Select Your Language

Notifications

webdunia
webdunia
webdunia
webdunia

'ಫೆಮಿನಾ' ಎಂಬ ಹೆಣ್ಣಿನ ಸುತ್ತ...

'ಫೆಮಿನಾ' ಎಂಬ ಹೆಣ್ಣಿನ ಸುತ್ತ...
ಮುಸ್ತಪಾ ಅವಳ ಫೋಟೋ ನೋಡುತ್ತಾ ಕೂತ. ಅವಳೊಡನೆ ಕೂಡಿಯಾಡಿದ ಆ ಕ್ಷಣಗಳನ್ನು ನೆನೆದ. ಅವಳ ಫೋಟೋ ನೋಡುವ ಹಕ್ಕು ಈಗ ಅವನಿಗಿರಲಿಲ್ಲ. ಹರಿದು ಚಿಂದಿ ಚಿಂದಿ ಮಾಡಬೇಕೆನಿಸಿತು. ಆದರೆ ಮನಸ್ಸು ಕೇಳಲಿಲ್ಲ. ಎಷ್ಟಾದರೂ ಕೆಲಕಾಲ ಮನಸಾರೆ ಪ್ರೀತಿಸಿದ ಹುಡುಗಿ.....!

ಆ ಹುಡುಗಿ ತನ್ನ ಮನಸ್ಸನ್ನು ಇನ್ನೊಬ್ಬನಿಗೆ ಅರ್ಪಿಸಿದಳು. ಅವನ ಕಣ್ಣಿಂದ ದೂರವಾದಳು. ಅದು ಅವನು ಎಂದೆಂದೂ ಕನಸು-ಮನಸ್ಸಲ್ಲೂ ನಿರೀಕ್ಷಿಸಿರದಂತೆ! ಅವಳನ್ನು ಕಳಕೊಂಡು ಮೂರು ವರ್ಷವಾದರೂ ಇನ್ನೂ ಅವಳು ಅವನ ಮನದಿಂದ ಮಾಸಿ ಹೋಗಿಲ್ಲ.

ಅವಳು- ಫೆಮಿನಾ...!

ಮುಸ್ತಫಾ ಆಗ ಅಂತಿಮ ಬಿ.ಎ. ವಿದ್ಯಾರ್ಥಿ. ಹೆಣ್ಣಿನ ಬಲವಾದ ಚಪಲ ಅವನಿಗಿರಲಿಲ್ಲ. ಅವನಾಯ್ತು.. ಅವನ ಪಾಡಾಯ್ತು.. ಹೆಚ್ಚಾಗಿ ಲೈಬ್ರೆರಿಯೇ ಅವನ ತಾಣ. ಅಂದರೆ ಪುಸ್ತಕ ಪ್ರಿಯ. ಅಗತ್ಯವಿದ್ದಷ್ಟು ಮಾತು.ಮನಸ್ಸಾದರೆ ಮುಗುಳ್ನಗೆ..! ಮುಸ್ತಫಾ ಸುಂದರ ಯುವಕ. ಗುಂಗುರು ಕೂದಲು, ದಪ್ಪ ಮೀಸೆ, ಫಳಫಳನೆ ಹೊಳೆಯುವ ಹಲ್ಲು, ಸೂಕ್ಷ್ಮ ಕಣ್ಣು... ಆದರೆ ಅವನ ಸೌಂದರ್ಯದ ಬಗ್ಗೆ ಅವನಿಗೂ ಹೆಮ್ಮೆಯಿಲ್ಲ!

ಚೆಲುವೆಯರ ಮುಂದೆ ಸೆಟೆದು ನಿಲ್ಲು ಕೂಡಾ ಧೈರ್ಯ ಬರುತ್ತಿಲ್ಲ?

"ಹಾಯ್ ಮುಸ್ತಫಾ... How are you ?"-ಎಂದು ಹುಡುಗಿಯೊಬ್ಬಳ ಧ್ವನಿ.

ಮುಸ್ತಫಾ ಹಿಂತುರುಗಿ ನೋಡಿದ... ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಫೆಮಿನಾ.ಮುಖ ಪರಿಚಯ ಮಾತ್ರ. ಈವರೆಗೂ ಮಾತಾಡಿದ್ದಾಲ್ಲ. ಆದರೆ ಹೆಸರು ಚೆನ್ನಾಗಿ ಗೊತ್ತಿದೆ.

"Fine"

"Mr.ಮುಸ್ತಫಾ.... ನಿನ್ನಲ್ಲಿ ಮಾತಾಡಬೇಕೆಂದು ಆಸೆ ಇದೆ."

"ಆ ಆಸೆ... ನೆರವೇರಲು ನಾನೇನು ಮಾಡಬೇಕಾಗಿದೆ?"

ಇಬ್ಬರೂ ನಕ್ಕರು...! ಅದು ಹುಡುಗಿಯೊಬ್ಬಳ ಎದುರು ಮುಸ್ತಫಾ ನಕ್ಕ ಮೊದಲ ನಗು! ಹೀಗೆ ಪರಿಚಯವಾದದ್ದು ಸ್ನೇಹವಾಗಿ ಬೆಳೆಯಿತು. ಒಂದು ದಿನ ಇಬ್ಬರೂ ರಸ್ತೆ ಪಕ್ಕದಲ್ಲಿ ಜತೆಯಾಗಿ ನಡೆಯುತ್ತಾ ಸಾಗಿದರು. ರಸ್ತೆ ತಿರುವಿನಲ್ಲೊಂದು ಕಲ್ಲು ಬೆಂಚು..ಜನಸಂದಣಿಯಿರಲಿಲ್ಲ.ಇಂಚು ಅಂತರದಲ್ಲಿ ಕೂತು, ಮತ್ತೆ ಮಾತುಕತೆ ಸಾಗಿತು.

"ಫೆಮಿನಾ.. ಮಾತಾಡಲಿಕ್ಕುಂಟು ಅಂದಿಯಲ್ಲ...ಮುಖ್ಯ ವಿಷಯ ಎದ್ದು ಕಾಣುತ್ತಿಲ್ಲವಲ್ಲ!"

"ಮುಸ್ತಫಾ..ಪ್ರತಿ ಹೆಣ್ಣಿನ ಹೃದಯದಲ್ಲೊಂದು ಗಂಡು ಇದೆ ತಾನೇ?"

"ಹ್ಞೂಂ..ಕೆಲವರಲ್ಲಿ ಮೂರ್ನಾಲ್ಕು... ಆದರೆ ನಿನ್ನಲ್ಲಿ ಯಾರು?"

"ಈಗ... ನನ್ನ ಹತ್ತಿರ ಕೂತವರು..."

"ಫೆಮಿನಾ... ಆಳವಾಗಿ ಚಿಂತಿಸಿ ಮುಂದಕ್ಕೆ ಹೆಜ್ಜೆ ಇಡು... ನಾನು ಪ್ರೀತಿಸಿದ ಹುಡುಗಿಯನ್ನೇ ಮುಂದೆ ಮದ್ವೆಯಾಗಬೇಕೆಂದಿರುವೆ. ನಮ್ಮದು Time pass ಗಾಗಿರುವ Love ಆಗಿರಬಾರದು. ಬದಲಾಗಿ ಸಂಪ್ರದಾಯದ ವಿಧಿ ವಿಧಾನ, ಗುರುಹಿರಿಯರ, ಆಪ್ತ ಬಂಧು-ಮಿತ್ರರ ಆಶೀರ್ವಾದದೊಂದಿಗೆ ಮದ್ವೆಯಾಗಿ ಹಾಯಾಗಿರಬೇಕು! ನಿನ್ನ ಮನೆಯವರ ಮನ ಒಲಿಸುವ ಜವಾಬ್ದಾರಿ ನಿನಗೆ. ಅವರು ವಿರೋಧಿಸಿದರೆ, ತಕ್ಕ ಉತ್ತರಕೊಟ್ಟು ನನ್ನ ಜೊತೆ ಸೇರುವಷ್ಟು ಧೈರ್ಯ ನಿನಗಿದೆಯಾ? ಹಾಗಿದ್ದಲ್ಲಿ ಮುಂದುವರಿಯೋಣ." ಮುಸ್ತಫಾ ಭವಿಷ್ಯತ್ತನ್ನು ಚಿಂತಿಸಿ ಹೇಳಿದ.

"ಮುಸ್ತಫಾ.. ಐ ಲವ್ ಯೂ...ನಾನು ನಿನ್ನನ್ನು ಅರ್ಥೈಸಿರುವೆ. ನಿನ್ನ ಜತೆಗೂಡುವ ಮುನ್ನ ಆಳವಾಗಿ ಚಿಂತಿಸಿರುವೆ. ಮನೆಯವರ ಸಮ್ಮತಿ ಮೇರೆಗೆ ನಿನ್ನವಳಾಗುವೆ". ಎರಡು ಜೀವಗಳು ಒಂದಾದವು. ಅದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ!ಅಗಲಿರಲಾರದಷ್ಟು ಸ್ಪಂದನೆಗೊಳಗಾದವು... ಸುಖ-ದುಃಖಗಳ ಹಂಚಿಕೆ....ಮುತ್ತುಗಳ ಸುರಿಮಳೆ... ನೂರು ಬಗೆಯ ಶೃಂಗಾರ ಚೇಷ್ಠೆಗಳ ಪ್ರಯೋಗವಾವು....!

ಮುಂದೆ ಈ ಪ್ರೇಮಿಗಳು ಸುತ್ತದ ನಗರ, ಪಾರ್ಕು ಇಲ್ಲ. ಹೊಕ್ಕದ ಪಾರ್ಲರು ಇಲ್ಲ....! ಮೈಸೂರ್, ಊಟಿ, ಕೊಡೈಕೆನಲ್, ಬೆಂಗಳೂರು, ಹೊಗೇನಕಲ್ ಮುಂತಾದ ಸ್ಥಳಗಶಲ್ಲಿ ವಿಹರಿಸಿಯೂ ಆಯ್ತು. ಮುಗ್ಧ ಪ್ರೇಮಿಗಳು ಒಂದುಗೂಡದೆ ಆರು ತಿಂಗಳು ಗರಿಗೆದರಿ ಹಾರಿಹೋದವು. ಅದೊಂದು ದಿನ ಮುಸ್ತಫಾ ಕಾಲೇಜು ಕ್ಯಾಂಪಸ್ ಬಳಿ ತನ್ನ ಫ್ರೆಂಡ್ಸ್‌ಗಳ ಜೊತೆ ಹರಟೆ ಹೊಡೆಯುತ್ತಿದ್ದ. ಒಬ್ಬಾತ ಮುಸ್ತಫಾನ ಬಳಿ ಬಂದು "ಒಂದು ನಿಮಿಷ ಹೊರ ಬರುವಿರಾ?ನಿಮ್ಮಲ್ಲಿ ಸ್ವಲ್ಪ ಮಾತ್ನಾಡಲಿಕ್ಕಿದೆ..." ಎಂದ.

"ಯಾಕೆ...? ತಾವು ಯಾರು?"

"ಅದೇ...ಪರಿಚಯ ತಿಳಿಸುತ್ತೇನೆ.. ಹೊರ ಕೂತು ಮಾತಾಡುವ... "

ಮುಸ್ತಫಾ ಆತನ ಹಿಂದೆ ಹೆಜ್ಜೆ ಹಾಕಿದ. ಮುಂದೆ ಆತ ಮುಸ್ತಫಾನನ್ನು ಒಂದು ಜೀಪಿನ ಬಳಿ ಕರೆದೊಯ್ದು ನಿಲ್ಲಿಸಿದ.

"ನಿನಗೂ- ಫೆಮಿನಾಳಿಗೂ ಏನು ಸಂಬಂಧ?" ದಢೂತಿ ದೇಹದವನೊಬ್ಬ ಪ್ರಶ್ನಿಸಿದ.

"ಅದನ್ನು ಕೇಳಲು... ತಾವು?"

"ಮುಂದೆ ಗೊತ್ತಾಗಲಿದೆ..!"

ಮುಸ್ತಫಾ... ಅವರ ಚಲನವಲನಗಳನ್ನು ಗಮನಿಸಿದ. ಜೀಪಿನಲ್ಲಿರುವ ಒಟ್ಟು ಆರು ಮಂದಿ ರಕ್ಕಸರಂತಿದ್ದಾರೆ. ಕಣ್ಣು ಕೆಂಪು ಕೆಂಪಾಗಿದೆ! ಆ ಜೀಪಿನಿಂದ ಅಮಲು ಪದಾರ್ಥದ ಘಾಟು ವಾಸನೆ ಬರುತ್ತಿದೆ. "ಹ್ಞೂಂ...ಈವತ್ತೇ ಕೊನೆ.ಇನ್ನು ಮುಂದೆ ಅವಳೊಡನೆ ನಿನ್ನ ಹುಡುಗಾಟ ನಿಲ್ಲಿಸಿ ಬಿಡು.. ಹುಷಾರ್! ನನ್ನ ಮಾತು ಮೀರಿದರೆ ನಿನ್ನ ಈ ರುಂಡ ನಿನ್ನ ಮನೆಯಂಗಳದಲ್ಲಿ...!"-ದಡೂತಿ ದೇಹದು ನುಡಿದಂತೆಯೇ ಜೀಪು ದೂಳೆಬ್ಬಿಸಿತು.

ಮರುದಿನ ಬೆಳಿಗ್ಗೆಯೇ ಮುಸ್ತಫಾ ಫೆಮಿನಾಳ ಆಗಮನವನ್ನು ಎದುರು ನೋಡತ್ತಾ ಕೂತ. ಅರ್ಧ ಗಂಟೆಯ ನಂತರ ಫೆಮಿನಾ ದೂರದಿಂದ ಬರುತ್ತಿರುವುದನ್ನು ಕಂಡ. ಅವಳು ಹತ್ತಿರ ಬಲು ಹತ್ತಿರವಾದಂತೆಯೇ ಅವಳ ಮುಖ ಖಿನ್ನತೆಯಿಂದಿದ್ದನ್ನು ಗುರುತಿಸಿ "ಏನು... ಚಿನ್ನಾ...ಒಂಥರಾ ಇದ್ದೀಯಲ್ಲಾ?" ಎಂದು ಪ್ರಶ್ನಿಸಿದ. "ಮುಸ್ತಫಾ..ನನ್ನನ್ನು ನೀನಿನ್ನು ಚಿನ್ನಾ... ಎಂದು ಕರೆಯಬೇಡ. ನನ್ನನ್ನು ಕ್ಷಮಿಸಿ ಬಿಡು... ನನ್ನನ್ನು ಮರೆತುಬಿಡು. ಈವರೆಗೆ ನಮ್ಮೊಳಗಿನ ಸಂಬಂಧ ಒಂದು ಕನಸು ಎಂದು ಭಾವಿಸಿ ಬಿಡು...! ಮುಸ್ತಫಾ. ನಾವು, ದೂರ- ಬಹುದೂರ ಇದ್ದರೇನೇ ಚೆನ್ನ. ಜೊತೆಗೆ ಈ ದೇಹ ಜೀವಂತವಾಗಿ ಉಳಿದೀತು. ಇಲ್ಲದಿದ್ದರೆ ನಮ್ಮನ್ನು ಅವರು ಬದುಕಲು ಬಿಡಲಾರರು. ನನಗಿಂತ ಮುಂಚೆ ನಿನ್ನ ರಕ್ತವೇ ಈಗ ಅವರಿಗೆ ರುಚಿ. ಮರೆತು ಬಿಡು ಮುಸ್ತಫಾ... ನನ್ನನ್ನು ಮರೆತು ಬಿಡು.,.."
"ಫೆಮಿನಾ... ಏನಿದು? ಯಾರು ಅವರೆಲ್ಲ?'

"ಮುಸ್ತಫಾ..ನನ್ನ ನೋವನ್ನು ಅರ್ಥೈಸು. ನಾವಿಬ್ಬರು ಪರಸ್ಪರ ಪ್ರೀತಿಸುತ್ತಿರುವುದು ಮತ್ತು ಈ ಹಿಂದೆ ಟೂರ್ ಹೋಗಿರುವುದೆಲ್ಲಾ ಮನೆಯವರಿಗೆ ಗೊತ್ತಾಯಿತು. ತಂದೆಗೆ ಇದು ಇಷ್ಟವಿಲ್ಲದೇ ಹೋಯಿತು! ಇನ್ನು, ನನಗೆ ಒಬ್ಬನೇ ಒಬ್ಬ ಅಣ್ಣ.. ನಿಯತ್ತಿಂದ ಬಾಳುವುದು ಹೇಗೆ ಎಂದು ಅವನಿಗೆ ಗೊತ್ತಿಲ್ಲ. ಅಂದರೆ ಅವನೊಬ್ಬ ದೊಡ್ಡ ರೌಡಿ..ರವೂಫ್ ಎಂತ.. ಈ ಹೆಸರನ್ನು ನೀ ಕೇಳಿರಬಹುದು...! ಅವನಿಗೆ ನಮ್ಮ ವಿಷಯ ಗೊತ್ತಾಯಿತು. ತಂಗಿ ಅಂತ ನೋಡಲಾರೆ, ಆದಷ್ಟು ಬೇಗ ಅವನಿಂದ ದೂರವಿರು, ನನ್ನ ಮಾತು ಮೀರಿದೆಯಾದರೆ ಒಂದೇ ಏಟಿಗೆ ಎರಡು ಹಕ್ಕಿಯನ್ನೂ ಉರುಳಿಸುವೆ ಎಂದು ದಯೆ ದಾಕ್ಷಿಣ್ಯವಿಲ್ಲದೆ ಎಚ್ಚರಿಕೆ ಕೊಟ್ಚ. ನಿನ್ನೆ ನಿನ್ನ ಬಳಿ ಗೂಂಡಾಗಳನ್ನು ಕಳುಹಿಸಿ ಕೊಟ್ಟ. ಮತ್ತೆ ಈಗಲೂ ನಮ್ಮಿಬ್ಬರ ಮಧ್ಯ ಸಂಬಂಧವಿದೆಯೆಂದು ಅವನಿಗೆ ತಿಳಿದಲ್ಲಿ, ಖಂಡಿತ ನಮ್ಮ ರುಂಡ ತುಂಡರಿಸಲು ಹೇಸದವನು. ಯಾಕೆಂದರೆ ಇಂತಹುದು ಅವನಿಗೆಲ್ಲಾ ಮಾಮೂಲು ವಿಷಯ. ಮನೆ ತುಂಬಾ ನಮ್ಮಿಬ್ಬರ ವಿಷಯದ ಬಗ್ಗೆ ಮಾತಾಡುತ್ತಿದ್ದಾರೆ. ರಾತ್ರಿ ನನಗೆ ಒಂದಿಷ್ಟು ನಿದ್ದೆಯಿಲ್ಲ! ಮುಸ್ತಫಾ.. ನನ್ನನ್ನು ಮರೆತುಬಿಡು"

"ಫೆಮಿನಾ..ನಿನ್ನ ನೋವನ್ನು ಅರ್ಥೈಸಿದೆ. ಆದರೆ ನನಗೆ ನೀನು ಬೇಕು. ನಮ್ಮದು ಭಗ್ನ ಪ್ರೇಮವಾಗಬಾರದು.ಎಂದೆಂದೂ ಅಮರವಾಗಿರಬೇಕು. ಈ ಭಯ ಮಿಶ್ರಿತ ವಾತಾವರಣದಲ್ಲಿ ಬದುಕನ್ನು ಎದುರಿಸಲು ನೀ ಹೆದರುವಿಯಾದರೆ ನಾವಿಬ್ಬರು ದೂರದ ಊರಲ್ಲಿ ನೆಲೆಸಿ ಹಾಯಾಗಿರುವ."
"ಮುಸ್ತಫಾ... ಅದು ಹೇಳಿಕೊಳ್ಳುವಷ್ಟು ಸುಲಭವಲ್ಲ."

"ಅಂದರೆ?"

"ನನ್ನನ್ನು ಮರೆತು ಬಿಡು"

"ಫೆಮಿನಾ..ನನ್ನ ಬಾಳಿಗೊಂದು ಕಪ್ಪು ಚುಕ್ಕೆ ಇಡಲು ಹೊರಟೆಯಾ?"

"Sorry..ಮುಸ್ತಫಾ...ಮತ್ತೆ ಮತ್ತೆ ಪ್ರಶ್ನಸಿ ನನ್ನನ್ನು ಹಿಂಸಿಸಬೇಡ.. ನನ್ನ ಬಾಳಿಗೆ ನೆಮ್ಮದಿ ನೀಡು.."

"ಅಂದರೆ...ನಾನು ನಿನ್ನಿಂದ ದೂರವಾದರೆ ನೆಮ್ಮದಿಯಿಂದ ಬಾಳುತ್ತೀಯಾ?"

ಹೀಗೆ ಹೇಳಿ ಕೈ ಕೊಟ್ಟು ಓಡಿ ಹೋದ ಫೆಮಿನಾ ಮತ್ತೆ ಕಾಲೇಜು ಮೆಟ್ಟಲಿಲ್ಲ. ಮುಸ್ತಫಾ ಆ ಹುಡುಗಿಯನ್ನು ನೆನೆಯುತ್ತಲೇ ಕೊರಗಿದ...ಅವಳು ತನ್ನಿಂದ ದೂರವಾಗಿ ಮೂರು ವರ್ಷ ಕಳೆದರೂ ಮುಸ್ತಫಾನಿಗೆ ಮರೆಯಲಾಗುತ್ತಿಲ್ಲ.. ಅವಳು ಮದುವೆಯಾಗಿ ಗಂಡನ ಬಳಿ ಸೇರಿದ್ದರೂ ಕೂಡಾ ಅವಳ ಫೋಟೋ ನೋಡುತ್ತಾ ಮಾತಾಡುತ್ತಾ ಮುದ್ದಿಸುತ್ತಿದ್ದ.ಒಮ್ಮೊಮ್ಮೆ ಕೋಪ ನೆತ್ತಿಗೇರಿದಾಗ ಅದನ್ನು ಹರಿದು ಬಿಸಾಡಬೇಕೆನಿಸುತ್ತದೆ.ಆದರೆ ಮನಸ್ಸು ಕೇಳುತ್ತಿಲ್ಲ. ಯಾಕೆಂದರೆ ಆ ಕೋಪವನ್ನು ತಣಿಸುವುದು ಫೋಟೋ ಮಾತ್ರ ಎಂದು ಅವನ ಬಲವಾದ ನಂಬಿಕೆ...!

ಮುಸ್ತಫಾ ಸ್ಥಳೀಯ ಪದವಿ ದೂರ್ವ ಕಾಲೇಜಿನಲ್ಲಿ ಹೆಡ್‌ಕ್ಲಾರ್ಕ್ ಆಗಿದ್ದು, ಕಳೆದೆರಡು ತಿಂಗಳಿಂದ ಮನೆಯನ್ನು ಮುನ್ನಡೆಸುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದ. ಮುಸ್ತಫಾನಿಗೆ ಆಳೆತ್ತರಕ್ಕೆ ಬೆಳೆದು ನಿಂತ ಶಾಹಿದಾಬಾನು ಎಂಬ ತಂಗಿ ! ಅದಲ್ಲದೆ ಮಧ್ಯಮ ಕುಟುಂಬದಲ್ಲಿ ಹುಟ್ಟಿ ಬೆಳೆದ ಮುಸ್ತಫಾ ತಂದೆ- ತಾಯಿಗೊಬ್ಬನೇ ಮಗ. ಶಹಿದಾಬಾನುವನ್ನು ಮದ್ವೆ ಮಾಡಿ ಹೊರಕಳುಹಿಸುವ ಚಿಂತೆಯಲ್ಲಿ ಹೆತ್ತವರು ಮುಳುಗಿದ್ದರು.

ಅದೊಂದು ದಿನ ಮುಸ್ತಫಾ..ಫೆಮಿನಾಳ ಫೋಟೋದತ್ತ ಕಣ್ಣು ನೆಟ್ಟಿದ್ದ."ಮುಸ್ತಫಾ..." ತಂದೆಯ ಧ್ವನಿ ಕೇಳಿದೊಡನೆ ಅತ್ತ ಕಾಲೆಳೆದ. ಅಬೂಬಕ್ಕರ್‌ರವರು ಮಗನನ್ನು ನೋಡುತ್ತಲೇ "ಮುಸ್ತಫಾ ಶಹೀದಾ ಯೌವನಕ್ಕೆ ಕಾಲಿಟ್ಟಿದ್ದಾಳೆ.. ಆದಷ್ಟು ಬೇಗ ಮದ್ವೆ ಮಾಡೋದೊಳ್ಳೆಯದು.. ಆದರೆ ಈಗಿನ ಕಾಲದಲ್ಲಿ ವರದಕ್ಷಿಣೆಯಿಲ್ಲದೆ ಮಾತಿಲ್ಲ. ಅವರು ಕೇಳಿದಷ್ಟು ಕೊಡಲು ನನ್ನಲ್ಲಿ ತಾಕತ್ತಿಲ್ಲ! ಅದಕ್ಕೆ... ನೀನು ಈ ಬಾರಿ ಮದ್ವೆಯಾಗಬೇಕು. ಅಂದರೆ ನೀನು ವರದಕ್ಷಿಣೆಯಾಗಿ ಪಡೆದ ಹಣವನ್ನು ಶಾಹಿದಾಳನ್ನು ಕಟ್ಟಿಕೊಳ್ಳುವವರಿಗೆ ವರದಕ್ಷಿಣೆಯಾಗಿ ಕೊಡಬೇಕು. ಮಂಜನಾಡಿಯಲ್ಲಿ ಒಂದು ಹೆಣ್ಣುಂಟು.. ಹೇಗೆ ಮಾತಾಡಲಾ?" ಎನ್ನುತ್ತಾ ಯಾಚಿಸಿದರು.

ಮುಸ್ತಫಾ ಮನೆ ಹಿತ್ತಲಿನ ಸಣ್ಣ ಬಂಡೆ ಕಲ್ಲಲ್ಲಿ ಕೂತು ಯೋಚಿಸತೊಡಗಿದ. ಮದ್ವೆಯಾಗಲು ನನ್ನ ಮನಸ್ಸು ಕೇಳುತ್ತಿಲ್ಲವಲ್ಲ.. ಯಾಕೆ? ಫೆಮಿನಾಳಿಗೋಸ್ಕರ ಅಲ್ಲವೇ...?ಹ್ಞೂಂ.. ಹೌದು!ಆದರೆ.. ಅವಳು ತನ್ನ ದೇಹವನ್ನು ಇನ್ನೊಬ್ಬನಿಗೆ ಅರ್ಪಿಸಿರುವಳು.. ! ನಾನು ಬರಡಾಗಿರುವೆ.. ಅದು ಅವಳಿಗಾಗಿ..ಅವಳನ್ನು ನೆನೆದು..! ನನಗಿನ್ನು ಅವಳು ಸಿಗುತ್ತಾಳೆಯೇ..? ಇಲ್ಲ..ಖಂಡಿತಾ ಸಾಧ್ಯವಿಲ್ಲ...! ಇನ್ನು ಅದೆಷ್ಟು ದಿನ ಹೇಗೆ ಕೂರಲಿ..? ಈ ಮೌನ ಕ್ರಾಂತಿಯ ಜೀವನ ನೆಮ್ಮದಿ ತರುತ್ತದೆಯೇ? ಇಲ್ಲ! ಹಾಗಾದರೆ ನಾನು ಮದುವೆಯಾಗಿ 'ಸಂಸಾರಿ'ಯಾಗಬೇಕು. ಈ ಸನ್ಯಾಸಿ ಜೀವನದಿಂದ ಮುಕ್ತನಾಗಬೇಕು.. ಹ್ಞಾಂ.. ಫೆಮಿನಾ!! ಹೌದು..! ಆ ಹೆಸರಿನ ರೂಪ,ಗುಣ, ಈಕಾರ,ಎತ್ತರ ಎಲ್ಲರಲ್ಲೂ ನನ್ನನ್ನಗಲಿದ ಪ್ರಣಯಿನಿಯನ್ನು ಹೋಲುವಂಥ ಚಂದದ ಹುಡುಗಿಯನ್ನು ಬರಿದಾದ ನನ್ನೀ ಹೃದಯದಲ್ಲಿ ತಂದಿರಿಸಿ ಆರಾಧಿಸಬೇಕು..ಮಂಜವಾಡಿಯ ಆ ಹೆಣ್ಣಿನ ಹೆಸರು 'ಸಫಿಯಾ' ಅಂತೆ.ಇಲ್ಲ... ! ಆ ಹೆಸರಿನವಳಾಗಲಿಕ್ಕಿಲ್ಲ.ಫೆಮಿನಾ.. ! ಅದೇ ..ಆ ಹೆಸರೇ ಹೇಳಲು, ಕೇಳಲು, ಓದಲು,ಬರೆಯಲು,ಎಲ್ಲಕ್ಕೂ ಚಂದ..ಚಂದ..ಚಂದ!

ಮುಸ್ತಫಾ.. ಸತತ ಒಂದು ತಿಂಗಳಲ್ಲಿ ಹಲವು ಮನೆಯ ಹೊಸ್ತಿಲು ತುಳಿದು ಬಂದ. ಏಳೆಂಟು ಕನ್ಯಾಮಣಿಗಳ ಮುಖ ದರ್ಶಿಸಿದ !ಇಲ್ಲ.. ಎಲ್ಲೂ.. ಸಿಗಲಿಲ್ಲ..? ತನ್ನ ಬಾಳಸಂಗಾತಿಯನ್ನು ಆರಿಸಲು, ಶಾಲಾ ಕಾಲೇಜು ವಠಾರ, ಮಹಿಳಾ ಹಾಸ್ಟೆಲ್, ಸಭೆ ಸಮಾರಂಭ, ವಿಚಾರ ಸಂಕಿರಣ, ಶಿಬಿರ... ಮುಂತಾದೆಡೆ ತಡಕಾಡಿದ...ಕೊನೆಗೆ ಸೋತು ತನ್ನ ಪ್ರಾಣ ಸ್ನೇಹಿತನಲ್ಲಿ ವಿಷಯ ತಿಳಿಸಿದ.. ಅಲ್ತಾಫ್ ಹುಸಿನಗೆ ನಕ್ಕು"ನಿನಗೆ ಹುಚ್ಚಾ?" ಎಂದು ಕೇಳಿದ.."ಇಲ್ಲ..ಅಲ್ತಾಫ್..ನನ್ನ ನೋವನ್ನು ಅರ್ಥೈಸು.. ನನ್ನ ಮಾತನ್ನು ಸೀರಿಯಸ್ ಆಗಿ ತೆಗೆದುಕೋ.." ಎಂದು ಮುಸ್ತಫಾ ಕೈ ಮುಗಿದು ಬೇಡಿದ.

ನಾಲ್ಕು ದಿನಗಳು ಉರುಳಿತು.. "ಮುಸ್ತಫಾ.. ಹೆಣ್ಣಿಗಾಗಿ ಹುಚ್ಚಾಸ್ಪತ್ರೆ ಸೇರಬೇಡ. ನೋಡು, ಉಳ್ಳಾಲದಲ್ಲಿ ನೀನು ಬಯಸಿದವುಗಳನ್ನೆಲ್ಲಾ ಮೀರಿಸಲು ಒಂದು ಹೆಣ್ಣಿದೆ.. ಹೆಸರು..ಫೆಮಿನಾ!!! ನಾಳೆ ನನ್ನ ಜೊತೆ ಬಾ.." ಅಲ್ತಾಫ್ ನುಡಿದ. ಮುಸ್ತಫಾ ನಿಟ್ಟುಸಿರು ಬಿಟ್ಟ. ಓಹ್.. ಈ ಸಂಬಂಧ ಕೂಡಿ ಬರಲಿ ಎಂದು ತನ್ನಲ್ಲೆ ನುಡಿದ ಮುಸ್ತಫಾ ಮರುದಿವಸ ಉಳ್ಳಾಲದಲ್ಲಿರುವ ತನ್ನ ಹಕ್ಕಿಯ ಗೂಡಿಗೆ ಕಾಲಿಟ್ಟ.ಹತ್ತೊಂಬತ್ತರ ಹರೆಯದ ರೂಪವತಿ ಫೆಮಿನಾ ಮೊದಲ ನೋಟಕ್ಕೆ ಮುಸ್ತಫಾನ ಮನ ಸೆಳೆದಳು.

"ಫೆಮಿನಾ.. ನನ್ನ ಬಾಳ ಸಂಗಾತಿಯಾಗುವೆಯಾ?"

"ಹ್ಞೂಂ.. ಆ ಮೊದಲು ನನ್ನ ತಂದೆಗೆ ಸಾಲ ಮಾಡಲು ಸಮಯಾವಕಾಶ ಕೊಡಿ.."

Share this Story:

Follow Webdunia kannada