Select Your Language

Notifications

webdunia
webdunia
webdunia
webdunia

ಬೆದರಿದ ಹರಿಣಿ

ಬೆದರಿದ ಹರಿಣಿ
ಹಂಝ ಮಲಾರ್

'ಹಲೋ ಗುಡ್ ಮಾರ್ನಿಂಗ್, ಸರ್ವಾಣಿ ಡೈಲಿ' ಹಾಗಂತ ದಿನಾ ಬೆಳಿಗ್ಗೆ ಎಂಟರಿಂದ ಸಂಜೆ ಆರರವರೆಗೆ ಐಶ್ವರ್ಯ ರಿಸೀವರ್ ಕೈಗೆತ್ತಿಕೊಂಡೊಡನೆ ಹೇಳುತ್ತಾಳೆ. ದಿನಕ್ಕೆ ಕಡಿಮೆ ಎಂದರೂ ಐನೂರಕ್ಕೂ ಅಧಿಕ ಪೋನ್ ಕರೆಗಳನ್ನು ಸ್ವೀಕರಿಸುವ ಆಕೆ, ಎಡಿಟಿಂಗ್, ಪ್ರಿಂಟಿಂಗ್, ಸರ್ಕ್ಯುಲೇಶನ್, ಎಡ್ವರ್ಟೈಸ್‌ಮೆಂಟ್ ಹೀಗೆ ವಿವಿಧ ಸೆಕ್ಷನ್‌ಗಳಿಗೆ ಕನೆಕ್ಷನ್ ಕೊಡುತ್ತಾಳೆ. ಒಮ್ಮೊಮ್ಮೆ ಮಧ್ಯಾಹ್ನ 12 ಗಂಟೆ ದಾಟಿದ್ದರೂ ಕೂಡ ಗುಡ್ ಮಾರ್ನಿಂಗ್ ಅಂತಲೇ ಹೇಳುತ್ತಾಳೆ ಎಂದನ್ನುತ್ತಾ ಕೆಲವರು ಚೇಷ್ಠೆಯಾಡುತ್ತಾರೆ. 'ಓ ಸ್ವಾರಿ' ಅನ್ನುತ್ತಾ ಐಶ್ವರ್ಯಾ ವಾಸ್ತವಕ್ಕಿಳಿಯುತ್ತಾಳೆ.

ಐಶ್ವರ್ಯ ಚಂದದ ಹುಡುಗಿ. ವಯಸ್ಸು ಇನ್ನೂ ಇಪ್ಪತ್ತೊಂದು ಪೂರ್ತಿಯಾಗಿಲ್ಲ. ಬಿ.ಎ. ಮುಗಿಸಿದೊಡನೆ ಪತ್ರಿಕೆಯೊಂದರಲ್ಲಿ ಬಂದ ಜಾಹಿರಾತು ನೋಡಿ ಅರ್ಜಿ ಗುಜರಾಯಿಸಿದ್ದಳು. ಮೊದಲ ಇಂಟರ್‌ವ್ಯೂನಲ್ಲೇ ಗೆದ್ದುಕೊಂಡಿದ್ದಳು. ಅದಕ್ಕೆ ಅವಳ ಚಂದವೇ ಕಾರಣ ಅಂತ ಅವಳಿಗೂ ಗೊತ್ತಿತ್ತು. ಅವಳಿಗೆ ಕೆಲಸ ಸಿಕ್ಕಿದಾಗ, "ಐಶ್ವರ್ಯ, ನಿನಗೆ ಡಿಗ್ರಿ ಮುಗಿದೊಡನೆ ಖಂಡಿತ ಕೆಲಸ ಸಿಗುತ್ತದೆ. ಒಂದೋ ಯಾವುದಾದರೂ ಶಾಪ್‌ನ ಸೇಲ್ಸ್‌ಕೌಂಟರ್‌ನಲ್ಲಿ ಕೆಲಸ ಸಿಕ್ಕೀತು. ಇಲ್ಲದಿದ್ದರೆ ಪ್ರೈವೇಟ್ ಶೋ ರೂಮ್ ಅಥವಾ ಕಂಪೆನಿಗಳಲ್ಲಿ ರಿಸೆಪ್ಶನ್ ಕೆಲಸ ಸಿಕ್ಕೀತು" ಅಂತ ಗೆಳತಿಯರು ಹೇಳುತ್ತಿದ್ದುದು ನೆನಪಾಗಿತ್ತು.

ಐಶ್ವರ್ಯ ಜಿಲ್ಲೆಯ ಪ್ರಭಾವಿ ದೈನಿಕದಲ್ಲಿ ರಿಸೆಪ್ಶನಿಸ್ಟ್ ಆಗಿದ್ದಾಳೆ. ಕಳೆದ ತಿಂಗಳಿನಿಂದ ಅವಳು ಅಲ್ಲಿ ಕೆಲಸ ಮಾಡುತ್ತಿದ್ದಾಳೆ. ದಿನಕ್ಕೆ ನೂರಾರು ತರದ ಪೋನ್ ಕರೆಗಳು ಬರುತ್ತಿತ್ತು. ಆ ಪತ್ರಿಕೆ ಪ್ರಭಾವಿ ಪತ್ರಿಕೆಯಾದ ಕಾರಣ ಕೆಲವು ಬೆದರಿಕೆ ಕರೆಗಳೂ ಬರುತ್ತಿತ್ತು. ಮತ್ತೆ ಸಂಪಾದಕರನ್ನು ಅಭಿನಂದಿಸಿ ಕೆಲವು ಫೋನ್ ಬರುತ್ತಿತ್ತು. ಕೆಲವರು 'ಸಂಪಾದಕರಿಗೆ ಲೈನ್ ಕೊಡಿ' ಎಂದು ಹೇಳುತ್ತಾರೆ. 'ತಾವು ಯಾರು' ಎಂದು ಐಶ್ವರ್ಯ ಕೇಳಬೇಕು. ಬೆದರಿಕೆ ಕರೆ ಅಲ್ಲ ಅಂತ ತಿಳಿದ ನಂತರ ಅವಳು ಸಂಪಾದಕರಿಗೆ ಲೈನ್ ಕನೆಕ್ಟ್ ಮಾಡುತ್ತಾಳೆ.

ಕೆಲವರಿಗಂತೂ ಬೆದರಿಕೆ ಮಾತುಗಳನ್ನು ಯಾರಲ್ಲಿ ಹೇಳಬೇಕು ಎಂಬ ಪ್ರಜ್ಞೆಯೂ ಇರುವುದಿಲ್ಲ. ರಿಸೀವರ್ ತೆಗೆದು ಯಾರು 'ಹಲೋ' ಅನ್ನುತ್ತಾರೋ ಅವರಲ್ಲೇ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಐಶ್ವರ್ಯಳಿಗೆ ಮೊದಮೊದಲು ಇದು ಕಿರಿಕಿರಿಯಾಗಿತ್ತು. ಕೆಲಸ ಬಿಡಲಾ ಎಂದು ಯೋಚಿಸಿದ್ದಳು. ಆದರೆ ಯಾಕೋ ಆಕೆಗೆ ಕೆಲಸ ಬಿಡಲು ಮನಸ್ಸಾಗಲಿಲ್ಲ. ಎಷ್ಟೋ ಮಂದಿ ಕೆಲಸ ಇಲ್ಲದೆ ಅಲೆದಾಡುತ್ತಾರೆ. ದಿನಾ ಸಂದರ್ಶನ ಎದುರಿಸಿ ಹತಾಶರಾಗುತ್ತಾರೆ. ಎಷ್ಚು ಅನುಭವ ಇದೆ ಎಂದು ಅಸಂಬದ್ಧವಾಗಿ ಪ್ರಶ್ನಿಸುತ್ತಾರೆ. ತನ್ನಲ್ಲಿ ಅನುಭವ ಎಷ್ಟೂಂತ ಕೇಳಲಿಲ್ಲ. ಹಾಗಾಗಿ ಎಷ್ಟೇ ಕಷ್ಟ ಬಂದರೂ ಇಲ್ಲಿ ದುಡಿಯಬೇಕು. ಈ ಪತ್ರಿಕೆ ಕೇವಲ ಪತ್ರಿಕೆಯಲ್ಲ. ಇದು ಜಿಲ್ಲೆಯ ಜನರ ಜೀವನಾಡಿ. ಜಿಲ್ಲೆಯ ಯಾವುದೇ ಮೂಲೆಯ ಜನರು ತಮ್ಮ ಸಮಸ್ಯೆಯನ್ನು ಹೊತ್ತುಕೊಂಡು ಪತ್ರಿಕಾ ಕಚೇರಿಗೆ ಬರುತ್ತಾರೆ. ಇಲ್ಲವೇ ಅಂಚೆ ಮೂಲಕವೋ, ಪೋನ್ ಮೂಲಕವೋ ತಿಳಿಸುತ್ತಾರೆ. ಸಂಪಾದಕರ ದಿನನಿತ್ಯದ ಕಾಲಂ ಇಲ್ಲದಿದ್ದರೆ ಸಂಪಾದಕರು ಊರಲ್ಲಿ ಇಲ್ಲವಾ? ಎಂದು ಕೇಳುವವರಿಗೂ ಕೊರತೆ ಇರಲಿಲ್ಲ. ದಿನ ನಿತ್ಯ ನೂರಾರು ಅಭಿನಂದನೆಗಳ ಕರೆ, ಬೆದರಿಕೆಗಳ ಕರೆ ಅವಳಿಗೆ ಈಗ ಎಡಿಟ್ ಆಗಿದೆ. ಹೌದು, ಈ ಪತ್ರಿಕೆಯಲ್ಲಿ ದುಡಿಯುವುದೆಂದರೆ ಚಿಲ್ಲರೆಯ ವಿಷಯವಲ್ಲ. ಇದೊಂದು ಚಾಲೆಂಜ್‌ನ ಬದುಕು ಅಂತ ಆಗಾಗ ಹೇಳುತ್ತಾ ಸಮಾಧಾನ ತಂದುಕೊಳ್ಳುತ್ತಾಳೆ. ಪ್ರತೀ ದಿನ ಜನ ಆ ಪತ್ರಿಕೆಯಲ್ಲಿ ತಾಜಾ ಸುದ್ದಿಗಾಗಿ ಕಾತರದಿಂದ ಇರುವುದನ್ನು ಅವಳು ಗಮನಿಸಿದ್ದಾಳೆ. ಕೆಲವರು ಸ್ಕೂಪ್ ನ್ಯೂಸ್‌ಗಳನ್ನು ವರದಿಗಾರರಲ್ಲಿ ಹೇಳಲು ಆಗಾಗ ಫೋನ್ ಮಾಡುತ್ತಿರುವುದೂ ಉಂಟು. ಕೆಲವರ ಫೋನ್ ಕರೆಗಳ ಧ್ವನಿಗಳನ್ನು ಐಶ್ವರ್ಯ ಗುರುತಿಸುತ್ತಾಳೆ. ಯಾರಿಗೆ ಬೇಕೋ ಅವರಿಗೆ ಸಂಪರ್ಕ ಕೊಟ್ಟುಬಿಡುತ್ತಾಳೆ. ಮತ್ತೆ ಕೆಲವರ ಪರಿಚಯ ಕೇಳುತ್ತಾಳೆ. "ದಿನಕ್ಕೆ ಐನೂರು ಫೋನ್ ಕರೆಗಳಿಗೆ 'ಹಲೋ' ಎನ್ನುತ್ತಾ ಅವರ ಎಲ್ಲಾ ಹೇಳಿಕೆಗಳನ್ನು ಕೇಳುವ ನಿನ್ನ ಮನಸ್ಥಿತಿ ಹೇಗಾಗಿರಬೇಡ?" ಹಾಗಂತ ಕಥೆಗಾರ ಮಿತ್ರ ಕೇಳಿದಾಗ ಆಕೆ ತುಟಿ ಅಂಚಿನಲ್ಲೇ ನಗುತ್ತಾಳೆ.

ಶನಿವಾರ ಸಂಜೆಯಾಗಿತ್ತು. ಐಶ್ವರ್ಯಾ ಮನೆಗೆ ಹೋಗುವ ಸಿದ್ಧತೆಯಲ್ಲಿದ್ದಳು. ನಾಳೆಯ ರಜೆಯನ್ನು ಹೇಗೆ ಕಳೆಯಲಿ ಎಂದು ಕೂಲಾಗಿ ಚಿಂತಿಸುತ್ತಿದ್ದಳು.

"ಹಲೋ... ಸಂಪಾಕರು ಇದ್ದಾರಾ? ನನಗೆ ಅವರಲ್ಲಿ ಸ್ವಲ್ಪ ಮಾತನಾಡಲಿಕ್ಕಿತ್ತು?"

"ತಾವು ಯಾರು ಮಾತನಾಡುವುದು?"

"ಅದೆಲ್ಲ ನಿಮಗೆ ಯಾಕೆ? ಲೈನ್ ಕನೆಕ್ಟ್ ಮಾಡಿ"

"ಹಾಗೆಲ್ಲ ಕೊಡಲಿಕ್ಕೆ ಆಗುವುದಿಲ್ಲ. ತಾವು ಯಾರು ಅಂತ ಹೇಳಿ? ಯಾವ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಮಾತನಾಡಲಿಕ್ಕೆ ಉಂಟು ಅಂತ ಸ್ಪಷ್ಟವಾಗಿ ಹೇಳಿ"

"ಅದೆಲ್ಲ ನಿಮ್ಮಲ್ಲಿ ಹೇಳಲಿಕ್ಕೆ ಆಗುವುದಿಲ್ಲ. ನನಗೆ ಅವರಲ್ಲೇ ಮಾತನಾಡಲಿಕ್ಕುಂಟು. ಈವತ್ತೊಂದು ಸುದ್ದಿ ಬಂದಿತ್ತಲ್ಲಾ? ಅದು ಯಾರು ಮಾಡಿದ್ದು? ಯಾರು ಕೊಟ್ಟದ್ದು ಅಂತ ಗೊತ್ತಾಗಬೇಕಿತ್ತು?"

"ಇಲ್ಲ ಸಂಪಾದಕರು ಹೊರಗೆ ಹೋಗಿದ್ದಾರೆ." ಹಾಗಂತ ಐಶ್ವರ್ಯ ಸುಳ್ಳು ಹೇಳಿದಳು.

'ರಾಸ್ಕಲ್' ಆತ ಬಯ್ಯುತ್ತಾ ಸಂಪರ್ಕ ಕಡಿದು ಹಾಕಿದ. ಆ ಬೈಗುಳ ಕೇಳಿ ಐಶ್ವರ್ಯ ಆಶ್ಚರ್ಯಚಕಿತಳಾದಳು. ಅವಳಿಗೆ ಮನೆಯಲ್ಲಿ ಬಡತನವಿದೆ. ತಿನ್ನಲು ಕೊರತೆಯೂ ಇದೆ. ಆದರೆ ಸೌಂದರ್ಯ ಮತ್ತು ಪ್ರೀತಿಗೆ ಎಂದೂ ಕೊರತೆ ಇರಲಿಲ್ಲ. ಈ ವರೆಗೂ ಆಕೆಗೆ ಯಾರೂ ಆ ರೀತಿ ಬೈದಿರಲಿಲ್ಲ. ಮನೆ, ಕಾಲೇಜಿನಲ್ಲೂ ಕೂಡಾ, ಎಷ್ಟೋ ಮಂದಿ ಪಡ್ಡೆ ಹುಡುಗರು ಅವಳ ಜತೆ ಟೈಂಪಾಸ್ ಪ್ರೀತಿಗಾಗಿ ಹಂಬಲಿಸಿ ಅದರಿಂದ ಸೋತು ಹೋದಾಗ ಹಿಂದಿನಿಂದ ಬೈದದ್ದು ಇದೆ. ಆದರೆ ಈ ವರೆಗೆ ಯಾರೂ ಕೂಡ ಹೀಗೆ ನೇರವಾಗಿ ಬೈಯ್ದಿರಲಿಲ್ಲ.

ಐಶ್ವರ್ಯ ಬೇಸರದಿಂದ ಎದ್ದು ಮನೆಗೆ ಹೋದಳು. ಮನೆಯಲ್ಲಿ ಒಂಥರಾ ಇದ್ದಾಗ, ಅಮ್ಮ "ಏನಾಯಿತು ಮಗಳೇ" ಎಂದು ಕೇಳಿದಾಗಲೂ, ಅಮ್ಮನ ಜತೆ ಕೂಡ ತನ್ನ ನೋವು ತೋಡಿಕೊಳ್ಳಲಿಲ್ಲ. ಹೇಗೋ ಭಾನುವಾರ ಮಧ್ಯಾಹ್ನವನ್ನು ಬೇಸರದಲ್ಲಿ ಕಳೆದರೆ, ಸಂಜೆ ವೇಳೆಗೆ ಕೂತುಕೂತು ಬೋರಾದ ಕಾರಣ ಸೀದ ಎದ್ದು ಸಿಟಿಯಲ್ಲಿ ಒಂದು ಸುತ್ತು ಹಾಕಿದ್ದಳು. ಸೋಮವಾರ ಕಚೇರಿಗೆ ಬಂದು ಕಪ್ಪಗಿನ ಟೆಲಿಫೋನ್ ಕಂಡಾಗ ಐಶ್ವರ್ಯ ಬೆಚ್ಚಿಬಿದ್ದಂತಾದಳು ಈ ಫೋನ್ ಕರೆಯಲ್ಲಿ ನಾನು ಎಷ್ಟೊಂದು ಧ್ವನಿಗಳನ್ನು ಕೇಳಿದ್ದೇನೆ, ಎಷ್ಟೊಂದು ಧ್ವನಿಯನ್ನು ಗುರುತಿಸಿದ್ದೇನೆ. ಇದೇ ಫೋನ್ ಕರೆಯಲ್ಲೇ ಅಲ್ವ
ನಾನು ರಾಸ್ಕಲ್ ಅಂತ ಬೈಗುಳ ಕೇಳಿದ್ದು. ಐಶ್ವರ್ಯ ತನ್ನಲ್ಲೇ ಸಿಡಿಮಿಡಿಗೊಂಡಳು. ಮತ್ತೊಂದು ಫೋನ್ ಕರೆ ಬಂತು. ಅದು ವಾರದ ಪ್ರಥಮ ಕರೆ. ಅಳುಕಿನಿಂದಲೇ ರಿಸೀವರ್ ಕೈಗೆತ್ತಿಕೊಂಡಳು.

"ಸಂಪಾದಕರಿಗೆ ಕೊಡಿ" - ಧ್ವನಿಯಲ್ಲಿ ಆದೇಶವಿತ್ತು. ಅದು ಮೊನ್ನೆ ಫೋನ್ ಕರೆ ಮಾಡಿದ ವ್ಯಕ್ತಿಯದ್ದೇ ಎಂದು ಗುರುತಿಸಿ, "ಅವರಿಲ್ಲ ಬೆಂಗಳೂರಿಗೆ ಹೋಗಿದ್ದಾರೆ" ಅಂತ ಸುಳ್ಳು ಹೇಳಿದಳು.
"ನಿನ್ನ ನಾಟಕ ಬೇಡ. ನಾನು ಯಾರೂಂತ ಗೊತ್ತಿಲ್ಲ. ಮನಸ್ಸು ಮಾಡಿದರೆ, ನಾನು ಏನೂ ಬೇಕಾದರೂ ಮಾಡಿಯೇನು. ನಿನ್ನೆ ಸಂಜೆನೀನು ಸಿಟಿಯಲ್ಲಿ ಓಡಾಡಿಕೊಂಡಿದ್ದೆಯಲ್ಲ. ಆವಾಗಲೇ ನಿನ್ನನ್ನು ನಡುದಾರಿಯಲ್ಲಿ ಕೇಳಬೇಕೂಂತ ಬಯಸಿದ್ದೆ. ಯಾಕೋ ಬೇಡಾಂತ ಆಯ್ತು. ಬಿಟ್ಟುಬಿಟ್ಟೆ. ಮರ್ಯಾದೆಯಿಂದ ನಿನ್ನ ಸಂಪಾದಕರಿಗೆ ಲೈನ್ ಕೊಡು. ಇಲ್ಲದಿದ್ದರೆ ನಿನ್ನ ಬಿಡೋಲ್ಲ" ಅಂತ ಅಬ್ಬರಿಸಿದ.

ಐಶ್ವರ್ಯ ನೆಮ್ಮದಿ ಕಳಕೊಂಡಳು. ಬೆದರಿದ ಹರಿಣಿಯಂತಾದಳು. ಸೀದಾ ಸಂಪಾದಕರ ಛೇಂಬರ್‌ಗೆ ನುಗ್ಗಿ ಶನಿವಾರದಿಂದ ಬರುವ ಫೋನ್ ಕರೆಯ ಬಗ್ಗೆ ವಿವರಿಸಿದಳಲ್ಲದೆ, ತಾನು ಇದರಿಂದ ನೆಮ್ಮದಿ ಕಳಕೊಂಡಿದ್ದೇನೆ, ನನ್ನನ್ನು ಇಲ್ಲಿಂದ ಮುಕ್ತಗೊಳಿಸಿ ಎಂದು ಕೈಮುಗಿದು ಬೇಡಿಕೊಂಡಳು.

"ಐಶ್ವರ್ಯ, ಅದಕ್ಕೆಲ್ಲ ಆತಂಕಗೊಳ್ಳುವುದು ಸರಿಯಲ್ಲ. ಇದೆಲ್ಲ ಸಿಲ್ಲಿ ವಿಷಯ. ಇಂಥದ್ದನ್ನೆಲ್ಲಾ ಧೈರ್ಯದಿಂದ ಎದುರಿಸಬೇಕು. ಹಾಗಾದರೆ ಮಾತ್ರ ಬದುಕಲು ಸಾಧ್ಯ" ಎಂದು ಸಂಪಾದಕರು ಧೈರ್ಯದ ಮಾತುಗಳನ್ನಾಡಿದರೂ ಐಶ್ವರ್ಯ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ, ಕೊನೆಗೆ ಆಕೆಯ ಗೆಳತಿಯರು ಸಮಾಧಾನ ಹೇಳಬೇಕಾಯಿತು.

"ಆಯ್ತಮ್ಮ, ನೀನು ಹೆದರಬೇಡ, ಇನ್ಮುಂದೆ ಕಾಲರ್ ಐ.ಡಿ ಇಡುತ್ತೇನೆ. ಇದರಿಂದ ಯಾರು ಎಲ್ಲಿಂದ ಫೋನ್ ಮಾಡುವುದು ಅಂತ ಗೊತ್ತಾಗುತ್ತದೆ. ಬೆದರಿಕೆ ಕರೆ ಬಂದ ಕೂಡಲೇ ಪೊಲೀಸರಿಗೆ ಮಾಹಿತಿ ಕೊಡೋಣ. ಆಗ ನಿನಗೆ ಫೋನ್ ಮಾಡುವ ವ್ಯಕ್ತಿ ಯಾರೂಂತ ಕಂಡು ಹಿಡಿಯಬಹುದು" ಎಂದು ಸಂಪಾದಕರು ಹೇಳಿದಾಗ ಐಶ್ವರ್ಯಳಿಗೆ ಸ್ವಲ್ಪ ಸಮಾಧಾನವಾಯಿತು.

ಹೌದು ಕಾಲರ್ ಐ.ಡಿ ಅಳವಡಿಸಿದರೆ, ನನಗೆ ಈ ವರೆಗೆ ಕಿರುಕುಳ ಕೊಟ್ಟವ ಯಾರೂಂತ ಇನ್ಮುಂದಾದರೂ ತಿಳಿಯಬಹುದು ಎಂದು ಭಾವಿಸಿದ ಅವಳು ತನ್ನ ನಿರ್ಧಾರದಿಂದ ಹಿಂದೆ ಸರಿದು ಕೆಲಸದಲ್ಲಿ ತೊಡಗಿಸಿಕೊಂಡಳು.

ಅದಾಗಿ ಒಂದು ತಿಂಗಳು ಕಳೆದಿರಬಹುದು. ಈಗ ಅಂಥ ಯಾವುದೇ ಕರೆ ಬಂದಿರಲಿಲ್ಲ. ಹಾಗಾಗಿ ಐಶ್ವರ್ಯ ಹಾಯಾಗಿದ್ದಳು. ಹಲವಾರು ಮಂದಿ ಕಚೇರಿಗೆ ನೇರವಾಗಿ ಬಂದು ಪ್ರೆಸ್‌ನೋಟ್ ಕೂಡಾ ಕೊಡುತ್ತಿದ್ದುದರಿಂದ ಆವತ್ತು ಮಧ್ಯಾಹ್ನ ಜೀನ್ಸ್ ಹಾಗೂ ಟೀ ಶರ್ಟ್ ಧರಿಸಿರುವ, ಗಟ್ಟಿಮುಟ್ಟು ಶರೀರದ ತೀರಾ ಬೆಳ್ಳಗಿನ ಯುವಕನೊಬ್ಬ ಕಚೇರಿಗೆ ಕಾಲಿಟ್ಟ. ಏನೇ ಇದ್ದರೂ ಮೊದಲು ರಿಸೆಪ್ಶನ್‌ನಲ್ಲಿ ಮಾತಾಡಬೇಕು. ಪ್ರೆಸ್ ನೋಟ್ ಮತ್ತಿತ್ಯಾದಿಯನ್ನು ಅವಳಲ್ಲೇ ಕೊಡಬೇಕು. ಬಂದಾತ ಪ್ರೆಸ್ ನೋಟ್ ಕೊಡುತ್ತಾ, "ಇದು ನಾಳೆ ಬಂದೀತಾ?" ಎಂದು ಕೇಳಿ ಮುಗುಳ್ನಕ್ಕ. "ಹೇಳೋಕ್ಕೆ ಆಗೋಲ್ಲ, ನಾಳೆ ಬಂದರೂ ಬಂದೀತು" ಎಂದು ಐಶ್ವರ್ಯ ಹೇಳಿದಾಗ, "ಥ್ಯಾಂಕ್ಸ್" ಎಂದು ಹೇಳುತ್ತಾ ಅವ ಎದ್ದು ನಿಂತ. ಕ್ಷಣಾರ್ಧದಲಿ ಮತ್ತೆ ಕೂತ ಅವ, "ನಿನಗೆ ಈಗ ಬೆದರಿಕೆ ಕರೆ ಬರುತ್ತಾ" ಎಂದು ಕೇಳಿದಾಗ, ಐಶ್ವರ್ಯ ಬೆಚ್ಚಿ ಬಿದ್ದಳು. ದೇಹವನ್ನು ಯಾರೋ ಹಿಡಿದು ನೂಕಿದಂತಾಯಿತು. ತಿಂಗಳ ಹಿಂದೆ ಘಟಿಸಿದವುಗಳು ಮತ್ತೆ ನೆನಪಾದವು.

"ಇಲ್ಲ" ಐಶ್ವರ್ಯ ಹೇಳಿದಳಾದರೂ ಕೂಡ ಒಮ್ಮೆ ಈ ಇಲ್ಲಿಂದ ತೊಲಗಿದರೆ ಸಾರು ಎಂದು ಮನಸ್ಸಲ್ಲೇ ಹೇಳಿಕೊಂಡಳು.

'ನನ್ನ ಗುರುತು ಸಿಕ್ಕಿತಾ?"

"ಇಲ್ಲ"

"ಸ್ವಾರೀ, ತಿಂಗಳ ಹಿಂದೆ ನಿನಗೆ ಬೆದರಿಕೆ ಹಾಕಿದವ ನಾನು" ಆತ ಹೇಳುತ್ತಾ ಅವಳಮುಖ ನೋಡಿದ. ಐಶ್ವರ್ಯ ಕಂಪಿಸಿದಳು. ಏನಿದು ಕನಸಾ? ಬೆದರಿಕೆ ಹಾಕಿದವನು ಇವನಾ? ಇವನ ಸ್ವರದಲ್ಲಿ ಎಷ್ಟೊಂದು ಇಂಪಿದೆ? ಮುಖದಲ್ಲಿ ಎಷ್ಟೊಂದು ತೇಜಸ್ಸು ಇದೆ? ಇಂಥ ಯುವಕ ಯಾಕೆ ಬೆದರಿಕೆ ಹಾಕಿದ? ಐಶ್ವರ್ಯ ತನ್ನಲ್ಲೇ ಪ್ರಶ್ನಿಸಿಕೊಂಡಳು.

"ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿನ್ನನ್ನು ಮದುವೆಯಾಗುತ್ತೇನೆ. ಒಪ್ಪಿಗೆ ಕೊಡದೆ ಹೋದರೆ ನಾನು ಖಂಡಿತಾ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ತಂದೆ, ತಾಯಿ, ಅಕ್ಕ, ತಂಗಿ, ತಮ್ಮಂದಿರು ಹೀಗೆ ಯಾರೂ ಇಲ್ಲದ ತಬ್ಬಲಿ. ನನಗೀಗ ಒಂದು ಹೆಣ್ಣು ಬೇಕು. ಅವಳ ಜತೆ ಸಂಸಾರ ಸಾಗಿಸಬೇಕು. ಆ ಹೆಣ್ಣು ನೀನೇ ಆಗಬೇಕು. ನಿನ್ನನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಎರಡು ದಿನದ ನಂತರ ಫೋನ್ ಮಾಡುತ್ತೇನೆ. ನಿರ್ಧರಿಸಿ ಹೇಳು" ಎನ್ನುತ್ತಾ ಆತ ಎದ್ದು ಹೋದ.

ಅವ ಎದ್ದು ಹೋಗುವ ಮುನ್ನವೇ ಅವನಿಗೆ ಕೇಳಿಸುವಂತೆ "ಇಲ್ಲ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ನಾನು ಯಾರನ್ನೂ ಪ್ರೀತಿಸುವುದಿಲ್ಲ. ನನಗೆ ಅದರಲ್ಲಿ ನಂಬಿಕೆ ಇಲ್ಲ. ನಾನು ಕಾಲೇಜಿನಲ್ಲೂ ಯಾರನ್ನೂ ಪ್ರೀತಿಸಿಲ್ಲ. ಮೊದಲು ನನ್ನ ಬದುಕು ಭದ್ರವಾಗಬೇಕು. ದಯವಿಟ್ಟು ನನಗೆ ಕಿರುಕುಳ ಕೊಡಬೇಡಿ. ನನಗೆ ಫೋನ್ ಮಾಡಬೇಡಿ. ಅಲ್ಲದೆ ನನಗೆ ಎಂಗೇಜ್‌ಮೆಂಟ್ ಆಗಿದೆ. ನೀವು ಬೇರೆ ದಾರಿ ನೋಡಿ" ಐಶ್ವರ್ಯ ಪರಿಪರಿಯಾಗಿ ಬೇಡಿಕೊಂಡಳು. ಅವಳು ಆ ದಿನವನ್ನು ಕೆಟ್ಟದಾಗಿ ಕಳೆದಳು.

ಮರುದಿನ ಕಚೇರಿಗೆ ಹೋಗುವುದಿಲ್ಲ ಅಂತ ತೀರ್ಮಾನಿಸಿದರೂ ಕೂಡ ಯಾಕೋ ಮನೆಯಲ್ಲಿ ಕೂರಲು ಬೋರಾಗಿತ್ತು. ಹಾಗಾಗಿ ಕಚೇರಿಗೆ ಕಾಲೆಳೆದಳು. ಹೋದವಳೇ ಪತ್ರಿಕೆಯಲ್ಲಿ ಕಣ್ಣಾಡಿಸಿದಳು. ಪತ್ರಿಕೆಯ ಹಿಂಬದಿಯಲ್ಲೊಂದು ಸುದ್ದಿ ಅವಳ ಕಣ್ಣಿಗೆ ಎದ್ದು ಕಂಡಿತು. ಜತೆಗೆ ಆ ಫೋಟೋ. "ಅಂದರೆ ಅವ ಆತ್ಮಹತ್ಯೆ ಮಾಡಿಕೊಂಡನಾ? ಹಾಗಿದ್ದರೆ ಅವನೆಷ್ಟು ಪುಕ್ಕ?" ಅಂತ ಐಶ್ವರ್ಯ ಪ್ರಶ್ನಿಸುತ್ತಾ ಸುದ್ದಿಯನ್ನು ಓದತೊಡಗಿದಳು.

ಚಲಿಸುತ್ತಿರುವ ರೈಲಿನಿಂದ ಹಾರಿ ಆತ್ಮಹತ್ಯೆ ಎಂಬ ಹೆಡಿಂಗ್ನೊಂದಿಗೆ ಆರಂಭವಾದ ಸುದ್ದಿ.... ಚಲಿಸುತ್ತಿರುವ ರೈಲಿನಿಂದ ರಿತೇಶ್ ಎಂಬ 25 ವರ್ಷದ ಯುವಕ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ ತಾಯಿ ಇಲ್ಲದ ಈ ತಬ್ಬಲಿ ಯುವಕ ಬದುಕಿನಲ್ಲಿ ಜಿಗುಪ್ಸೆ ಕಂಡಿದ್ದಾನೆ. ಅನ್ಯಾಯವನ್ನು ಕಂಡು ಸದೆ ಬಡಿಯುವ ಛಲ ಹೊತ್ತಿದ್ದ. ಇತ್ತೀಚೆಗೆ ಈತ ಒಂದು ಹುಡುಗಿಯನ್ನು ಪ್ರೇಮಿಸಲು ಮುಂದಾಗಿದ್ದು ಆಕೆ ನಿರಾಕರಿಸಿದ ಕಾರಣ ಈತ ಈ ಕೃತ್ಯ ಎಸಗಿದ್ದಾನೆ. ಈತನನ್ನು ಒಲ್ಲೆ ಎಂದು ಹೇಳಿದ ಯುವತಿ ಯಾರೂಂತ ತಿಳಿದಿಲ್ಲ. ಪೊಲೀಸರಿಂದ ತನಿಖೆ ನಡೆಯುತ್ತಿದೆ ಎಂದು ಕೊನೆಗೊಂಡಿತ್ತು.

"ಆ ಯುವತಿ ಯಾರು ನಾನಾ? ನನ್ನಂತೆ ಅವ ಬೇರೆ ಹುಡುಗಿಯರ ಹಿಂದೆ ಬಿದ್ದಿದ್ದನಾ? ಈ ಸುದ್ದಿ ಮಾಡಿದ್ದು ನಮ್ಮ ವರದಿಗಾರ ರಾಜೇಶ್ ಅಲ್ಲವೆ? ಅವನಲ್ಲಿ ಈ ಬಗ್ಗೆ ಕೇಳಲೇ? ಕೇಳಿದರೆ, ಆ ಹುಡುಗಿ ನಾನೂಂತ ಗೊತ್ತಾದರೆ!?" ಐಶ್ವರ್ಯ ತನ್ನೊಳಗೆ ಪ್ರಶ್ನಿಸಿ ಆತಂಕಿತಳಾದಳು. ಆ ರಾತ್ರಿ ಅವಳಿಗೆ ನಿದ್ದೆ ಬೀಳಲಿಲ್ಲ. ಮರುದಿನ ಕಚೇರಿಗೆ ಕಾಲಿಟ್ಟಾಗ ಸಂಪಾದಕರ ಟಿಪ್ಪಣಿ ಅವಳ ಕಣ್ಣಿಗೆ ರಾಚಿತು.

"ನಿನ್ನೆಯ ನಮ್ಮ ಪತ್ರಿಕೆಯಲ್ಲಿ ಪ್ರಕಟವಾದ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿದ ಯುವಕ ಎಂಬ ಸುದ್ದಿಗೆ ಸಂಬಂಧಿಸಿದಂತೆ ಫೋಟೋ ಒಂದು ನಮ್ಮ ಕಣ್ತಪ್ಪಿನಿಂದಾಗಿ ಮುದ್ರಣಗೊಂಡಿದೆ. ಆ ಫೋಟೋಗೂ ಸುದ್ದಿಗೂ ಯಾವುದೇ ಸಂಬಂಧ ಇಲ್ಲ- ಸಂಪಾದಕರು" ಎಂಬ ಟಿಪ್ಪಣಿ ಓದಿದಳು.

ಹಾಗಿದ್ದರೆ, ನನಗೆ ಕಿರುಕುಳ ಕೊಡುವ ಯುವಕ ಆತ್ಮಹತ್ಯೆ ಮಾಡಿಕೊಂಡಿಲ್ಲ. ಐಶ್ವರ್ಯ ಸಮಾಧಾನದ ನಡುವೆಯೂ ಆತಂಕಗೊಂಡು, "ಅಂದ ಹಾಗೆ ಮತ್ತೆ ಈವತ್ತು ಫೋನ್ ಮಾಡಿಯಾನು, ಜತೆಗೆ ಇದರ ಬಗ್ಗೆಯೂ ತರಾಟೆಗೆ ತೆಗೆದುಕೊಂಡಾನು" ಎಂದು ಭಾವಿಸಿ ಮತ್ತೆ ಗೊಂದಲಕ್ಕೀಡಾದಳು. ಎರಡು ದಿನದವರೆಗೂ ಅವನ ಸುದ್ದಿ ಇರಲಿಲ್ಲ. ಐಶ್ವರ್ಯ ಪ್ರತಿಯೊಂದು ಫೋನ್ ಕರೆ ಬಂದಾಗಲೂ ಅದು ಅವನದ್ದೇ ಆಗಿರಬಹುದೆಂದು ಭಾವಿಸಿ, ರಿಸೀವರ್ ಕೈಗೆತ್ತಿ ಹಲೋ ಎನ್ನುತ್ತಿದ್ದಳು. ಆವತ್ತು ಐಶ್ವರ್ಯಳ ಹೆಸರಿಗೊಂದು ಪತ್ರ ಬಂತು. ತನಗೆ ಯಾರಪ್ಪಾ ಪತ್ರ ಬರೆಯುವವರು ಅಂಥ ಭಾವಿಸಿ ಒಡೆದು ಓದತೊಡಗಿದಳು.

"ಕ್ಷಮಿಸು, ಕಳೆದ ಒಂದುವರೆ ತಿಂಗಳಿಂದ ನಾನು ನಿನಗೆ ಕಿರುಕುಳ ಕೊಡುತ್ತಿದ್ದೇನೆ. ನಿನ್ನ ಭಾವೀ ಪತಿ ನನ್ನ ಗೆಳೆಯರು. ನಿನ್ನನ್ನು ಪರೀಕ್ಷಿಸಲು ಅವರು ನನ್ನನ್ನು ಬಳಸಿಕೊಂಡು ಇಂಥ ಕ್ಲಿಷ್ಟತೆಗೆ ಸಿಲುಕಿಸಿದರು. ನಾನು ಮಾಡಿದ ಅನ್ಯಾಯಕ್ಕೋ ಎಂಬಂತೆ ನಿನ್ನ ಕಚೇರಿಯ ಇತರರಿಂದ ಎಡವಟ್ಟಾಯಿತು. ಯಾರೋ ಆತ್ಮಹತ್ಯೆ ಮಾಡಿಕೊಂಡಾಗ ನನ್ನ ಫೋಟೋ ಪ್ರಕಟವಾಗಿದ್ದನ್ನು ಗಮನಿಸಿದೆ. ನೀನು ನಿನ್ನ ಭಾವೀ ಪತಿಯ ಪರೀಕ್ಷೆಯಲ್ಲಿ ಗೆದ್ದು ಬಿಟ್ಟಿದ್ದೀ. ನಿನ್ನನ್ನು ಮದುವೆಯ ದಿನ ಕಂಡು ಮಾತಾಡುತ್ತೇನೆ. ಆವರೆಗೆ ನನಗೆ ಕ್ಷಮೆ ಇರಲಿ" ಎಂದು ಬರೆದಿದ್ದ ಆ ಪತ್ರ ಓದಿಕೊಂಡ ಅವಳು, ತಾನು ಕನಸು ಕಾಣುತ್ತಿದ್ದೇನಾ ಎಂದು ಪ್ರಶ್ನಿಸಿ ಬಿಸಿಯಾದ ನಿಟ್ಟುಸಿರುವ ಬಿಟ್ಟಳು.

Share this Story:

Follow Webdunia kannada