಿಜೆಪಿಯೊಂದಿಗೇ ಗುರುತಿಸಿಕೊಂಡಿದ್ದರು.

ಕಳೆದ ನಾಲ್ಕೈದು ದಿನಗಳ ಹಿಂದೆ ಭದ್ರತೆ ನೀಡುವಂತೆ ಅವರು ಪೊಲೀಸರಿಗೆ ಮೌಖಿಕವಾಗಿ ಮನವಿ ಮಾಡಿಕೊಂಡಿದ್ದರಿಂದ ಮಂಗಳವಾರ ಸಂಜೆ ಪುರುಷೋತ್ತಮನನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಇತ್ತೀಚೆಗಷ್ಟೇ ಶಸ್ತ್ರಾಸ್ತ್ರ ತರಬೇತಿ ಮುಗಿಸಿಕೊಂಡು ಬಂದಿದ್ದ ಪುರುಷೋತ್ತಮನ ಅಚಾತುರ್ಯದಿಂದ, ಆಕಸ್ಮಿಕವಾಗಿ ಗುಂಡು ಹಾರಿದೆ. ಘಟನೆ ಕುರಿತು ಡಿವೈಎಸ್ಪಿ ಒಬ್ಬರನ್ನು ತನಿಖೆಗೆ ಆದೇಶಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

Share this Story:

Follow Webdunia kannada