Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಭ್ರಷ್ಟರನ್ನೂ ಸಹಿಸಲ್ಲ: ಆಡ್ವಾಣಿ

ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಭ್ರಷ್ಟರನ್ನೂ ಸಹಿಸಲ್ಲ: ಆಡ್ವಾಣಿ
ಬೆಂಗಳೂರು , ಸೋಮವಾರ, 31 ಅಕ್ಟೋಬರ್ 2011 (09:31 IST)
PR
ಕೇಂದ್ರದ ಯುಪಿಎ ಸರ್ಕಾರ ನಡೆಸಿರುವ ಭ್ರಷ್ಟಾಚಾರ ಮಾತ್ರ ಜನಚೇತನ ಯಾತ್ರೆಯ ಗುರಿಯಲ್ಲ, ಬಿಜೆಪಿ ಸರ್ಕಾರ ನಡೆಸಿರುವ ಭ್ರಷ್ಟಾಚಾರವನ್ನೂ ನಾನು ಸಹಿಸುವುದಿಲ್ಲ. ಈ ಕಾರಣಕ್ಕೇ ಲೋಕಾಯುಕ್ತ ವರದಿಯಲ್ಲಿ ಬಿ.ಎಸ್.ಯಡಿಯೂರಪ್ಪನವರ ಹೆಸರು ಇದೆ ಎಂದ ತಕ್ಷಣ ಅವರ ವಿರುದ್ಧವೂ ಕ್ರಮ ತೆಗೆದುಕೊಂಡಿದ್ದು ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ರಾಜ್ಯದ ನಾಯಕರ ಮೇಲೂ ಚಾಟಿ ಬೀಸಿದರು.

ಜನಚೇತನ ಯಾತ್ರೆಯ ಅಂಗವಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಉತ್ತಮ ಆಡಳಿತ ಮತ್ತು ಭ್ರಷ್ಟಾಚಾರ ಒಟ್ಟಿಗೆ ಸಾಗಲು ಸಾಧ್ಯವೇ ಇಲ್ಲ. ಈ ಮಾತನ್ನು ಕಾಂಗ್ರೆಸ್ಸಿಗರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಹೇಳುತ್ತಿಲ್ಲ. ನಮ್ಮವರು ಭ್ರಷ್ಟಾಚಾರದಲ್ಲಿ ತೊಡಗಿದ್ದನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಈ ಸಂದರ್ಭದಲ್ಲಿ ಹೇಳುವ ಮೂಲಕ ರಾಜ್ಯ ಬಿಜೆಪಿ ಮುಖಂಡರಿಗೆ ಬಿಸಿ ಮುಟ್ಟಿಸಿದರು.

ಕಾರ್ಯಕ್ರಮ ಪ್ರಾರಂಭವಾಗುವ ಮೊದಲೇ ಸುರಿಯಲಾರಂಭಿಸಿದ ಮಳೆಯ ನಡುವೆಯೇ ಭಾಷಣ ಆರಂಭಿಸಿದ ಅವರು, ಕಾನೂನಿನ ಪ್ರಕಾರ ಆರೋಪಿಗಳು ಮತ್ತು ಅಪರಾಧಿಗಳು ಬೇರೆ ಆಗಿರಬಹುದು. ಆದರೆ ರಾಜ್ಯದ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ವರದಿ ಸಲ್ಲಿಸಿದ ತಕ್ಷಣ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಪಕ್ಷ ಸೂಚಿಸಿತ್ತು ಎಂದರು.

ಪಕ್ಷದ ರಾಜ್ಯ ಘಟಕದ ಕಚೇರಿ ಜಗನ್ನಾಥ ಭವನದ ಉದ್ಘಾಟನೆಗೆ ಕಳೆದ ಏಪ್ರಿಲ್ ತಿಂಗಳಿನಲ್ಲಿ ಇಲ್ಲಿಗೆ ಬಂದಾಗಲೂ ಇದೇ ಮಾತು ಹೇಳಿದ್ದೆ. ಯಾತ್ರೆಯ ಅಂಗವಾಗಿ ನಾಗಪುರಕ್ಕೆ ತೆರಳಿದ್ದಾಗ ಕರ್ನಾಟಕದ ವಿದ್ಯಮಾನಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದಾಗಲೂ ಇದನ್ನೇ ತಿಳಿಸಿದ್ದೇನೆ. ಇವತ್ತೂ ಅದೇ ಮಾತು ಹೇಳುತ್ತೇನೆ. ಬಿಜೆಪಿಯವರು ಮಾಡುವ ಭ್ರಷ್ಟಾಚಾರವನ್ನೂ ನಾನು ಸಹಿಸಲಾರೆ ಎಂದು ಖಡಕ್ ಆಗಿ ತಿಳಿಸಿದರು.

ಅಶೋಕ್ ಹಾಜರ್:
ಭೂ ಹಗರಣದ ಆರೋಪ ಎದುರಿಸುತ್ತಿರುವ ಗೃಹ ಸಚಿವ ಆರ್.ಅಶೋಕ್ ವೇದಿಕೆ ಹಂಚಿಕೊಂಡರು. ಸಚಿವರಾದ ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಬಿ.ಎನ್.ಬಚ್ಚೇಗೌಡ, ಗೋವಿಂದ ಕಾರಜೋಳ, ನಾರಾಯಣಸ್ವಾಮಿ, ರವೀಂದ್ರನಾಥ್, ಆನಂದ ಆಸ್ನೋಟಿಕರ್, ಸಂಸದರಾದ ಡಿ.ಬಿ.ಚಂದ್ರೇಗೌಡ, ಪಿ.ಸಿ.ಮೋಹನ್, ಪ್ರಹ್ಲಾದ್ ಜೋಶಿ ಮೊದಲಾದ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಡ್ವಾಣಿ ಯಾತ್ರೆ-ಯಡಿಯೂರಪ್ಪ ಬಣ ಗೈರು;
ಯಡಿಯೂರಪ್ಪ ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಇಲ್ಲ ಎಂಬ ಸಂದೇಶ ರವಾನಿಸುವ ಉದ್ದೇಶದಿಂದ ಆಡ್ವಾಣಿ ಜನಚೇತನ ಯಾತ್ರೆ ಸಭೆಯಿಂದ ದೂರ ಉಳಿದಿರುವುದಾಗಿ ಮಾಜಿ ಸಿಎಂಗೆ ನಿಷ್ಠರಾದ ಸಚಿವರ ಗುಂಪು ಹೇಳಿಕೊಂಡಿದೆ. ಇದರೊಂದಿಗೆ ಉಭಯ ಬಣಗಳ ನಡುವಿನ ಶೀತಲ ಸಮರ ತಾರಕ್ಕೇರಿದೆ.

ಆಡ್ವಾಣಿ ಗೌರವಾರ್ಥ ಮುಖ್ಯಮಂತ್ರಿ ಸದಾನಂದ ಗೌಡರು ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಔತಣ ಕೂಟದಲ್ಲೂ ಯಡಿಯೂರಪ್ಪ ಬಣದ ಸಚಿವರು, ಶಾಸಕರು ಭಾಗವಹಿಸಿಲ್ಲ. ಸಂಸದ ಅನಂತ ಕುಮಾರ್, ರಾಜ್ಯಾಧ್ಯಕ್ಷ ಈಶ್ವರಪ್ಪ, ಸಚಿವ ಜಗದೀಶ್ ಶೆಟ್ಟರ್, ಅಶೋಕ್ ಪಾಲ್ಗೊಂಡಿದ್ದರು.

Share this Story:

Follow Webdunia kannada