Select Your Language

Notifications

webdunia
webdunia
webdunia
webdunia

ತಲೆಕೆಟ್ಟ ಸಿಎಂನ್ನು ಆಯ್ಕೆ ಮಾಡಿದ್ದೀರಿ!: ಬಂಗಾರಪ್ಪ ಕಿಡಿ

ತಲೆಕೆಟ್ಟ ಸಿಎಂನ್ನು ಆಯ್ಕೆ ಮಾಡಿದ್ದೀರಿ!: ಬಂಗಾರಪ್ಪ ಕಿಡಿ
ಸೊರಬ , ಮಂಗಳವಾರ, 23 ನವೆಂಬರ್ 2010 (16:43 IST)
ರಾಜ್ಯದಲ್ಲಿ ಬದಲಾವಣೆ ಬಯಸಿ ನೀವು ಆಯ್ಕೆ ಮಾಡಿದ್ದಾದರೂ ಯಾರನ್ನು? ಒಬ್ಬ ತಲೆಕೆಟ್ಟ ಮುಖ್ಯಮಂತ್ರಿಯನ್ನು, ಮತ್ತೊಬ್ಬ ಮತಿಗೆಟ್ಟ ಶಾಸಕನನ್ನು ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

ತಾಲೂಕಿನ ಮಾವಲಿ ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ರಾಮಕೃಷ್ಣ ಹೆಗಡೆ, ಗುಂಡುರಾವ್ ಅವರಂತಹ ಬ್ರಾಹ್ಮಣರು, ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್‌ರಂತಹ ವೀರಶೈವರು, ದೇವೇಗೌಡ, ಕುಮಾರಸ್ವಾಮಿಯಂತಹ ಒಕ್ಕಲಿಗರು, ಬಂಗಾರಪ್ಪ, ದೇವರಾಜ ಅರಸ್‌ರಂತಹ ಶೂದ್ರರು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದರೂ ಯಡಿಯೂರಪ್ಪ ಮಾಡಿದ ಈ ಪರಿ ಭ್ರಷ್ಟಾಚಾರ ಎಂದೂ ನೋಡಿರಲಿಲ್ಲ. ತಂದೆ ಮಕ್ಕಳನ್ನು ಹಾಳು ಮಾಡಿದರೋ? ಮಕ್ಕಳೇ ತಂದೆಯನ್ನು ಹಾಳು ಮಾಡಿದರೋ? ಒಟ್ಟಿನಲ್ಲಿ ಯಡಿಯೂರಪ್ಪ ಮತ್ತು ಅವರ ಮಕ್ಕಳು ರಾಜ್ಯದ ಸಂಸ್ಕೃತಿಗೆ ಮಸಿ ಬಳಿದಿದ್ದಾರೆ ಎಂದು ದೂರಿದರು.

ಸಮಾಜವಾದದ ತತ್ವ ಮತ್ತು ಸಿದ್ದಾಂತದ ತಳಹದಿ ಮೇಲೆ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಮೋಸ, ನಯವಂಚನೆ, ದಗಲಬಾಜಿತನವನ್ನು ಯಾರೇ ಮಾಡಿದರೂ ಸಹಿಸುವುದಿಲ್ಲ ಎಂದರು.

ದೇಶದಲ್ಲಿ ಅಧ್ಯಕ್ಷೀಯ ಮಾದರಿ ಆಡಳಿತದ ಬಗ್ಗೆ ಪ್ರತಿಪಾದಿಸಿದ ಅವರು, ಭಾರತದಲ್ಲಿ ಇದನ್ನು ಅಳವಡಿಸುವ ಮೊದಲು ಹಲವಾರು ತಿದ್ದುಪಡಿಗಳನ್ನು ತರುವ ಅವಶ್ಯಕತೆ ಇದೆ. ಇಲ್ಲದೇ ಹೋದಲ್ಲಿ ಯಡಿಯೂರಪ್ಪನಂಥವರು ಮುಖ್ಯಮಂತ್ರಿಯಾದ್ರೆ, ದೇಶದ ಭವಿಷ್ಯವೇ ಅಧೋಗತಿಗೆ ಸಾಗುತ್ತದೆ. ರಾಜ್ಯವನ್ನೇ ಡಿನೋಟಿಫೈಡ್ ಮಾಡಿದರೂ ಆಶ್ಚರ್ಯವಿಲ್ಲ ಎಂದು ವ್ಯಂಗವಾಡಿದರು.

ರಾಜಕಾರಣದಲ್ಲಿ ಪಕ್ಷಾಂತರ ನಿರಂತರ ಪ್ರಕ್ರಿಯೆ. ಮತದಾರರಿಗೆ ಪಕ್ಷವನ್ನು ಬದಲಿಸಿ, ಮತ ನೀಡುವ ಹಕ್ಕಿದ್ದರೆ, ನಾಯಕನಾದವನಿಗೆ ಸಮಯ, ಸಂದರ್ಭ, ಅವಕಾಶಗಳಿಗೆ ಅನುಗುಣವಾಗಿ ಪಕ್ಷವನ್ನು ಬದಲಿಸುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದರು.

Share this Story:

Follow Webdunia kannada