Select Your Language

Notifications

webdunia
webdunia
webdunia
webdunia

ಕಿರುಕುಳ: ನೌಕರನಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಕಿರುಕುಳ: ನೌಕರನಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ಬೆಂಗಳೂರು , ಮಂಗಳವಾರ, 16 ಜುಲೈ 2013 (13:38 IST)
WD
ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಸಾಮಾನ್ಯ ಪ್ರವೇಶ ಪರೀಕ್ಷಾ (ಸಿಇಟಿ) ಕೇಂದ್ರದ ಹೊರಗುತ್ತಿಗೆ ನೌಕರನೊಬ್ಬ ವಿಧಾನಸೌಧದ ಉನ್ನತ ಶಿಕ್ಷಣ ಸಚಿವರ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕಾಡುಗೋಡಿ ಸಮೀಪದ ದಿಣ್ಣೂರು ಗ್ರಾಮದ ನಿವಾಸಿ ಆನಂದ್‌ ಕುಮಾರ್‌ (27) ಎಂಬಾತನೇ ಆತ್ಮಹತ್ಯೆಗೆ ಪ್ರಯತ್ನಿಸಿದವ. ತನಗೆ ಕಾರ್ಯನಿರ್ವಹಿಸಲು ಅವಕಾಶ ಕೊಡದೆ ಹಿಂಸೆ ಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಆನಂದ್‌ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಪೊಲೀಸರು ಕರೆದೊಯ್ದು ನಗರದ ಬೌರಿಂಗ್‌ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಆನಂದ್‌ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಏನಾಯ್ತು?: ಕಳೆದ ನಾಲ್ಕು ವರ್ಷಗಳಿಂದ ನಗರದ ಮಲ್ಲೇಶ್ವರ 18ನೇ ಮುಖ್ಯರಸ್ತೆಯಲ್ಲಿರುವ ಸಾಮಾನ್ಯ ಪ್ರವೇಶ ಪರೀಕ್ಷಾ (ಸಿಇಟಿ) ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಆನಂದ್‌ ಕುಮಾರ್‌ ದ್ವಿತೀಯ ದರ್ಜೆ ಗುಮಾಸ್ತ. ಈಚೆಗೆ ಪರೀಕ್ಷಾ ಕೇಂದ್ರದ ಆಡಳಿತಾಧಿಕಾರಿ ಎಸ್‌.ಬಿ.ಕುಲಕರ್ಣಿ ಮತ್ತು ಆನಂದ ನಡುವೆ ಮನಸ್ತಾಪ ಮೂಡಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವ ಹಿಸಲು ಆತನಿಗೆ ಕುಲಕರ್ಣಿ ನಿರ್ಬಂಧ ವಿಧಿಸಿದ್ದರು ಎಂದು ತಿಳಿದು ಬಂದಿದೆ.

ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ಭೇಟಿಯಾಗಿ ಆನಂದ ಕುಮಾರ್‌ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಈ ಮಧ್ಯೆ ಕುಲಕರ್ಣಿ ವಿರುದ್ಧ ಜಾತಿ ನಿಂದನೆ ಆರೋಪದಡಿ ಆನಂದಕುಮಾರ್‌, ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ವಿರುದ್ಧ ಪ್ರಕರಣವನ್ನು ಸಹ ದಾಖಲಿಸಿದ್ದರು. ಈ ಘಟನೆ ಬಳಿಕ ಅಧಿಕಾರಿ ಮತ್ತು ಸಿಬ್ಬಂದಿ ನಡುವಿನ ಕಲಹ ವಿಕೋಪಕ್ಕೆ ತಿರುಗಿದೆ.

ತರುವಾಯ ಆನಂದ್‌ಗೆ ಸಿಇಟಿ ಕೇಂದ್ರದ ಪ್ರವೇಶಕ್ಕೆ ಆಡಳಿತಾಧಿಕಾರಿಗಳು ಅನುಮತಿ ನಿರಾಕರಿಸಿದರು. ಇದರಿಂದ ಬೇಸರಗೊಂಡ ಆನಂದ ಕುಮಾರ್‌ ಅಂತಿಮವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಆನಂದ ಕುಟುಂಬದವರು ಹೇಳುತ್ತಾರೆ.

ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಮಂತ್ರಿಗಳಲ್ಲಿ ಮತ್ತೂಮ್ಮೆ ಮನವಿ ಸಲ್ಲಿಸಲು ಅವರು ತೀರ್ಮಾನಿಸಿದರು. ಅದರಂತೆ ವಿಧಾನಸೌಧದ 3ನೇ ಮಹಡಿಯಲ್ಲಿರುವ ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಅವರನ್ನು ಭೇಟಿಯಾಗಿ ಸಿಇಟಿ ಕೇಂದ್ರ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದ ಬಳಿಕ ಆನಂದ್‌ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರು ಕೊಟ್ಟರೂ ಪ್ರಯೋಜನವಾಗ್ಲಿಲ್ಲ

ಸಕಾರಣವಿಲ್ಲದೆ ಸೋದರ ಆನಂದ ಕುಮಾರ್‌ನಿಗೆ ಸಿಇಟಿ ಅಧಿಕಾರಿಗಳಾದ ಎಸ್‌.ಬಿ.ಕುಲಕರ್ಣಿ ಹಾಗೂ ಶ್ರೀನಿವಾಸ್‌ ಕಿರುಕುಳ ನೀಡಿದ್ದರು. ಆತನಿಗೆ ರಜಾ ಕೊಡದೆ ಹಿಂಸಿಸಿದ್ದಲ್ಲದೆ ಅಧಿಕಾರಿಗಳು ಜಾತಿ ನಿಂದನೆ ಮಾಡಿ ಅವಮಾನಿಸಿದ್ದರು. ಇದರಿಂದ ಮನನೊಂದು ಆನಂದ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಈ ಹಿಂದೆ ಕೂಡ ಸಿಇಟಿ ಆಡಳಿತಾಧಿಕಾರಿಯಾಗಿದ್ದ ಚಕ್ರವರ್ತಿ ಮೋಹನ್‌, ಕುಲಕರ್ಣಿ ಹಾಗೂ ಶ್ರೀನಿವಾಸ್‌ ವಿರುದ್ಧ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸರ್ಕಾರ ನಮಗೆ ನ್ಯಾಯ ಕೊಡಿಸಲಿ.

Share this Story:

Follow Webdunia kannada