Select Your Language

Notifications

webdunia
webdunia
webdunia
webdunia

ಗಡಿ ಒತ್ತುವರಿ: ತನಿಖೆಗೆ ಕಾಂಗ್ರೆಸ್ ಆಗ್ರಹ

ಗಡಿ ಒತ್ತುವರಿ: ತನಿಖೆಗೆ ಕಾಂಗ್ರೆಸ್ ಆಗ್ರಹ
ಬೆಂಗಳೂರು , ಶನಿವಾರ, 22 ನವೆಂಬರ್ 2008 (12:30 IST)
ಆಂಧ್ರದ ಗಣಿ ಮಾಲೀಕರು ಬಳ್ಳಾರಿ ಜಿಲ್ಲೆಯಲ್ಲಿ ರಾಜ್ಯದ ಗಡಿಯನ್ನೇ ಒತ್ತುವರಿ ಮಾಡಿಕೊಂಡು ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡುತ್ತಿರುವ ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರಿಗೆ ಅಥವಾ ಸಿಬಿಐಗೆ ವಹಿಸಬೇಕೆಂದು ಕೆಪಿಸಿಸಿ ಆಗ್ರಹಿಸಿದೆ.

ಗಡಿ ಭಾಗದ ಅತಿಕ್ರಮಣ, ಅಕ್ರಮ ಗಣಿಗಾರಿಕೆ ಕುರಿತು ವಿಧಾನಪರಿಷತ್ ಪ್ರತಿಪಕ್ಷ ನಾಯಕ ವಿ.ಎಸ್. ಉಗ್ರಪ್ಪ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಸತ್ಯಶೋಧನಾ ಸಮಿತಿ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಆರ್. ವಿ. ದೇಶಪಾಂಡೆ, ಈ ಕುರಿತು ತಕ್ಷಣ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಈ ಕುರಿತು ಸಿದ್ಧಪಡಿಸಿರುವ ವರದಿಯ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದ ಅವರು, ಇದು ಯಾರದೇ ವಿರುದ್ಧದ ವರದಿಯಲ್ಲ. ರಾಜ್ಯದ ಹಿತ ದೃಷ್ಟಿಯಿಂದ ಸ್ಥಳ ವೀಕ್ಷಣೆ ಮತ್ತು ವಿಚಾರಣೆ ನಡೆಸಿ ಪ್ರಾಮಾಣಿಕವಾಗಿ ಸಿದ್ಧಪಡಿಸಿದ ವರದಿ. ಅಕ್ರಮ ಗಣಿಗಾರಿಕೆ ಮತ್ತು ಗಡಿ ಒತ್ತುವರಿಯಿಂದ ರಾಜ್ಯದ ಬೊಕ್ಕಸಕ್ಕೆ ಆದಾಯ ನಷ್ಟವಾಗಿದೆ ಎಂದು ತಿಳಿಸಿದರು.

ವರದಿಯಲ್ಲಿ ತಿಳಿಸಿರುವಂತೆ ಕರ್ನಾಟಕ ಗಡಿಭಾಗದಲ್ಲಿ ಅರ್ಧ ಕಿಮೀ ಅಗಲ, 32 ಕಿಮೀ. ಉದ್ದದಷ್ಟು ಪ್ರದೇಶ ಆಂಧ್ರದ ಗಣಿ ಮಾಲೀಕರಿಂದ ಒತ್ತುವರಿಯಾಗಿದೆ ಎಂಬುದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಶೀಘ್ರವೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

Share this Story:

Follow Webdunia kannada