Select Your Language

Notifications

webdunia
webdunia
webdunia
webdunia

ಕಳೆದದ್ದು ಗಳಿಸಿದ್ದು

ಕಳೆದದ್ದು ಗಳಿಸಿದ್ದು

ನಾಗೇಂದ್ರ ತ್ರಾಸಿ

, ಸೋಮವಾರ, 5 ಮೇ 2008 (19:17 IST)
PTI
ಏನೂ ಇಲ್ಲ ಎಂದು ಆಗಾಗ ಅನಿಸುತ್ತದೆ. ಯಾಕೆ ಹೀಗೆ ಜೀವನ ಅಂದರೆ ಗಳಿಸಲೇ ಬೇಕಾ... ಕಳೆಯಲೇ ಬೇಕಾ? ಹೌದೆಂದವಳು ಮಾಯಿ. ತುಲಾ ಕಳತ ನಾಹಿ ಕಾರೇ... ಬಾಳಾ ಪೈ ಮಹಾರಾಜಾನಿ ಸಾಂಗಿತಲೇ, ತ್ಹುಜಿ ಜೀವನಾಚ್ ಶಿಲ್ಪಕಾರ್ ತುಚ್ ಆಹೆಸ್. (ನಿಂಗೊತ್ತಾಗೊದಿಲ್ಲೇನು ಮಗಾ... ಪೈ ಮಹಾರಾಜ ಹೇಳಿದ್ದು - ನೀನೇ ನಿನ್ ಜೀವನದ ಶಿಲ್ಪಕಾರ) ಇದರ ಮ್ಯಾಲ ಎಲ್ಲ ನಡಿಯೋದು. ಒಂದ ಕಡಿ ಕಳಿಯೂದು, ಇನ್ನೊಂದ್ ಕಡಿ ಗಳಸೋದು. ಅದೇನೊ ಬ್ಯಾಂಕಿನಾಗ ಐತಿಲ್ಲ ಜಮಾ ಖರ್ಚು ಪದ್ದತ್. ಹಾಂಗನೋ ಜೀವನಾ ನೀ ಏನಾರ ಗಳಸಾಕ ಹೋಗಿದ್ದರ ಏನಾರ ಕಳ್ಕೊಂಡಿರ್ತಿ.

ಎಲ್ಲಾ ಸರಿಯಾಗೈತಿ ಅಂದಕೊಂಡು ಇದ್ದಂವನ ಜೀವನಕ ಅವಳ ಹೆಸರಿನ ರೂಪದಾಗ ಮತ್ತ ಜಮಾ ಅನ್ನೋದು ಆಗಿತ್ತಲ್ಲ. ಹಾಂಗಿದ್ದರ ಯಾವ ಖಾತೆಕ ಖರ್ಚು ಬಿತ್ತು. ತಲಿ ಕೆಡಿಸಿಕೊಳ್ಳುದು ಬ್ಯಾಡ ಬ್ಯಾಡ್ ಅಂದರೂ ವಿಶಿ ಬಂದಿದ್ದಳು. ಬರೋದು ಹ್ಯಾಂಗ್ ಬಂದಿದ್ದಳು. ಒಂದಿನಾ ಬ್ಯಾಂಕಿನಾಗ ಕ್ಯಾಷಿಯರ್ ಡ್ಯೂಟಿ ಮ್ಯಾಲೆ ಇದ್ದ. ಪರಮೇಶಿ ಗೋವಾಕ ಸಿಐಬಿ ಎಕ್ಸಾಮ್ ಬರೀಬೇಕು ಅಂದ ಹೇಳಿ ಹೋದ್ಹಾಂವ ಎರಡ ದಿನ ರಜಾನೂ ಹಾಕಿದ್ದ. ಹಿಂಗಾಗಿ ಕ್ಲಿಯರಿಂಗೂ ಮತ್ ಡೇ ಬುಕ್ ನನ್ನ ಮ್ಯಾಗ ಬಿದ್ದಿತ್ತು. ಆಗಿನ್ನೂ ಕಂಪ್ಯೂಟರು ಬ್ಯಾಂಕಿಗೆ ಹೊಸಾದು ಅನ್ನೋದಕ್ಕಿಂತ ನಾನ ಕಂಪ್ಯೂಟರಿಗೆ ಹೊಸಾ ಮನಷ್ಯಾ ಅಂದ್ರೂ ಬರೋಬ್ಬರಿ ಆದಿತು. ಲಗೂನ ಮನಿಗೆ ಹೋಗಬೇ,ಕು ಸಾಯಿಮಂದಿರದ ಮುಂದ ಕುಂತರ ಆಹಾ ಏನ ಹುಡಿಗ್ಯಾರ ಬರ್ತಾರೋ... ಇದರವ್ವನ ಡೆ ಬುಕ್ ಟ್ಯಾಲಿ ಆಗೂದಿಲ್ಲ. ನಾ ಹೋಗುದಿಲ್ಲ... ಅಂತಾ ಪರಿಸ್ಥಿತಿ.

ಅಂದ ಲಗೂನ ಹೋಗೂನ ಅಂತ ಹೇಳಿ, ಲೇ ಕಾಂಬಳೆ ಸ್ವಲ್ಪ ಎಸ್‌ಬಿ, ಕರೆಂಟ್, ಸಿಸಿ ಸಪ್ಲಿಮೆಂಟರಿ ಲಗೂನ ಕೊಡೋ... ಇಂದ ಲಗೂನ ಹೋಗಬೇಕು. ಪರಮೇಶಿ ಡೆ ಬುಕ್ ನನ್ನ ಮ್ಯಾಗ ಐತಿ. ಅಂದಿದ್ದೆ.

"ಏ ನಂದೇನೊ... ಇರೋ ಗಮ್ಮತ್ ಎಲ್ಲಾ ಕಾಮತ್‌ನ‌ ಕಡಿ ಐತಿ. ಅಂವ ಇನ್ನ ವೋಚರ್ ಚೆಕ್ ಮಾಡಿಲ್ಲ. ಮತ್ ನಾ ಹ್ಯಾಂಗ್ ಸಪ್ಲಿಮಂಟರಿ ಕೊಡಲೋ. ಬೇಕಾರ ಫಿಗರ್ ತಗೋ ಅಂದಿದ್ದ. ಕಾಮತ್ ಅನ್ನೂ ಮನಷ್ಯಾನ ಬಗ್ಗಿ ಒಂದೆರಡ ಮಾತ್ ಹೇಳಬೇಕು ಅನ್ನಿಸ್ತದ ಇಲ್ಲಿ. ಸತತವಾಗಿ ಎರಡು ವರ್ಷ ಒಂದೇ ಒಂದು ಸಿಎಲ್, ಪಿಎಲ್ ತಗೊಳ್ಳದ ಒಂದ.. ಸಮ ಕತ್ತಿ ದ್ಹುಡದ್ಹಾಂಗ ದುಡಿದ ಏಕೈಕ ಕ್ಲಾರ್ಕ್. ಇವನ ಸಮಂಧ್ ಮ್ಯಾನೇಜರ್ ತೂಗಡಿಸ್ಕೋತ ಕೂಂಡ್ರಬೇಕು. ಯಾಕ ಗೊತ್ತೇನು? ಕಾಮತ್ ಕೆಲಸಾ ಮುಗಿವಲ್ತು. ಬ್ಯಾಂಕಿನ ಬಾಗಿಲಕ್ ಲಾಕ್ ಬೀಳವಲ್ತು.

ಇಂತಾ ಮನಸ್ಯಾ ಎಸ್‌ಬಿ ವೋಚರ್ ಚೆಕ್ಕಿಂಗ್ ಮಾಡ್ತಾನ ಅಂದ್ರ ಸತ್ತೀನಪ್ಪೊ ಅಂತ ಬಾಯಿಗೆ ಖಾರ ಹಾಕ್ಕೊಂಡು ಬಡ್ಕೊಂಡ್ರು... ಸಪ್ಲಿಮೆಂಟರಿ ಫಿಗರ್ ಸಿಗೂದಿಲ್ಲ. ತ್ಹುಲಾ ಕಾಯ್ ಕಳತ್ ಎಕ್ ವೋಚರ್ ಮಿಸ್ ಝಾಲಕಿ ನೋಕರಿ ಗೇಲ... ಅನ್ನತ್ತಿದ್ದ. ಅದಾ ವರ್ಷ ಬಿಎಸ್ಆರ್‌ಬಿ ಎಕ್ಸಾಮ್ ಬರದ ಇನ್ನೂ ಪ್ರೊಬಷನರಿ ಮುಗಿದಾಂವನ ಮುಂದ ಹಿಂಗ ಅಂದ ಬಿಟ್ಟರ ಏನಾಗಬೇಕು... 12 ಸಾವಿರ ರೂಪಾಯಿ ಪಗಾರ.... ಬ್ಯಾಡ್ ಶಿವನ... ರಾತ್ರಿ ಹತ್ತ ಹೋಡಿಲಿ ಆರಾಮಶಿರಿ ಚೆಕ್ ಮಾಡು... ಅಂದ್ಕೊಂಡು ಇದ್ದದ ಕೆಲಸ ಮುಗಿಸೋದು ನನ್ನ ಹಣಿಬರಾ ಅಂದ ನನ್ನ ಪಾಲಿಗೆ ಬಂದಿತ್ತು.

ಕ್ಲಿಯರಿಂಗ್‌ಕ ಹೋಗುದು ಅಂದ್ರ ಭಾಳ ಮಜಾ.. ಯಾಕ ಗೊತ್ತೇನು... ದಿನಾ ನೂರು ರೂ ಅಲಾವನ್ಸ್. ಮತ್ತ ಅದ ವರ್ಷ ನನ್ನ ಜೋಡಿ ಬಿಎಸ್ಅರ್‌ಬಿ ಪಾಸ್ ಆಗಿ ಎಸ್‌ಬಿಐದಾಗ ಇದ್ದಳಲ್ಲ ವಿಶಿ. ಸರ್ವಿಸ್ ಬ್ರ್ಯಾಂಚ್‌ನ್ಹಾಗ ಇದ್ದಳು. ಕ್ಲಿಯರಿಂಗ್‌ನ್ಯಾಗ ಎಸ್‌ಬಿಐ ನಿಮ್ಮ ಫಿಗರ್ ಏನ್ರಿ ಅಂದರ ನಾಚಿಕೊತಿದ್ದಳು. ಆಕಿಗ ಏನಾ ಅರ್ಥಾ ಆಕ್ತಿತ್ತು ಏನೋ ಗೊತ್ತಿಲ್ಲ. ಹಂಗ ಆರ ತಿಂಗಳ ದಿನಾ ಕ್ಲಿಯರಿಂಗ್ ಹೋಗಿ ಬರೋದರ ನಡುವೆ ದೋಸ್ತಿ ಏನೂ ಅತು. ಹಂಗ ಸ್ವಲ್ಪ ದಿನದಾಗ ಅಂದ್ರ ಬಾ ಹೋಗು ಅಲ್ಲಿತನಕಾ ಬಂತು..

ಇದ ನನ್ನ ಜೀವನದಾಗ ಅವಳು ಜಮಾ ಆಗಾಕ ಕಾರಣ ಆತು. ನಾನು ಭಾಳ ಖುಷಿನೂ ಆಗಿತ್ತು. ಕಮ್ಮಿತ್ ಕಮ್ಮಿ ಇಲ್ಲ ಅಂದ್ರೂ ಇಬ್ಬರದೂ ಕೂಡಿದರ 25 ಸಾವಿರ ರೂಪಾಯಿ ಪಗಾರ.. ಏನ್ ಮಜಾ... ಆರಾಮಾಗಿ ಇರಬೋದು ಅಂದ್ಕೊಂಡಿದ್ದೆ. ಮತ್ ಖರೇ ಹೇಳಬೇಕು ಅಂದ್ರ ಹಂಗ ಜೀವನಾನೂ ನಡೀತ ಬಿಡು. ಒಂದ್ವರ್ಸಾಗ ಏಕದಮ್ ಪಸ್ಟಕ್ಲಾಸ್ ಏರಿಯಾದಾಗ ಮನಿನೂ ತಗೊಂಡ್ವಿ. ಡಕೋಟಾ ಎಕ್ಸಪ್ರೆಸ್ ಸೈಕಲ್ ಬಿಟ್ಟ ಬೈಕ್ ಬಂತು. ಅಲ್ಲಿಗೆ ನಿಲ್ಲಲಿಲ್ಲ ದೇವರ.. ಇಪ್ಪತ್ತಾರನೇ ವಯಸ್ಸಿನಾಗ ನೋಕರಿ ಇಪ್ಪತ್ತೇಳಕ್ ಮದುವಿ. ಮಜಾನ ಮಜಾ...

ಅಲ್ಲೊ ಮಾರಾಯ, ಇನ್ನ ವಯಸ್ಸಿಗೆ ಇರುವಾಗ ಮದುವಿ ಮಾಡ್ಕೊಂಡ್ ಬಿಟ್ಯಲ್ಲ... ಬ್ಯಾರೇ ಜಗತ್ತು ನೋಡಾದು ನಿನಗ ಬ್ಯಾಡ ಏನೂ ? ಅನ್ತಿದ್ದ ಪರಮೇಶಿ. ಅಮ್ಯಾಲ ಆಮ್ಯಾಲ ಒಂಥರಾ ಅನ್ಸಾಕ ಸುರು ಮಾಡ್ತು. ಛೆ... ಇವನ್ನವ್ವನ.. ಹ್ಯಾಂಗಿದ್ರೂ ಮ್ಯಾಲಿಂದ್ ಮ್ಯಾಲ ಗೋವಾಕ್ ಹೋಗಿ ಬರೋದು ಇರ್ತಿತ್ತು. ಸ್ವಲ್ಪ ಕುಡದು.. ಬಾಯನಾ ಬೀಚ್‌ನಾಗ. ಎಲ್ಲಾ ಫಾರಿನ್ನೋ ಮರಿ ಅನ್ತಿದ್ದ. ಇಯರ್ ಎಂಡಿಂಗ್ ಮುಗ್ಸಕೊಂಡು ನಾಳಿ ಹೋಗೂನ, ರಾತ್ರಿ ಹತ್ತಕ್ಕ ಇಲ್ಲಿಂದ ಹೊಂಟರೂ ಮೂರು ತಾಸಿನ ಹಾದಿ. ಎರಡ್ ದಿನ ಇದ್ದ ಬರೂನು ಬಾ ಅಂದು ನನ್ನೂ ಕರ್ಕೊಂಡು ಹೋಗಿದ್ದ. ಯಾಕೋ ಗೋವಾ ಹಾದಿ ನನಗೂ ಭಾಳ ಮಜಾ ತರಾಕ ಹತ್ತಿತು. ವಿಶಿ ಅಂತೂ ನನ್ನ ಕಡಿ ರೊಕ್ಕಾ ಕೇಳ್ತಿರಲಿಲ್ಲ. ಅವಳದ ಪಗಾರ ಸಾಕಷ್ಟ ಇತ್ತು, ಅಲ್ಲದ ಮಕ್ಕಳಾ ಮರಿ ವಿಚಾರ ಇರಲಿಲ್ಲ ಅಂದ ಮ್ಯಾಲ ಇದ್ದ ಇಬ್ಬರು ಗಂಡ ಹೆಂಡಿರು, ಒಬ್ಬಾಕಿ ಅವ್ವ ಎಷ್ಟ ಖರ್ಚ ಆದೀತು.. ದಿನ ಖರ್ಚ್ ಅಂತೂ ಹಾಂಗೂ ಹಿಂಗೂ ಅಲಾವನ್ಸ್‌ದಾಗ ದಾಟತಿತ್ತು.

ನನಗೂ ಗೋವಾ ರುಚಿ ಭಾಳನ ತಂಗೋಡ್ತು. "ಹತ್ಕೊಂಡ್ ಬೆಂಕಿ, ಹಚ್ಕೊಂಡ ಹಾ.. ಎಂದೂ ಮುಚ್ಚಾಕ್ ಸಾಧ್ಯ ಇಲ್ಲ". ಇಂದಲ್ಲ ನಾಳಿ ಹೋಗಿ ಹೊರಗ ಬರಬೇಕ.. ನಂದೂ ಹಾಂಗ ಆತು. ಅಲ್ಲಿಗೆ ನಿಂತಿದ್ದರ ಭಾಳ ಛಲೊ ಇತ್ತು. ನನ್ನ ದೋಸ್ತ ಒಬ್ಬ ಇದ್ದ- ನಾರಾಯಣ ಅಂತ. ಭಾಳ ಗರೀಬ್ ಮನಸ್ಯಾ. ಅವನ ಆಯಿ ಒಂದ್ ಖಾರಾ ಕುಟ್ಟೋ ಗಿರನ್ಯಾಗ ಕೆಲಸ ಮಾಡ್ತಿದ್ದಳು. ಆದ್ರೂ ಸಂಸಾರದ ಗಾಡಿ ಮುಂದಕ ಹೋಗ್ತ ಇರಲಿಲ್ಲ. ನಾಲ್ಕ ಹೆಣ್ಣು ಮೂರು ಗಂಡುಗಳಿಗೆ ನಾಲ್ಕ ಕೈ ಉಣ್ಣಾಕ್ ಹೆಂಗ ಹಾಕ್ಯಾವ ವಿಚಾರ ಮಾಡ್ರಿ.. ಖರೇ ಹೇಳಬೇಕು ಅಂದ್ರ ಅವನ ತಂಗ್ಯಾರ ಸಾಲಿಗೆ ದುಡ್ಡು ಕೊಡ್ಹತಿದ್ದೆ... ಮ್ಯಾಲಿಂದ್ ಮ್ಯಾಲ ಮನೀಗೂ ಹೋಗ್ತಿದ್ದೆ. ಹುಡಿಗ್ಯಾರೂ ಇನ್ನು ಸಣ್ಣಾವರ ಇದ್ದುದರಿಂದ ದಾದಾ ಅಂತ ಕರೀತಿದ್ದರೂ ನಾನು ಹಂಗ ಬರ್ತಾವ್ ಮಾಡ್ತಿದ್ದೆ.

ಖರೇ ಹೇಳಬೇಕು ಅಂದ್ರ ನಾಲ್ಕ ವರ್ಷದಾಗ ಲೆಕ್ಕ ತಪ್ಪಿತು. ಒಂದ್ಹ ಹುಡುಗಿ ಇನ್ನೂ ಲಂಗ ಹಾಕ್ಕೊಂಡು ಅಡ್ಡಾಡು ವಯಸ್ಸಿನವಳ ಮ್ಯಾಲ ನನ್ನ ಗೂಗಿ ಕಣ್ಣ ಬಿತ್ತು. ಅಲ್ಲಿಗ ಅವಳ ನನ್ನ ಜೀವನದಾಗ ಜಮಾ ಮಾಡ್ಕೊಂಡಿದ್ದೆ. ಅದ ಖಬರಗೇಡಿ ವ್ಯಾಳ್ಯಾದಾಗ ವಿಶಿನೂ ಕಳ್ಕೊಳ್ಳಾಕ ಹತ್ತಿದ್ದೆ.

ನೀವ್ ಹೇಳ್ರಿ, ಯಾವುದರ ಹೆಂಗ್ಸ್ ತನ್ನ ಗಂಡನ್ನ ಬ್ಯಾರೇದಾಕಿ ಜೋಡಿ ನೋಡಿದರ ತಡಕೊಳ್ಳತಾಳೇನು? ಹಂಗ ವಿಶಿನೂ ತಡಿಲಿಲ್ಲ. ಮೊದಲಾ ಕಲಿತ್ಯಾಕಿ, ಕೈ ತುಂಬ ಪಗಾರ ಬರ್ತದ... ಅಂದ ಮ್ಯಾಲ ನೀ ಏನೊ ಹೋಗ್ಹ ಹೋಗ್ ಅಂದಳು. ಬರೀ ಒಂದ್ ಒಂದು ಘಟನಾ ಮಾಡಿದ ಆ ತಪ್ಪಿಗೆ ಇಂದು ಶಿಕ್ಷಾ ಅನುಭವಿಸಾಕ ಹತ್ತೇನಿ. ಇಂದ ವಿಶಿ ಅನ್ನೊ ನನ್ನ ಹೆಂಡತಿ ನನ್ನ ಜೀವನದಾಗ ಇಲ್ಲ... ಆದರ ಅವಳ ಬಂದು ಹೋಗಿದ್ದಳು ಅನ್ನೋದು ಒಂದ್ ಖೂನ್ ಉಳಿದೈತಿ. ಅದ ಖೂನ್ ನೋಡ್ಕೊತಾ ಇನ್ನೂ ಇದಿನಿ. ಯಾಕಂದ್ರ ಕಳದದ್ದನ್ನ ಮತ್ತ ಕೂಡಸಬೇಕಾದರ ಭಾಳ ಮುಷ್ಕಿಲ್ ಐತಿ..

Share this Story:

Follow Webdunia kannada