Select Your Language

Notifications

webdunia
webdunia
webdunia
webdunia

ಆಚಾರ್ಯ ಬಿಜೆಪಿಗೆ ದೇವರಿದ್ದಂತೆ; ಕಣ್ಣೀರುಗರೆದ ಸದಾನಂದ ಗೌಡ

ಆಚಾರ್ಯ ಬಿಜೆಪಿಗೆ ದೇವರಿದ್ದಂತೆ; ಕಣ್ಣೀರುಗರೆದ ಸದಾನಂದ ಗೌಡ
ಬೆಂಗಳೂರು , ಮಂಗಳವಾರ, 14 ಫೆಬ್ರವರಿ 2012 (16:08 IST)
PR
'ಪ್ರಸಕ್ತ ಸಾಲಿನಲ್ಲಿ ಮತ್ತಷ್ಟು ಒಳ್ಳೇ ಬಜೆಟ್ ಕೊಡಲು ನನ್ನ ಪೂರ್ತಿ ಸಹಕಾರ ಇದೆ. ಅದಕ್ಕಾಗಿ ಹತ್ತು ದಿನಗಳ ಸಮಯ ಕೊಡುತ್ತೇನೆ ಅಂತ ಹೇಳಿದ್ದರು. ಆದರೆ ಅವರು ಇದೀಗ ಮತ್ತೆ ಬಾರದ ಲೋಕಕ್ಕೆ ತೆರಳಿದ್ದಾರೆ. ನಿಜಕ್ಕೂ ಅವರು ಬಿಜೆಪಿ ಪಕ್ಷಕ್ಕೆ ದೇವರಿದ್ದಂತೆ. ಅವರು ನನ್ನ ರಾಜಕೀಯ ಗುರುಗಳು'...ಅಂತ ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ನಿಧನಕ್ಕೆ ಕಣ್ಣೀರುಗರೆಯುತ್ತಾ ಪ್ರತಿಕ್ರಿಯೆ ನೀಡಿದವರು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ.

ನಾನು ಮುಖ್ಯಮಂತ್ರಿಯಾಗಲು ಆಚಾರ್ಯ ಮಾರ್ಗದರ್ಶನವೇ ಕಾರಣ. ಪಕ್ಷದ ಎಲ್ಲಾ ಪ್ರಣಾಳಿಕೆ ತಯಾರು ಮಾಡಿಕೊಟ್ಟಿದ್ದು ಆಚಾರ್ಯರು. ಅವರ ಮಾರ್ಗದರ್ಶನ ನಮಗೇ ಬೇಕೇ, ಬೇಕು. ಅವರೀಗ ನಮ್ಮೊಟ್ಟಿಗಿಲ್ಲ ಆದರೂ ಅವರು ನಮಗೆ ಮಾರ್ಗದರ್ಶನ ನೀಡಲೇಬೇಕು. ಅದು ಯಾವ ರೀತಿ, ಯಾರ ಮುಖಾಂತರ ದೊರೆಯುತ್ತದೋ ಗೊತ್ತಿಲ್ಲ. ಧೀಮಂತ ನಾಯಕನನ್ನು ಕಳೆದುಕೊಂಡು ನಾವು ತುಂಬಲಾರದ ನಷ್ಟ ಅನುಭವಿಸಿದ್ದೇವೆ ಎಂದರು.

ಅವರು ಆಚಾರ್ಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮಲ್ಲಿಗೆ ಆಸ್ಪತ್ರೆಗೆ ಧಾವಿಸಿದ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ಈ ರೀತಿ ಪ್ರತಿಕ್ರಿಯೆ ನೀಡಿದ್ದರು.

ಸರಳ ಮತ್ತು ಸಜ್ಜನ ರಾಜಕಾರಣಿ ಎಂಬ ಶ್ಲಾಘನೆಗೆ ಒಳಗಾಗಿಗಿದ್ದ ವಿ.ಎಸ್.ಆಚಾರ್ಯ ನಿಧನಕ್ಕೆ ಆಡಳಿತಾರೂಢ ಬಿಜೆಪಿ ಮುಖಂಡರು ಸೇರಿದಂತೆ ಪ್ರತಿಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ.

ಸೌಮ್ಯ ಸ್ವಭಾವದ ವ್ಯಕ್ತಿ-ಸಿದ್ದರಾಮಯ್ಯ:
ವೇದವ್ಯಾಸ ಶ್ರೀನಿವಾಸ ಆಚಾರ್ಯ ಅವರು ಸಜ್ಜನ, ವಿಚಾರವಂತ ರಾಜಕಾರಣಿ. ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದ ಅವರು ಪ್ರಾಮಾಣಿಕ ರಾಜಕಾರಣಿಗಳಲ್ಲಿ ಅವರೂ ಕೂಡ ಒಬ್ಬರು. ಅವರ ಆಕಸ್ಮಿಕ ಅಗಲಿಕ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಇಡೀ ರಾಜ್ಯಕ್ಕೆ ನೋವಿನ ಸಂಗತಿ-ಆರ್.ಅಶೋಕ್
ಆಚಾರ್ಯ ಅವರ ಹಠಾತ್ ನಿಧನದಿಂದ ಬಿಜೆಪಿ ಪಕ್ಷಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ನೋವಿನ ಸಂಗತಿ. ಅವರು ಸಾವನ್ನಪ್ಪಿದ್ದಾರೆಂಬ ಸುದ್ದಿಯೇ ನಂಬಲು ಆಗುತ್ತಿಲ್ಲ. ರಾಜಕೀಯದಲ್ಲಿ ಅವರು ಯಡಿಯೂರಪ್ಪನವರಿಗಿಂತ ಹಿರಿಯರಾಗಿದ್ದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಬರಲು ಅವರ ಶ್ರಮ ಅಪಾರವಾದದ್ದು ಎಂದು ಗೃಹ ಸಚಿವ ಆರ್.ಅಶೋಕ್ ಕಂಬನಿ ಮಿಡಿದಿದ್ದಾರೆ.

ನಿಷ್ಕಳಂಕ ರಾಜಕಾರಣಿ-ಪೇಜಾವರಶ್ರೀ
ರಾಜ್ಯದ ಕರಾವಳಿ ಪ್ರದೇಶ ಕಂಡ ಅತ್ಯಂತ ನಿಷ್ಕಳಂಕ ರಾಜಕಾರಣಿ ವಿ.ಎಸ್.ಆಚಾರ್ಯ ಅವರು. ಇತ್ತೀಚೆಗೆ ತನ್ನ ಆರೋಗ್ಯದಲ್ಲಿ ಬಹಳಷ್ಟು ಏರುಪೇರಾಗುತ್ತಿದ್ದು, ವಿಶ್ರಾಂತಿ ತೆಗೆದುಕೊಳ್ಳಬೇಕಾಗಿದೆ ಅಂತ ಹೇಳುತ್ತಿದ್ದರು. ಆದರೆ ವಿಧಿಲೀಲೆ, ಅವರು ದೈವಾಧೀನರಾಗಿದ್ದಾರೆ. ಭಗವಂತ ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪೇಜಾವರಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

Share this Story:

Follow Webdunia kannada