Select Your Language

Notifications

webdunia
webdunia
webdunia
webdunia

ನಾಳೆ ಶೆಟ್ಟರ್ ಸರಕಾರ ಪತನಕ್ಕೆ ಯಡ್ಡಿ ಮುಹೂರ್ತ

ನಾಳೆ ಶೆಟ್ಟರ್ ಸರಕಾರ ಪತನಕ್ಕೆ ಯಡ್ಡಿ ಮುಹೂರ್ತ
ಬೆಂಗಳೂರು , ಮಂಗಳವಾರ, 22 ಜನವರಿ 2013 (11:32 IST)
PR
PR
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸರ್ಕಾರ ಪತನಕ್ಕೆ ಕೊನೆಗೂ ಮುಂದಾಗಿರುವ ಕೆಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಂತಿಮವಾಗಿ ಜ.23 (ನಾಳೆ) ಕ್ಕೆ ತಮ್ಮ ಬೆಂಬಲಿಗ ಸಚಿವರು, ಶಾಸಕರಿಂದ ರಾಜೀನಾಮೆ ಕೊಡಿಸಲು ತೀರ್ಮಾನಿಸಿರುವುದರಿಂದ ಬಿಜೆಪಿ ಸರ್ಕಾರ ಅವಧಿ ಪೂರೈಸುವ ಮುನ್ನ ಪತನದಂಚಿಗೆ ಬಂದು ನಿಂತಿದೆ.

ಇಂದು ಸಂಜೆ ಮತ್ತು ನಾಳೆ ಬೆಳಿಗ್ಗೆ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಯಡಿಯೂರಪ್ಪ ತಮ್ಮ ಬೆಂಬಲಿಗ ಸಚಿವರು, ಶಾಸಕರ ಸಭೆ ನಡೆಸಲಿದ್ದು, 2 ಹಂತದಲ್ಲಿ ಸಚಿವರು, ಶಾಸಕರು ವಿಧಾನಸಭಾ ಸ್ಪೀಕರ್‌ರವರಿಗೆ ರಾಜೀನಾಮೆ ನೀಡಲು ನಿರ್ಧರಿಸಲಾಗಿದೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ರ ಭೇಟಿಗೆ ಈ ಶಾಸಕರು ಸಮಯ ನಿಗದಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಸರ್ಕಾರಕ್ಕೆ ತಾವು ನೀಡಿರುವ ಬೆಂಬಲ ವಾಪಾಸ್ ಪಡೆದಿರುವ ಬಗ್ಗೆ ರಾಜ್ಯಪಾಲರಿಗೆ ಲಿಖಿತ ಪತ್ರ ನೀಡಲಿದ್ದಾರೆ. ಈ ಮೂಲಕ ಜಗದೀಶ್ ಶೆಟ್ಟರ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದ್ದಾರೆ.

ಯಡಿಯೂರಪ್ಪ ಬೆಂಬಲಿಗ ಶಾಸಕರು ಬೆಂಬಲ ವಾಪಾಸ್ ಕುರಿತು ಲಿಖಿತ ಪತ್ರ ನೀಡಿದರೆ ಸಹಜವಾಗಿ ರಾಜ್ಯಪಾಲರು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರಿಗೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸುತ್ತಾರೆಂಬ ಕಾರಣಕ್ಕೆ ಚಾಣಾಕ್ಷ ರಾಜಕೀಯ ನಡೆಯನ್ನು ನಡೆಸಲು ಈ ಶಾಸಕರುಗಳು ಮುಂದಾಗಿದ್ದಾರೆ. ಒಂದು ವೇಳೆ ಜೆಡಿಎಸ್, ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದರೆ ಆಗ ಅನುಸರಿಸಬೇಕಾದ ಮಾರ್ಗಗಳ ಕುರಿತೂ ನಾಳಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ.

ಒಟ್ಟು 2 ಹಂತದಲ್ಲಿ ಸಚಿವ, ಶಾಸಕರುಗಳು ರಾಜೀನಾಮೆ ನೀಡಲು ಸೂಚಿಸಿರುವ ಯಡಿಯೂರಪ್ಪನವರು ಮೊದಲ ಹಂತದಲ್ಲಿ ಇಬ್ಬರು ಸಚಿವರೂ ಸೇರಿದಂತೆ 14 ರಿಂದ 15 ಮಂದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಂತರ 2 ನೇ ಹಂತದಲ್ಲಿ ಇನ್ನಷ್ಟು ಶಾಸಕರ ಬೆಂಬಲ ಪಡೆದು ಅವರಿಂದಲೂ ರಾಜೀನಾಮೆ ಕೊಡಿಸುವುದು ಯಡಿಯೂರಪ್ಪನವರ ತಂತ್ರವಾಗಿದೆ.

ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಿ ಉತ್ತರ ಕರ್ನಾಟಕದ ಲಿಂಗಾಯಿತ ಕೋಮಿನ ಜಗದೀಶ್ ಶೆಟ್ಟರ್‌ರವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದ ಯಡಿಯೂರಪ್ಪನವರಿಗೆ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಪರಿಸ್ಥಿತಿ ಉಂಟಾಗಿದ್ದರಿಂದ ಶೆಟ್ಟರ್ ಸರ್ಕಾರ ಪತನಕ್ಕೆ ಮೀನಾಮೇಷ ಎಣಿಸುವಂತಾಗಿತ್ತು. ಇದೀಗ ಬೆಂಬಲಿಗ ಶಾಸಕರ ಒತ್ತಡಕ್ಕೆ ಮಣಿದಿರುವ ಯಡಿಯೂರಪ್ಪನವರು ಜಗದೀಶ್ ಶೆಟ್ಟರ್‌ರವರಿಗೆ ಬಜೆಟ್ ಮಂಡಿಸಲು ಅವಕಾಶ ನೀಡಬಾರದೆಂಬ ತೀರ್ಮಾನಕ್ಕೆ ಬಂದಿದ್ದು, ಕೊನೆಗೂ ಸರ್ಕಾರ ಪತನಕ್ಕೆ ಮುಹೂರ್ತ ನಿಗದಿಪಡಿಸಿದ್ದಾರೆ.

ರಾಜೀನಾಮೆ ನೀಡುವ ಸಂಭವನೀಯ ಸಚಿವ, ಶಾಸಕರು: ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, ಶಾಸಕರುಗಳಾದ ಬಿ.ಪಿ.ಹರೀಶ್, ಹರತಾಳು ಹಾಲಪ್ಪ, ಶ್ರೀಶೈಲಪ್ಪ ಬಿದನೂರು, ಚಂದ್ರಪ್ಪ, ತಿಪ್ಪೇಸ್ವಾಮಿ, ಸುನೀಲ್ ವಲ್ಯಾಪುರೆ, ಪ್ರಹ್ಲಾದ್ ರೆಹಮಾನಿ, ಬಸವರಾಜ ಪಾಟೀಲ್ ಅಟ್ಟೂರ್, ನೆಹರು ಓಲೇಕಾರ್, ರಾಮಣ್ಣ ಲಮಾಣಿ, ಎಸ್.ಐ.ಚಿಕ್ಕನಗೌಡರ್, ತರೀಕೆರೆ ಸುರೇಶ್, ವಿಠಲ ಕಟಕದೊಂಡ ಮೊದಲ ಹಂತವಾಗಿ ಜ.23 ರಂದು ರಾಜೀನಾಮೆ ನೀಡುವ ಸಾಧ್ಯತೆಯಿದೆ.

Share this Story:

Follow Webdunia kannada