Select Your Language

Notifications

webdunia
webdunia
webdunia
webdunia

ಐವರು ಹಾಲಿ ಶಾಸಕರಿಗೆ ಕೊಕ್ ನೀಡಲು ಕಾಂಗ್ರೆಸ್ ತೀರ್ಮಾನ

ಐವರು ಹಾಲಿ ಶಾಸಕರಿಗೆ ಕೊಕ್ ನೀಡಲು ಕಾಂಗ್ರೆಸ್ ತೀರ್ಮಾನ
ಬೆಂಗಳೂರು , ಶುಕ್ರವಾರ, 29 ಮಾರ್ಚ್ 2013 (09:55 IST)
PR
PR
ಐವರು ಹಾಲಿ ಕಾಂಗ್ರೆಸ್ ಶಾಸಕರಿಗೆ ಹೈಕಮಾಂಡ್ ಬಿಸಿ ಮುಟ್ಟಿಸಲು ಮುಂದಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಶಾಸಕರುಗಳಿಗೆ ಟಿಕೆಟ್ ನೀಡದಿರಲು ಕಾಂಗ್ರೆಸ್ ವರಿಷ್ಠರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಚಿಂತಾಮಣಿ ಶಾಸಕ ಡಾ.ಎಂ.ಸಿ. ಸುಧಾಕರ್, ಕುಣಿಗಲ್ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ದೇವನಹಳ್ಳಿ ಶಾಸಕ ವೆಂಕಟಸ್ವಾಮಿ ಹಾಗೂ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್‌ಗೆ ಟಿಕೆಟ್ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಎನ್‌ಸಿಪಿ ಕಟ್ಟಲು ಮುಂದಾಗಿದ್ದ ಬಿ.ಸಿ.ಪಾಟೀಲ್, ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ವಿರುದ್ಧ ಸೆಡ್ಡು ಹೊಡೆದು ನಿಂತಿರುವ ಡಾ.ಎಂ.ಸಿ. ಸುಧಾಕರ್, ಕಾಂಗ್ರೆಸ್ ಹಿರಿಯ ಮುಖಂಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ಕಟ್ಟಾ ಬೆಂಬಲಿಗ ಸಿ.ಎಂ.ಇಬ್ರಾಹಿಂರನ್ನು ಭದ್ರಾವತಿಯಿಂದ ಕಣಕ್ಕಿಳಿಸುವ ಸಲುವಾಗಿ ಹಾಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಹಾಗೂ ಶಾಸಕರಾಗಿ ಕಳಪೆ ಸಾಧನೆ ಮಾಡಿರುವ ಬಿ.ಬಿ.ರಾಮಸ್ವಾಮಿಗೌಡ ಮತ್ತು ವೆಂಕಟಸ್ವಾಮಿಗೆ ಈ ಬಾರಿ ಪಕ್ಷದ ಟಿಕೆಟ್ ತಪ್ಪಲಿದೆ ಎಂದು ತಿಳಿದು ಬಂದಿದೆ.

ಸುದ್ದಿ ನಿರಾಕರಿಸಿದ ಬಿ.ಸಿ.ಪಾಟೀಲ್, ವೆಂಕಟಸ್ವಾಮಿ: ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನು ಬಿಡುಗಡೆ ಮಾಡಲಾಗಿಲ್ಲ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕರು ಈಗಾಗಲೆ ತಮಗೆ ಕ್ಷೇತ್ರಕ್ಕೆ ತೆರಳಿ ಚುನಾವಣೆಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದುದರಿಂದ, ನಮಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎಂಬುದು ಆಧಾರ ರಹಿತ ಸುದ್ದಿ ಎಂದು ಶಾಸಕರಾದ ಬಿ.ಸಿ.ಪಾಟೀಲ್ ಹಾಗೂ ವೆಂಕಟಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಟಿಕೇಟ್ ಬೇಡವೇ ಬೇಡ ಎಂದ ಸುಧಾಕರ್: ಸ್ವಾರ್ಥಕ್ಕಾಗಿ ಪಕ್ಷವನ್ನು ಹಾಳು ಮಾಡುತ್ತಿರುವ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಧೋರಣೆಯಿಂದ ಬೇಸತ್ತು ನಾನೆ ಕಾಂಗ್ರೆಸ್ ಪಕ್ಷದಿಂದ ದೂರ ಸರಿಯಲು ನಿರ್ಧರಿಸಿದ್ದೇನೆ. ಅಲ್ಲದೆ, ಕಾಂಗ್ರೆಸ್‌ನಿಂದ ನನಗೆ ಟಿಕೆಟ್ ನೀಡುವಂತೆ ಕೋರಿ ಅರ್ಜಿಯನ್ನೂ ಸಲ್ಲಿಸಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಲಿದ್ದೇನೆ ಎಂದು ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.

Share this Story:

Follow Webdunia kannada