Select Your Language

Notifications

webdunia
webdunia
webdunia
webdunia

ಹ್ಯಾಪಿ ಬರ್ತ್‌ಡೇ ಗಣೇಶ್!

ಹ್ಯಾಪಿ ಬರ್ತ್‌ಡೇ ಗಣೇಶ್!
ರವಿಪ್ರಕಾಶ್ ರೈ (ನ್ಯೂಸ್ ರೂಮ್)
NRB
ಚಿತ್ರರಂಗವೆಂದರೆ ಅಲ್ಲಿ ರಾಜಕೀಯ, ಕಾಲೆಳೆಯುವವರ ಸಂಖ್ಯೆ ಬೇಕಾದಷ್ಟಿರುತ್ತದೆ. ಗಾಡ್ಫಾದರ್ ಇಲ್ಲದೇ ಈ ರಂಗದಲ್ಲಿ ಮಿಂಚುವುದೆಂದರೆ ನಿಜಕ್ಕೂ ಅದೊಂದು ಅದ್ಭುತ ಸಾಧನೆ. ಆ ಸಾಧನೆಯನ್ನು ನಮ್ಮ 'ಮಳೆ' ಹುಡುಗ ಗಣೇಶ್ ಮಾಡಿದ್ದಾರೆ. ಈ ಹುಡುಗ ಇಂದು (ಜು.2) ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮುಂಗಾರು ಮಳೆ ಚಿತ್ರ ಬಿಡುಡೆಯಾದ ನಂತರ ಗಣೇಶ್ ಆಚರಿಸಿಕೊಳ್ಳುತ್ತಿರುವ ಎರಡನೇ ಹುಟ್ಟುಹಬ್ಬ ಇದು. ಎರಡು ವರ್ಷದಲ್ಲಿ ಅವರು ನಡೆದು ಬಂದ ಹಾದಿಯನ್ನು ವಿಶ್ಲೇಷಿಸಿದರೆ ನಿಜಕ್ಕೂ ನೆಮ್ಮದಿಯ ನಿಟ್ಟುಸಿರು ಹೊರಚೆಲ್ಲಬಹುದು.

ನೆಲಮಂಗಲದ ಅಡಕಮಾರನಹಳ್ಳಿ ಎಂಬ ಒಂದು ಸಣ್ಣ ಹಳ್ಳಿಯಿಂದ ಕೈಯಲ್ಲಿ ಒಂದಿಷ್ಟು ಪುಡಿಗಾಸು ಇಟ್ಟುಕೊಂಡು ಉದ್ಯಾನನಗರಿಗೆ ಬಂದು ಸೈಕಲ್ ಹೊಡೆದ ಈ ಹುಡುಗ ಈಗ ಕೋಟಿ ವೀರ. ಗಣೇಶ್ ಏಕಾಏಕಿ ಏನೋ ಗಿಮಿಕ್ ಮಾಡಿ ಚಿತ್ರರಂಗದಲ್ಲಿ ಬೆಳೆದಿಲ್ಲ. ಅದಕ್ಕಾಗಿ ಸಾಕಷ್ಟು ಅವಮಾನಗಳನ್ನು ನಗುತ್ತಲೇ ನುಂಗಿದ್ದಾರೆ. ಅನೇಕರ ಟೀಕೆಗಳನ್ನು ಸಹಿಸಿದ್ದಾರೆ.

ತನಗೊಂದು ಪಾತ್ರ ಕೊಡಿ ಎಂದು ಕೇಳಿದಾಗ, 'ನೀ ನಾಲಾಯಕ್ಕು' ಎಂದ ಮಂದಿ ಇಂದು ಆ ಹುಡುಗನ ಸುತ್ತ ಮುಗೀಬೀಳುತ್ತಿದ್ದಾರೆ. ಗಣೇಶ್ ಪ್ರತಿ ಸಾಧನೆಯ ಹಾದಿಯಲ್ಲಿ ಶ್ರಮವಿದೆ, ಶ್ರದ್ದೆಯಿದೆ. ತಾನು ಬೆಳೆಯಬೇಕು. ಚಿತ್ರರಂಗ ನನ್ನನ್ನು ಗುರುತಿಸಬೇಕು ಎಂದು ಪಣತೊಟ್ಟು ಮಾಡಿದ ಕೆಲಸಗಳ ಪ್ರತಿಫಲ ಇಂದು ಇವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ.
webdunia
NRB


ಈ ಹುಡುಗನ ಸಾಧನೆಗೆ ಸಾಥ್ ನೀಡಿದ್ದು, ಉದಯ ಟಿವಿಯ 'ಕಾಮಿಡಿ ಟೈಮ್' ಕಾರ್ಯಕ್ರಮ. ಗಣೇಶ್ ಅದನ್ನೇ ತಮ್ಮ ಸಾಧನೆಯ ಮೆಟ್ಟಿಲನ್ನಾಗಿಸಿದರು. ಪರಿಣಾಮ ಸಂಜೆ 5 ಗಂಟೆಯಾಗುತ್ತಿದ್ದಂತೆ ಕರ್ನಾಟಕದ ಜನತೆ ಉದಯ ಟಿ.ವಿಯ ಈ ಕಾರ್ಯಕ್ರಮಕ್ಕಾಗಿ ಎದುರು ನೋಡಲಾರಂಭಿಸಿದರು. ಅಂದು ಗಣೇಶ್ ಹೊಟ್ಟೆಪಾಡು ಹಾಗೂ ತನ್ನ ಅಭಿನಯದ ಹುಚ್ಚಿಗಾಗಿ ಸಾಧನೆ, ಅಂಕುರ, ಪಂಚಾಮೃತ, ಪ್ರೇಮ ಕಥೆಗಳು, ಸಮಾಗಮ, ಭಾಗ್ಯ, ಯದ್ವಾತದ್ವಾ, ಪಾ.ಪ.ಪಾಂಡು ಧಾರವಾಹಿಗಳಲ್ಲೂ ನಟಿಸಿ ತಕ್ಕ ಮಟ್ಟಿನ ಜನಪ್ರಿಯತೆ ಗಳಿಸಿದರು.

ಇವರು ನಟಿಸಿದ 'ಠಪೋರಿ' ಚಿತ್ರ ಸೋತ ನಂತರ ಹಿರಿತೆರೆಯ ಭಾಗ್ಯ ತನಗಿಲ್ಲ ಎಂದು ಮತ್ತೆ ಧಾರಾವಾಹಿ ಕಡೆಗೆ ಮುಖ ಮಾಡಿದರು. ಆದರೆ ಮತ್ತೆ ಇವರಿಗೆ 'ಕೌನ್ ಬನೇಗಾ ಕರೋಡ್ ಪತಿ' ಚಿತ್ರದ ನಾಲ್ಕು ಮಂದಿ ನಾಯಕರಲ್ಲಿ ಒಬ್ಬ ನಾಯಕನಾಗಿ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶಗಳನ್ನು ಚೆನ್ನಾಗಿಯೇ ಬಳಸಿಕೊಂಡರು. ನಂತರ ಅವರಿಗೆ ಗೇಮ್ಸ್, ಡ್ರಿಮ್ಸ್ ಮುಂತಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳು ಸಿಕ್ಕವು. ಪಾಲಿಗೆ ಬಂದ್ದದೇ ಪಂಚಾಮೃತ ಎಂದು ನಟಿಸಿ ಮೌನಿಯಾಗಿರುತ್ತಿದ್ದರು.

ಆದರೆ ಯಾವತ್ತು 'ಚೆಲ್ಲಾಟ' ಚಿತ್ರದಲ್ಲಿ ಗಣೇಶ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿ ಆ ಚಿತ್ರ ಶತದಿನ ಆಚರಿಸಿತ್ತೋ, ಆಗ ಗಾಂಧಿನಗರ ಗಣೇಶ್ ಪ್ರತಿಭೆಯನ್ನು ಗುರುತಿಸಿತ್ತು. ಫಲವಾಗಿ ಗಣೇಶ್ ಅವರ ಊರಿನವರೇ ಆದ ಎ.ಕೃಷ್ಣಪ್ಪ ತಮ್ಮ ಮುಂಗಾರು ಮಳೆ ಚಿತ್ರದಲ್ಲಿ ಅವಕಾಶ ನೀಡಿದರು. ಆ ಚಿತ್ರ ಏನಾಯಿತೆಂಬುದರ ಬಗ್ಗೆ ಇಲ್ಲಿ ಹೇಳಬೇಕಾಗಿಲ್ಲ. ನಿಜಕ್ಕೂ ಅದು ಗಣೇಶ್ ಲೈಫ್‌ನ ಟರ್ನಿಂಗ್ ಪಾಯಿಂಟ್. ನಂತರ ಗಣೇಶ್ ನಟಿಸಿದ ಹುಡುಗಾಟ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟಗಳೆಲ್ಲವೂ ಶತದಿನವನ್ನು ಆಚರಿಸಿದ್ದು, ಈಗ ಅರಮನೆ ಚಿತ್ರವೂ ಶತದಿನಗಳತ್ತ ದಾಪುಗಾಲು ಹಾಕುತ್ತಿದೆ. ಒಬ್ಬ ನಟ ಒಂದೂವರೆ ವರ್ಷದಲ್ಲಿ ನಟಿಸಿದ ಚಿತ್ರಗಳೆಲ್ಲ ಶತದಿನ ಆಚರಿಸುವುದೆಂದರೆ ಅದು ಸಾಮಾನ್ಯದ ಮಾತಲ್ಲ.
webdunia
NRB

ಇಂದು ಚಿತ್ರರಂಗ ಗಣೇಶ್‌ಗೆ ಗೋಲ್ಡನ್ಸ್ಟಾರ್ ಎಂಬ ಪಟ್ಟ ನೀಡಿದೆ. ಆದರೆ ಹಿಂದೊಮ್ಮೆ ಮೇಕಪ್ ಮಾಡಿ ಶೂಟಿಂಗ್‌ಗೆ ರೆಡಿಯಾಗಿದ್ದ ಗಣೇಶ್‌ನನ್ನು ಸೆಟ್‌ನಿಂದ ಹಿಂದೆ ಕಳುಹಿಸಿದ್ದು, ಇದೇ ಗಾಂಧಿನಗರ.

ಈ ಮಟ್ಟಕ್ಕೆ ಬೆಳೆದರೂ ಗಣೇಶ್‌ಗೆ ಯಾವುದೇ ಅಹಂ ಬಂದಿಲ್ಲ. ಇಂದಿಗೂ ಮಗುವಿನಂತಹ ಮುಗ್ಧ ಮನಸ್ಸು. ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಸ್ನೇಹದಿಂದ ವರ್ತಿಸುವ ಅವರ ಗುಣ ನಿಜಕ್ಕೂ ಮೆಚ್ಚುವಂತಹುದು.

ಸದ್ಯ ಈ ಬೊಂಬಾಟ್ ಹುಡುಗನ 'ಬೊಂಬಾಟ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಟಸಂಗಮಟ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇವರ ಮತ್ತೊಂದು ಚಿತ್ರ 'ಸರ್ಕಸ್' ಆರಂಭವಾಗಲಿದೆ.

ಏನೇ ಆಗಲಿ ಈ ಹುಡುಗ ಚಿತ್ರರಂಗದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುವುದರ ಜೊತೆಗೆ, ಹ್ಯಾಪಿ ಬರ್ತ್‌ಡೇ ಹೇಳೋಣ.

Share this Story:

Follow Webdunia kannada