Select Your Language

Notifications

webdunia
webdunia
webdunia
webdunia

ಉಡುಪಿ ಮಿನಿ ಸಮರ;ಬಿಎಸ್‌ವೈ ಗೈರು-ನಾಯಕತ್ವ ಯಾರದ್ದು?

ಉಡುಪಿ ಮಿನಿ ಸಮರ;ಬಿಎಸ್‌ವೈ ಗೈರು-ನಾಯಕತ್ವ ಯಾರದ್ದು?
ಬೆಂಗಳೂರು , ಬುಧವಾರ, 29 ಫೆಬ್ರವರಿ 2012 (18:30 IST)
PR
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೈರುಹಾಜರಾಗಿದ್ದಕ್ಕೇ ವಿಶೇಷ ಅರ್ಥ ಕಲ್ಪಿಸಬೇಡಿ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಯಡಿಯೂರಪ್ಪನವರ ನೇತೃತ್ವದಲ್ಲೇ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಗಾಗಿ ಪಕ್ಷದ ಅಭ್ಯರ್ಥಿ ಸುನೀಲ್ ಕುಮಾರ್ ಬುಧವಾರ ನಾಮಪತ್ರ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಉಪಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗುತ್ತಾರೆ. ನಾಮಪತ್ರ ಸಲ್ಲಿಸುವಾಗ ಅವರು ಬಂದಿಲ್ಲ ಎಂದು ಅಪಾರ್ಥ ಕಲ್ಪಿಸುವುದು ಬೇಡ. ಅವರು ಸದಾ ಒಟ್ಟಿಗೆ ಇರುತ್ತಾರೆ. ಅಲ್ಲದೇ ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಮೂಹಿಕ ನಾಯಕತ್ವ-ಈಶ್ವರಪ್ಪ ನುಡಿ
ಅಭ್ಯರ್ಥಿ ಸುನೀಲ್ ಕುಮಾರ್ ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ನಾವು ಈ ಚುನಾವಣೆಯಲ್ಲಿಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ. ಭಾರತೀಯ ಜನತಾ ಪಕ್ಷ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲೇ ಮುಂದುರಿಯುತ್ತದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಪರೋಕ್ಷವಾಗಿ ಯಡಿಯೂರಪ್ಪನವರಿಗೆ ಟಾಂಗ್ ನೀಡಿದ್ದಾರೆ.

ಡೀವಿ ನೇತೃತ್ವದಲ್ಲೇ ಚುನಾವಣಾ ಪ್ರಚಾರ:ಅನಂತ್ ಕುಮಾರ್
ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆ ಅಭ್ಯರ್ಥಿಯಾಗಿ ಸುನೀಲ್ ಕುಮಾರ್ ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಅನಂತ್ ಕುಮಾರ್ ಸಾಥ್ ನೀಡಿದ್ದು, ಈ ಬಾರಿ ಸಕ್ರಿಯವಾಗಿ ಅಖಾಡಕ್ಕೆ ಇಳಿದಂತಾಗಿದೆ. ಅಲ್ಲದೇ ಈ ಚುನಾವಣೆಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಈಶ್ವರಪ್ಪನವರ ನೇತೃತ್ವದಲ್ಲೇ ಎದುರಿಸುವುದಾಗಿ ಹೇಳಿದರು.

ಆದರೆ ಈ ಸಂದರ್ಭದಲ್ಲಿ ಅನಂತ್ ಕುಮಾರ್ ಅವರು ಯಡಿಯೂರಪ್ಪನವರ ನಾಯಕತ್ವದ ಬಗ್ಗೆಯಾಗಲಿ, ಪಕ್ಷದೊಳಗಿನ ಹಗ್ಗಜಗ್ಗಾಟದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಿನಲ್ಲಿ ಯಡಿಯೂರಪ್ಪನವರ ಗೈರು ಹಾಜರಿ, ಅನಂತ್ ಕುಮಾರ್ ಪಟಾಲಂ ಉಡುಪಿ ಕ್ಷೇತ್ರದ ಅಖಾಡಕ್ಕೆ ಇಳಿದಿರುವುದು ಮತ್ತೊಂದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Share this Story:

Follow Webdunia kannada