Select Your Language

Notifications

webdunia
webdunia
webdunia
webdunia

ಅಂತ್ಯ ಕಾಣದ ಕಥೆಯಲ್ಲಿ....

ಅಂತ್ಯ ಕಾಣದ ಕಥೆಯಲ್ಲಿ....

ನಾಗೇಂದ್ರ ತ್ರಾಸಿ

ND
ಇಲ್ಲಿಲ್ಲ ಎರಡು ಜೀವಗಳು. ಆದರೂ ಇಲ್ಲಿದೆ ಒಂದು ಅಂತ್ಯಗೊಳ್ಳದ ಕಥೆ. ಅಲ್ಲಲ್ಲ ಸಂಬಂಧ... ಎರಡು ಮನಸುಗಳ ನಡುವಿನ ತಾಕಲಾಟದ ಪಿಸು ಮಾತಿನ ಸಂಭಾಷಣೆ. ಇಡೀ ಜೀವನವನ್ನು ಹುಚ್ಚು ಕಲ್ಪನೆಗಳ ಲೋಕದಲ್ಲಿ ಕಳೆದುಕೊಳ್ಳುವ ಹುಚ್ಚು ತವಕವೂ ಇಲ್ಲಿ ಇಲ್ಲ. ಇತ್ತ ವಾಸ್ತವಿಕ ಜೀವನದಲ್ಲಿ ಬದುಕು ಕಟ್ಟುವ ಧಾವಂತವೂ ಇಲ್ಲ. ಕಲ್ಪನೆ ಮತ್ತು ವಾಸ್ತವಿಕ ಜಗತ್ತಿನ ನಡುವೆ ಉಳಿದು ಅಸ್ತಿತ್ವ ಕಟ್ಟಿಕೊಳ್ಳುವ ತವಕ ಈ ವಿಚಿತ್ರ ಸಂಬಂಧದಲ್ಲಿ ಆಗಾಗ ತಲೆ ಎತ್ತುತ್ತಿರುತ್ತದೆ ಇಂತಹದೊಂದು ತಾಕಲಾಟ. ಹೇಳಲರಿಯದ ದುಃಖದ ಮಡುವಿನಲ್ಲಿ ಬಿದ್ದವರಂತೆ, ಆಗಾಗ, ನಾವು ಯಾರಿಗೊ ಕಾಯುತ್ತಿರುವಂತೆ ಇರುವುದು ನಮಗೆ ಅಭ್ಯಾಸವಾಗಿ ಬಿಟ್ಟಿದೆ. ನಮಗೆ ನಾವೇ ಸಂಭಾಳಿಸಿಕೊಳ್ಳುತ್ತ ಸಾಗುವ ನಾವುಗಳು ಎಲ್ಲೋ ಯಾರದೋ ಹಿಡಿತಕ್ಕೆ ಸಿಲುಕಿದವರಂತೆ ನಲುಗುತ್ತಿರುತ್ತೇವೆ. ಆದರೂ ನಾವು ಸ್ವತಂತ್ರರು. ನಮ್ಮನ್ನ ನಾವೇ ಸಂಭಾಳಿಸಿಕೊಳ್ಳುತ್ತೇವೆ.

“ಇದು ನಿನ್ನದೇ ಕಥೆನಾ?... ಅನ್ನಿಸೋದೆ ಇಲ್ಲ..ಬರೀ ಬದುಕಿನ ಹೆಳವಂಡಗಳನ್ನು ಕಥೆಗೆ ಇಳಿಸುತ್ತಿದ್ದಿಯಲ್ಲಾ.. ಇದು ಚೆನ್ನಾಗಿದೆ ಸ್ವಲ್ಪ ಆಪ್ಟಿಮಿಸ್ಟಿಕ್ ಅನ್ನಿಸ್ತು”.... “ಎಲ್ಲಿಯವರೆಗೆ ಹೀಗೆಯೇ ಹೆಳವಂಡಗಳನ್ನು ನೆನೆಯುತ್ತ ಇರುವುದು. ಸಾಕಲ್ಲ ಬದುಕಿಗೆ ಇಷ್ಟು”...

“ಇಲ್ವೋ... ಹಾಗೇನಿಲ್ಲ.. ನಾವು ತಿಳಿದುಕೊಂಡಿದ್ದು ಇಷ್ಟೆ, ಬದುಕು ಅನ್ನೊದು ” Known is a drop, Unknown is an ocean” ಅಲ್ವಾ?

“ಮ್....ಕಳಿತಾ ಇದೀನಿ ಜೀವನಾನ ಹೊಸ ಖುಷಿ ಸಂತಸಗಳ ನಿರೀಕ್ಷೆಯಲ್ಲಿ. ಹೆಳವಂಡಗಳನ್ನು ಮರೆತು ಹೊಸ ಬದುಕಿನತ್ತ”....

ಚೆನ್ನಾಗಿದೆ ಹುಡುಗಿ ನಿನ್ನ ಮಾತು.. “ಹುಡುಕಿದರೂ ದೇವ್ರೂ ಸಿಗ್ತಾನಂತೆ..ಕಣೆ”
ಹೂಂ.. ಹೂಂ ತಪ್ಪೋ... ನೀನ್ಯಾವಾಗಲಾದರೂ ದೇವ್ರನ್ನಾ ನೋಡಿದಿಯಾ... ಹಾಗೇ ಇದು ಕೂಡ ಇದ್ದುದೆಲ್ಲವ ಬಿಟ್ಟು ಇಲ್ಲದೆಡೆಗೆ ಸಾಗುವುದೇ ಬದುಕಿನ ಖುಷಿ..
“ಇಲ್ವಲ್ಲ.... ಹುಡುಗಿ ನಾನು ದೇವ್ರನ್ನ ನೋಡಿಲ್ಲ”
“ಬದುಕಿನ ಖುಷಿ ಕಂಡಿದ್ದಿಯಾ?”
“ಮ್... ಇಂದಲ್ಲ, ನಾಳೆ ಸಿಗಬಹುದೆನೊ... ಗೊತ್ತಿಲ್ಲ”

“ಬುದ್ದು ಕಹಿಂ ಕಾ... ಎಲ್ಲ ಸುಳ್ಳು..ಭ್ರಮೆ.. ನಾನು ಕವನ ಬರೆದು ಖುಷಿಯಾಗ್ತಿನಿ.. ಅದನ್ನು ಓದಿ ಇನ್ನೊಬ್ಬರು ಖುಷಿಯಾಗ್ತಾರೆ ಅಷ್ಟೇ.. ಮತ್ತೇ ಹಿಂತಿರುಗಿ ನೋಡಿದರೆ ಏನೂ ಇಲ್ಲ ಅನ್ಸುತ್ತೆ.. ಕಾಲ ಬದಲಾಗ್ತ ಇರ್ತದೆ ಹೆಂಗೆ ಅಂದರೆ ಅಲ್ಲಿದೆ ನೋಡು.... ಹರಿಯೋ ನೀರು ಇಂದು ಇದ್ದುದು ನಾಳೆ ಇಲ್ಲ. ನಾಡಿದ್ದು ಬರುವುದು ಬರ್ತದೆ ಹೋಗ್ತದೆ. ನಾವ್ ಮಾತ್ರ ಇಲ್ಲೆ ಅಲ್ವಾ...?”

“ಅದಕ್ಕೆ ಅಲ್ವಾ ಬದುಕು ಅನ್ನೋದು ಹರಿಯೊ ನೀರಿನಂತೆ.. ನಿತ್ಯ ನಿರಂತರ ಬದುಕು ಇಂದು ಇದ್ದುದು ನಾಳೆ ಇಲ್ಲ... ”

“ಮ್... ಬದಲಾವಣೆ ಖುಷಿ ತರ್ತದೆ ಆದರೆ... ಗತಿಸಿದ ನೆನಪುಗಳ ಹೆಳವಂಡವನ್ನ ಗುಡ್ಡೆ ಹಾಕ್ಕೊಂಡು ಯಾಕೆ ಕುಳಿತುಕೊಳ್ತಿದ್ದಿಯಾ...” ಆ ಜೀವನದ ರಸಗಳಿಗೆಯಲ್ಲಿ ಕೆಲ ಖುಷಿಯ ಕ್ಷಣಗಳು ಸಿಕ್ಕಿ ಹಾಕಿಕೊಂಡಿರಬಹುದಲ್ಲಾ... ಅದಕ್ಕೆ ಅಲ್ವಾ ಹಳೆಯದನ್ನ ನೆನೆಯೋದು..” “ಅದನ್ನ ಎತ್ತಿಕೊಳ್ಳೊ ಭರದಲ್ಲಿ ಕೈಗೆ ಕಹಿ ಘಟನೆಗಳ ನೆನಪು ಅಂಟಿಕೊಳ್ಳುತ್ತೆ ಅಲ್ವಾ... ಅದೇ ತಾನೇ ಜೀವನ...” ಖುಷಿ ಬೇಕು ಅಂದರೆ ಅದರೊಂದಿಗೆ ಒಂದೆರಡು ನೋವಿನ ರಸವೂ ಹನಿ ಹನಿಯಾಗಿ ಬರುತ್ತೋ.. ನನಗೆ ಜೀವನದ ಬಗ್ಗೆ ಬೇಸರವಿಲ್ಲ.. ಖುಷಿ ಸಿರ್ಪ್ ಖುಷ್... “ಇನ್ನೊಂದು ಮಾತು ನಿನ್ನನ್ನ ಮರೆತರೂ ಮರೆಯಲಾರೆ ಯಾಕೆ ಗೊತ್ತಾ”?

“ಮೈ ಗಾಡ್... ನಾನೇನು ಕೊಟ್ಟಿದ್ದೇನೆ ನಿನಗೆ ಬರೀ ನೋವಲ್ವಾ”

“ಅಲ್ಲ... ಬದುಕಿನಲ್ಲಿ ನಿರೀಕ್ಷೆ ಏನು ಅನ್ನುವುದನ್ನು ಕಲಿಸಿಕೊಟ್ಟವನು ನೀನು .. ನೀನು ಬೇಕು ಅನ್ನಿಸಿದಾಗ, ನೀನು ಇಲ್ಲಿರಲಿಲ್ಲ.. ಒಬ್ಬಳೇ ಕುತ್ಕೊಂಡೇ ಹಾಗೆ ನಿನ್ನ ನಿರೀಕ್ಷೆಯಲ್ಲಿ ಅಲ್ಲೇ ಅದೇ ಕೆರೆಯ ದಡದ ಮೇಲೆ....

“ಬೇಕಾ.. ಜೀವನಕ್ಕೆ ಹುಸಿ ನಿರೀಕ್ಷೆಗಳು.. ನಾನು ಹೊಗಬೇಕು ಮುಂದೆ ಬಲು ದೂರ ಕಣೆ ಸಾಕಲ್ಲ ಇಷ್ಟು ನಿರೀಕ್ಷೆಗಳು.”
“ಐ ಕಾಂಟ್ ಸ್ಟಾಪ್ ಯು.. ಯು ಮೂವ್ ಇನ್ ಯುವರ್ ಲೈಪ್.. ತಡೆಯೋದಕ್ಕೆ ನಾನು ಯಾರು?”
“ನನಗಿಂತ ತುಂಬ ಚೆಂದವಾಗಿ ಬದುಕ್ತಿಯಾ.. ನೀನು ನನಗಿಂತ ಜಾಣೆ”
”ಮ್... ಮತ್ತದೇ ಹುಚ್ಚುತನ.. ತಿಳಿದವಳಾಗಿದ್ದರೆ ನಾನ್ಯಾಕೆ ನಿನ್ನ ನಿರೀಕ್ಷೆಯಲ್ಲಿ ಹೀಗೆ...ಇರಲಿ ಬಿಡು”
“ನಾನು ಎಂದಿಗೂ ಹೇಳಲೇ ಇಲ್ವಲ್ಲ.. ಆ ಮಾತನ್ನ.. ”
“ಪ್ಚ್.. ಬ್ಯಾಡ್ ಬೀಡು ಯಾಕೀಗ ಆ ಮಾತು.. ಹೇಳಬೇಕು ಅಂದ್ಕೊಂಡವ ಜಗತ್ತಿಗೆ ಹೆದರಿ ಕುತ್ಕೊಂಡ್ರೆ ಏನು ಮಾಡಕ್ಕೆ ಆಗತ್ತೆ ಹೇಳಬೇಕಾದ್ದನ್ನ ಆಗಲೇ ಹೇಳಿ ಬಿಡ್ಬೇಕೋ” ”ನಮ್ಮಗಳ ಕೆಟ್ಟ ಗುಣ ಏನು ಗೊತ್ತಾ.. ಹೇಳಬೇಕಾದ ಸಮಯದಲ್ಲಿ ಮೌನವಾಗಿರ್ತಿವಿ..,, ಮೌನವಾಗಿರ್ಬೇಕಾದ ಸಮಯದಲ್ಲಿ ಏನೆಲ್ಲ ಹೇಳಿರ್ತಿವಿ ಅಲ್ಲ...
“ಎಲ್ಲವನ್ನು ಹೇಳಲೇ ಬೇಕಾಗಿತ್ತಾ?.. ಮನಸಿನ ಭಾಷೆಗೆ ಅದು ಅರ್ಥವಾಗೊಲ್ವಾ?”
“ಸರಿ ನಿನ್ನ ಮಾತು... ಮನಸಿನ ಭಾಷೆಯ ಎದುರು ಎಲ್ಲವೂ ಗೌಣ.. ಆದ್ರೂ ಕನಿಷ್ಟ ಅಗಲುವ ಸಮಯದಲ್ಲಾದರೂ.. ನಾನು ನಿನ್ನ.... ಹೀಗೆ ಒಂದು ಮಾತು ಆಡಿದ್ರೆ ಸಾಕಿತ್ತು ಅಲ್ವಾ.. ”
”ನನಗ್ಗೊತ್ತು ಕಣೆ ನಿನಗೆ ನನ್ನ ಮರಿಯೋಕೆ ಆಗೊದಿಲ್ಲಾ ಆಂತ?”
“ಇಲ್ಲ.. ಈ ಬಾರಿ ಇದು ಸಾಧ್ಯವಿಲ್ಲ. ನಾನು ನಿನ್ನ ತೊರೆಯುತ್ತಿದ್ದೇನೆ.. ಯಾಕೆ ಗೊತ್ತಾ ಪ್ರತಿ ಬಾರಿ ನನ್ನ ಹತಾಶೆಯನ್ನ ನಿನ್ನ ಮೇಲೆ ಹಾಕಿ ಇರ್ತಿದ್ದೆ. ಮತ್ತೊಂದೆರಡು ದಿನ ಕಳೆದ ಮೇಲೆ ನಿನ್ನ ಕುಡಿನೋಟದ ನೆರಳಿನಲ್ಲಿ ನಿನ್ನ ಹತ್ತಿರ ಬಂದು ಬಿಡ್ತಿದ್ದೆ ಈ ಬಾರಿ ಹೀಗಾಗಲ್ಲ ನಾನು ಹೋಗುತ್ತಿದ್ದೇನೆ ದೂರ...''
“ಇದು ಒಂದು ಸಿಟ್ಟು ಅಂತ ತಿಳ್ಕೊಂಡು ನನ್ನ ಮೇಲೆ ತೀರಿಸ್ಕೊ ಹುಡುಗಿ”
“ಸಾಧ್ಯವೇ ಇಲ್ಲ.. ನನ್ನ ಸಿಟ್ಟು ಕೋಪ, ಸೇಡವು ಇನ್ನಾರ ಮೇಲೋ ತೀರಿಸಿಯಾಗಿದೆ ”
“ಅಂದರೆ?”
“ಎಲ್ಲ ಹೇಳಲೇ ಬೇಕಾ?”
“ಇನ್ನೇನು ಹೇಳೋದು???”
ಅವನು ಏನೊಂದು ಹೇಳಲಿಲ್ಲ. ನನಗೆ ಗೊತ್ತಿತ್ತು. ನನಗೆ ಆ ನೋವು ಸಾಕಾಗಿ ಹೋಗಿತ್ತು, ಗೊತ್ತೇ ಇಲ್ಲದ ಸಂಬಂಧವನ್ನ ನನ್ನ ಮನೆಯೊಳಗೆ ಬಿಟ್ಟುಕೊಂಡಿದ್ದೆ. ಯಾಕೆ ಗೊತ್ತಾ? ಒಂದಿಲ್ಲ ಒಂದು ದಿನವಾದರೂ ಗೊತ್ತೆ ಇಲ್ಲದ ಸ್ನೇಹದಲ್ಲಿ ನನ್ನತನ ನನಗೆ ಸಿಕ್ಕಬಹುದು ಅನ್ನೊ ನಿರೀಕ್ಷೆ ಇತ್ತು. ಪ್ರತಿ ಬಾರಿ ಸುಳ್ಳೇ ಸುಳ್ಳು ಮಾಡಿಕೊಂಡ ಸಿಟ್ಟಿನಲ್ಲಿ ಹಿಡಿ ಪ್ರೀತಿ ಇರುತ್ತಿತ್ತು. ಆದರೆ ಇಂದು ಒಂದೇ ಒಂದು ಸುಳ್ಳು ಹೇಳಿ, ನನ್ನ ಹತಾಶೆಯನ್ನ ದೂರ ಮಾಡಿದ್ದೇನೆ. ಅವನು ಎಂದಿಗೂ ಹಿಂದಿರುಗಲಾರನು ಎಂದು ಗೊತ್ತಿದ್ದರೂ ಒಂದೇ ಸುಳ್ಳು ಹೇಳಿದೆ ಅದು ಎಂದಿಗೂ ನಿಜ ಸ್ವರೂಪ ಪಡೆಯದು.

Share this Story:

Follow Webdunia kannada