Select Your Language

Notifications

webdunia
webdunia
webdunia
webdunia

ಛೆ..ಯಡ್ಡಿಯೊಂದಿಗೆ ಹೋಗ್ಬಾರ್ದಿತ್ತು: ನಾಗಮಾರಪಳ್ಳಿ

ಛೆ..ಯಡ್ಡಿಯೊಂದಿಗೆ ಹೋಗ್ಬಾರ್ದಿತ್ತು: ನಾಗಮಾರಪಳ್ಳಿ
ಬೀದರ್ , ಮಂಗಳವಾರ, 30 ಜುಲೈ 2013 (14:22 IST)
PR
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪಾಳಯದಲ್ಲಿರುವ ಶಾಸಕರಿಗೆ ಗಾಳ ಹಾಕುವ ಪರೋಕ್ಷ ಪ್ರಯತ್ನವನ್ನು ಸಂಸದ ಧರ್ಮಸಿಂಗ್ ನಡೆಸಿದ್ದರೆ, ಇದಕ್ಕೆ ನಾನು ಸಿದ್ಧ ಎಂಬಂತೆ 'ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದೆ' ಎಂದು ಹೇಳುವ ಮೂಲಕ ಕೆಜೆಪಿ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಅಚ್ಚರಿ ಮೂಡಿಸಿದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯು ವಾರ್ತಾ ಇಲಾಖೆ ಸಹಯೋಗದೊಂದಿಗೆ ನಗರದ ಹೋಟೆಲ್ ಮಯೂರಾದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಸಂಗ ನಡೆಯಿತು. ಅಲ್ಲದೆ ಧರಂ ಹಾಗೂ ನಾಗಮಾರಪಳ್ಳಿ ಅವರಿಂದ ಹೊರಬಿದ್ದ 'ತಪ್ಪಾಯ್ತು' ಎಂಬ ಮಾತುಗಳು ಎಲ್ಲರ ಗಮನ ಸೆಳೆದವು.

ಮಾತು ಕೇಳ್ಲಿಲ್ಲ..: 'ಗುರುಪಾದಪ್ಪ ನನ್ನ ಮಾತು ಕೇಳ್ಲಿಲ್ಲ ಬೇಡವೆಂದರೂ ಪಕ್ಷ ಬಿಟ್ರು, ಕೇಳಿದ್ರೆ ಇವತ್ತು ಅವರಲ್ಲಿ ಮಂತ್ರಿಯ ಗತ್ತು ಇರ್ತಿತ್ತು. ಹಾಗೆಯೇ ಗುಲ್ಬರ್ಗದ ಬಿ.ಆರ್. ಪಾಟೀಲ್ ಕೂಡ ಬಿಎಸ್‌ವೈ ಪಡೆ ಸೇರಿ ಈಗ ಶಾಸಕರಷ್ಟೇ ಆಗಿದ್ದಾರೆ' ಎಂದರು ಧರ್ಮಸಿಂಗ್.

ಅಲ್ಲದೆ, ರಾಷ್ಟ್ರ ರಾಜಕಾರಣದಲ್ಲಿ ಆಗುತ್ತಿರುವ ಬದಲಾವಣೆ ವಿಕೇಂದ್ರೀಕರಣದ ಈ ಸಂದರ್ಭದಲ್ಲಿ ಬೀದರ್ ಮತ್ತು ಗುಲ್ಬರ್ಗದಲ್ಲಿ ರಾಜಕೀಯದಲ್ಲಿ ಬದಲಾವಣೆಗಳಾದ್ರೆ ಆಶ್ಚರ್ಯ ಪಡಬೇಕಿಲ್ಲ ಎಂಬ ಅವರ ಮಾತಿನ ಮೂಲಕ ಕೆಜೆಪಿ ಶಾಸಕರಿಗೆ ಗಾಳ ಹಾಕುತ್ತಿದ್ದಾರೇನೋ ಎಂಬ ಭಾಸ ವ್ಯಕ್ತವಾಯ್ತು.

ಸಂಸದರ ನಂತರ ಭಾಷಣಕ್ಕಿಳಿದ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ, ನಾನು ಧರಂಸಿಂಗ್ ಅವ್ರ ಮಾತು ಕೇಳಿದ್ರ ಮಂತ್ರಿ ಆಗ್ತಿದ್ದೆ. ತಪ್ಪು ಮಾಡೀನಿ, ಅದಕ್ಕ ಅನುಭವಿಸ್ತಿದ್ದೇನೆ. ತಪ್ಪಿಗೆ 'ತಪ್ಪು' ಎಂದು ಒಪ್ಪಬೇಕಾಗುತ್ತದೆ.

ಯಾವತ್ತೂ ಗೆಳೆಯರು: ನಾನು ಪಕ್ಷ ಬಿಟ್ಟು ಪಕ್ಷ ಹೋಗಿ ಏನೇನೋ ಮಾಡಿದೆ. ಅವರು ಸಿಎಂ ಇದ್ದಾಗ ನನ್ನನ್ನು ಮಂತ್ರಿ ಮಾಡಿದ್ರು. ಧರ್ಮಸಿಂಗ್ ಮತ್ತು ನಾನು ಯಾವತ್ತೂ ಗೆಳೆಯರು. ಚುನಾವಣೆ ಎದುರಿಸಿದ್ದೇವೆ. ಆದರೆ ಪ್ರೀತಿಯಿಂದ ಚುನಾವಣೆ ಎದುರಿಸಿದ್ದೇವೆ. ಯಾವತ್ತಿಗೂ ನನ್ನಲ್ಲಿ ಧರಂ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಸಮಯ ಬರ್ತದೆ, ಸಮಯ ಹೋಗ್ತದೆ. ಜೀವನದಲ್ಲಿ ಮನುಷ್ಯನಿಗೆ ಹೊಸ ಹೊಸ ಅನುಭವಗಳು ಬರುತ್ತವೆ. ಯಾವ ದಿನ ಏನಾಗುತ್ತೆ ಯಾರಿಗೆ ಗೊತ್ತು. ಸಂದರ್ಭ ಬಂದಾಗ ಏನ್ ಆಗ್ಬೇಕೋ ಅದು ಆಗುತ್ತೆ. ನನಗಂತೂ ಭವಿಷ್ಯ ಗೊತ್ತಿಲ್ಲ ಎಂದ ನಾಗಮಾರಪಳ್ಳಿ, ಕೆಜೆಪಿಯಿಂದ ದೂರವಾಗಲು ಮುಹೂರ್ತ ಹುಡುಕುತ್ತಿದ್ದಾರೇನೋ ಎಂಬ ಭಾಸವಾಗಿದ್ದಂತೂ ಹೌದು.

Share this Story:

Follow Webdunia kannada