Select Your Language

Notifications

webdunia
webdunia
webdunia
webdunia

ದುಡುಕಿನ ನಿರ್ಧಾರ ಕೈಗೊಂಡ 'ಮಿನುಗುತಾರೆ': ಗುಡಗೇರಿ

ದುಡುಕಿನ ನಿರ್ಧಾರ ಕೈಗೊಂಡ 'ಮಿನುಗುತಾರೆ': ಗುಡಗೇರಿ
ಬೆಂಗಳೂರು , ಭಾನುವಾರ, 20 ಸೆಪ್ಟಂಬರ್ 2009 (12:12 IST)
ಒಂದು ವೇಳೆ ಮಿನುಗುತಾರೆ ಕಲ್ಪನಾ ಇಂದು ಬದುಕಿದ್ದಿದ್ದರೆ ನಾನು ಮತ್ತು ಆಕೆ ರಂಗಭೂಮಿಯ 'ಧ್ರುವತಾರಾ ದಂಪತಿ'ಗಳಾಗಿರುತ್ತಿದ್ದೆವು. ಆಕೆಯ ವಿಷಯದಲ್ಲಿ ನಾನು ನಿರಪರಾಧಿ. ಆಕೆ ತುಂಬಾ ದುಡುಕಿನ ನಿರ್ಧಾರ ತೆಗೆದುಕೊಂಡರು ಎಂದು ಹಿರಿಯ ರಂಗಕರ್ಮಿ ಗುಡಗೇರಿ ಬಸವರಾಜ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ 'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.

ಪುಟ್ಟಣ್ಣ ಕಣಗಾಲರ ಚಿತ್ರಗಳ ನಂತರ, ಇಡೀ ಕುಟುಂಬವೇ ಕುಳಿತು ನೋಡಬಹುದಾದ ಚಲನಚಿತ್ರಗಳು ಬರುತ್ತಿಲ್ಲ. ಅಶ್ಲೀಲ ಚಿತ್ರಗಳನ್ನು ಜನ ನೋಡಬೇಕಾಗಿ ಬಂದಿದೆ ಎಂದು ವಿಷಾದಿಸಿದ ಬಸವರಾಜ್, ಕಲೆಯು ವ್ಯಾಪಾರೀಕರಣದತ್ತ ತಿರುಗಿರುವುದರಿಂದ ಕಲಾವಿದರಲ್ಲಿಯೂ ಶ್ರದ್ದಾ-ಭಕ್ತಿಗಳ ಕೊರತೆ ಕಂಡುಬರುತ್ತಿದೆ ಎಂದು ನುಡಿದರು.

ದೂರದರ್ಶನದ ಹೊಡೆತದಿಂದ ತತ್ತರಿಸಿರುವ ರಂಗಭೂಮಿಯು ಮತ್ತೆ ತನ್ನ ವೈಭವವನ್ನು ಕಾಣಬೇಕೆಂದರೆ ಕಲಾರಾಧಕ ನಾಟಕ ಕಂಪೆನಿಗಳಿಗೆ ಸರ್ಕಾರವು ಧನಸಹಾಯ ಮಾಡಿ ಕಲಾವಿದರನ್ನು ಪೋಷಿಸಬೇಕು. ಹಿಂದೆ ನನಗೆ ದೈಹಿಕ ಸಾಮರ್ಥ್ಯ ಮತ್ತು ವಯಸ್ಸಿತ್ತು; ಆದರೆ ಹಣವಿರಲಿಲ್ಲ. ಈಗ ಹಣ ಬರುತ್ತಿದ್ದರೂ ವಯಸ್ಸಾಗಿರುವ ಕಾರಣ ಹೆಚ್ಚಿನ ಸೇವೆ ಸಲ್ಲಿಸಲು ಆಗುತ್ತಿಲ್ಲ ಎಂದು ಬಸವರಾಜ್ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ 'ಭೂಕೈಲಾಸ' ನಾಟಕದ ಸಂಭಾಷಣೆಯ ತುಣುಕೊಂದನ್ನು ಅವರು ಅಭಿನಯಪೂರ್ವಕವಾಗಿ ಹೇಳಿದಾಗ ಇಡೀ ಸಭಾಂಗಣವೇ ಕರತಾಡನದ ಶಬ್ದದಲ್ಲಿ ತುಂಬಿಹೋಯಿತು.

Share this Story:

Follow Webdunia kannada