Select Your Language

Notifications

webdunia
webdunia
webdunia
webdunia

ಆಣೆ-ಪ್ರಮಾಣ ರಾಜಕೀಯ ಪ್ರಹಸನಕ್ಕೆ ಕೊನೆಗೂ ತೆರೆ

ಆಣೆ-ಪ್ರಮಾಣ ರಾಜಕೀಯ ಪ್ರಹಸನಕ್ಕೆ ಕೊನೆಗೂ ತೆರೆ
ಬೆಂಗಳೂರು , ಶುಕ್ರವಾರ, 24 ಜೂನ್ 2011 (20:32 IST)
ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ರಾಜಕೀಯಕ್ಕೆ ಕೊನೆಗೂ ತೆರೆ ಬಿದ್ದಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮಾಡೋದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್‌.ಈಶ್ವರಪ್ಪ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್‌ ಗಡ್ಕರಿ ಅವರು 'ರಾಜಕೀಯದೊಂದಿಗೆ ಧರ್ಮವನ್ನು ಬೆರೆಸಬೇಡಿ, ಪಕ್ಷದ ನೀತಿಗಳಲ್ಲಿ ಆಣೆ ಪ್ರಮಾಣಕ್ಕೆ ಅವಕಾಶವಿಲ್ಲ, ಪ್ರತಿಪಕ್ಷಗಳ ಆರೋಪದ ವಿರುದ್ಧ ರಾಜಕೀಯ ಮತ್ತು ಕಾನೂನಿನ ಹೋರಾಟ ನಡೆಸೋಣ' ಎಂದು ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಈ ಮುಖ್ಯಮಂತ್ರಿ ಈ ನಿರ್ಣಯವನ್ನು ಕೈಗೊಡಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆಣೆ ಪ್ರಮಾಣದ ರಾಜಕೀಯದಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಗೆ ಗೌರವ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ಬಿಜೆಪಿಯ ಯಾವ ನಾಯಕರೂ ಆಣೆ ಮಾಡಲ್ಲ
ಇನ್ನು ಮುಂದೆ ಬಿಜೆಪಿ ಪಕ್ಷವು ರಾಜ್ಯದಲ್ಲಿ ಯಾವುದೇ ರೀತಿಯ ಆಣೆ ಪ್ರಮಾಣ ಮಾಡುವುದಿಲ್ಲ. ಬದಲಾಗಿ ರಾಜಕೀಯ ಮತ್ತು ಕಾನೂನು ಹೋರಾಟ ನಡೆಸುತ್ತದೆ ಎಂದು ಹೇಳಿದ ಈಶ್ವರಪ್ಪ, ಆ ಪ್ರಕಾರವಾಗಿ, ಮುಖ್ಯಮಂತ್ರಿ ವಿರುದ್ಧ ಆಪಾದನೆ ಮಾಡಿದ ವಿಧಾನ ಸಭೆಯ ಕಾಂಗ್ರೆಸ್‌ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಸಂಸದ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಹೇಳಿದರು.

ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಸಮೀಕ್ಷೆ ನಡೆಸಿದ್ದು, ಜನರು ಬಿಜೆಪಿ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಪ್ರತಿಪಕ್ಷಗಳ ಆಪಾದನೆಗೂ ಸೂಕ್ತ ಉತ್ತರ ನೀಡಿ ಎಂದು ಹೇಳಿದ್ದಾರೆ ಎಂದು ಅವರು ತಿಳಿಸಿದರು.

ವರ್ತೂರು ಪ್ರಕಾಶ್‌ಗೆ ಸಚಿವ ಸ್ಥಾನ ಖಚಿತ

ರಾಜ್ಯದ ಆಡಳಿತಾರೂಢ ಬಿಜೆಪಿಗೆ ಬೆಂಬಲ ನೀಡಿರುವ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ ಅವರಿಗೆ ಸಚಿವ ಸ್ಥಾನ ಖಚಿತ ಎಂದು ಈಶ್ವರಪ್ಪ ಹೇಳಿದ್ದಾರೆ. ವರ್ತೂರು ಅವರಿಗೆ ಸಚಿವಸ್ಥಾನ ನೀಡುವಂತೆ ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್‌ ಗಡ್ಕರಿ ಅವರು ಹೇಳಿದ್ದಾರೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

Share this Story:

Follow Webdunia kannada