Select Your Language

Notifications

webdunia
webdunia
webdunia
webdunia

ಕಾಶಿಮಠದ ಪರಿತ್ಯಕ್ತ ಸ್ವಾಮೀಜಿ ಬಂಧನ, ವಿಗ್ರಹಗಳು ವಶ

ಕಾಶಿಮಠದ ಪರಿತ್ಯಕ್ತ ಸ್ವಾಮೀಜಿ ಬಂಧನ, ವಿಗ್ರಹಗಳು ವಶ
ಕಡಪ (ಆಂಧ್ರಪ್ರದೇಶ) , ಸೋಮವಾರ, 31 ಅಕ್ಟೋಬರ್ 2011 (13:37 IST)
ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯದ ಆರಾಧ್ಯ ಪೀಠವಾಗಿರುವ, ವಾರಾಣಸಿಯಲ್ಲಿರುವ ಕಾಶಿ ಮಠ ಸಂಸ್ಥಾನದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪರಿತ್ಯಕ್ತ ಶಿಷ್ಯರಾದ ರಾಘವೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಕಡಪದ ಇಂದಿರಾನಗರದ ಫ್ಲ್ಯಾಟ್ ಒಂದರಿಂದ ಶನಿವಾರ ರಾತ್ರಿ ಪೊಲೀಸರು ಬಂಧಿಸಿದ್ದು, ಕಾಶಿ ಮಠಕ್ಕೆ ಸೇರಿದ ಪೂಜಾ ಪರಿಕರಗಳು, ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಕಾಶಿ ಮಠ ಸಂಸ್ಥಾನದ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ತೀರ್ಥರು ಮತ್ತು ಹಿರಿಯ ಸ್ವಾಮೀಜಿಗಳಾದ ಸುಧೀಂದ್ರ ತೀರ್ಥರ ನಡುವೆ ಕಾನೂನು ಹೋರಾಟ ನಡೆಯುತ್ತಿದ್ದು, ಸಂಸ್ಥಾನಕ್ಕೆ ಸಂಬಂಧಿಸಿದ ಮೂಲ ವಿಗ್ರಹಗಳು, ಪೂಜಾ ಸಾಮಗ್ರಿಗಳು ಇತ್ಯಾದಿಗಳನ್ನೆಲ್ಲವನ್ನೂ ಹಿರಿಯ ಸ್ವಾಮೀಜಿಗೆ ಮರಳಿಸಬೇಕು ಎಂದು ಈ ಹಿಂದೆ ನ್ಯಾಯಾಲಯವು ಆದೇಶ ನೀಡಿತ್ತು.

ಆದರೆ, ಅವರು ಈ ಆದೇಶ ಪಾಲಿಸದಿದ್ದ ಕಾರಣದಿಂದಾಗಿ ಪೊಲೀಸರು ಬಂಧಿಸಿದ್ದು, ಅವರ ಮೇಲೆ ಕಾಶಿ ಮಠ ಸಂಸ್ಥಾನದ ಪೂಜಾ ಪರಿಕರಗಳನ್ನು ಕಳವು ಮಾಡಿದ ಆರೋಪ ಹೊರಿಸಲಾಗಿದೆ. ಅವರ ಜೊತೆಯಲ್ಲಿ ಅವರ ಶಿಷ್ಯರಾದ ಲಕ್ಷ್ಮೀಕಾಂತ ಪ್ರಭು ಎಂಬವರೂ ಪೊಲೀಸರ ವಶದಲ್ಲಿದ್ದಾರೆ ಎಂದು ಕಡಪ ಜಿಲ್ಲಾ ಎಸ್ಪಿ ಕುಮಾರ್ ದಾಸ್ ತಿಳಿಸಿದ್ದಾರೆ.

1999ರಿಂದಲೂ ರಾಘವೇಂದ್ರ ತೀರ್ಥರು ಮತ್ತು ಸುಧೀಂದ್ರ ತೀರ್ಥ ಸ್ವಾಮೀಜಿ ನಡುವೆ ಕಾನೂನು ಸಂಘರ್ಷ ನಡೆಯುತ್ತಿದ್ದು, ಜಿಎಸ್‌ಬಿ ಸಮುದಾಯದಲ್ಲಿಯೂ ಭಿನ್ನಾಭಿಪ್ರಾಯ ತಲೆದೋರಿತ್ತು. ತತ್ಪರಿಣಾಮವಾಗಿ ಹಿರಿಯ ಸ್ವಾಮೀಜಿಯವರು ಶಿಷ್ಯತ್ಯಾಗ ಮಾಡಿ, ಬೇರೆಯೇ ಸ್ವಾಮೀಜಿಯನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದರು. ಆದರೆ, ಮಠದ ಮೂಲ ವಿಗ್ರಹ ಮತ್ತು ಇತರ ಪೂಜಾ ಸೊತ್ತು-ಸಾಮಗ್ರಿಗಳು ರಾಘವೇಂದ್ರ ತೀರ್ಥರ ಕೈಯಲ್ಲೇ ಇದ್ದವು.

ಆ ಸಂದರ್ಭದಲ್ಲಿ ಸಂಸ್ಥಾನದ ಮೂಲವಿಗ್ರಹ, ಪೂಜಾ ಸಾಮಗ್ರಿ ಮತ್ತು ಮಠದ ಇತರ ಸೊತ್ತುಗಳು ಯಾರಿಗೆ ಸೇರಿದ್ದೆಂಬ ವಿವಾದವೂ ಹುಟ್ಟಿಕೊಂಡಿತು. ಬಳಿಕ ತಿರುಪತಿಯ ನ್ಯಾಯಾಲಯವೊಂದು, ಅವೆಲ್ಲವೂ ಹಿರಿಯ ಸ್ವಾಮೀಜಿಗೇ ಸೇರಬೇಕೆಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ರಾಘವೇಂದ್ರ ತೀರ್ಥರು ಆಂಧ್ರಪ್ರದೇಶ ಹೈಕೋರ್ಟ್ ಮೊರೆ ಹೋದಾಗ, ಅಲ್ಲಿಯೂ ಅವರಿಗೆ ಪರಿಹಾರ ಸಿಕ್ಕಿರಲಿಲ್ಲ.

ಹೀಗಾಗಿ ಧಾರ್ಮಿಕ ಯಾತ್ರೆ ನಿಮಿತ್ತ ಈ ವಿಗ್ರಹಗಳೊಂದಿಗೆ ಸಂಚಾರ ಮಾಡುತ್ತಿದ್ದ ಸ್ವಾಮೀಜಿಯನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ. ಅವರಿಂದ 8.82 ಲಕ್ಷ ರೂಪಾಯಿ ನಗದು ಹಣ, ಒಂದು ಲ್ಯಾಪ್‌ಟಾಪ್, 600 ವರ್ಷದಷ್ಟು ಹಳೆಯ ಲಕ್ಷ್ಮೀದೇವಿ ಪ್ರತಿಮೆ, 28 ಪಂಚಲೋಹದ ಪ್ರತಿಮೆಗಳು, ಮಠಕ್ಕೆ ಸೇರಿದ ಮುತ್ತು ರತ್ನಗಳು ಹಾಗೂ ಹುಲಿಯ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada