Webdunia - Bharat's app for daily news and videos

Install App

ಸಂಗೊಳ್ಳಿ ರಾಯಣ್ಣ ವಿಮರ್ಶೆ: ಐತಿಹಾಸಿಕ ಮಾಸ್ಟರ್ ಪೀಸ್!

Webdunia
PR
ಚಿತ್ರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ತಾರಾಗಣ: ದರ್ಶನ್, ಜಯಪ್ರದಾ, ಉಮಾಶ್ರೀ, ಶಶಿಕುಮಾರ್, ನಿಖಿತಾ, ಶ್ರೀನಿವಾಸ ಮೂರ್ತಿ
ನಿರ್ದೇಶನ: ನಾಗಣ್ಣ
ಸಂಗೀತ: ಯಶೋವರ್ಧನ್

' ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ನೋಡಿದ ನಂತರದ ಮೊದಲ ಪ್ರತಿಕ್ರಿಯೆ, ಚಿತ್ರ ನಿರೀಕ್ಷೆಯನ್ನು ಹುಸಿ ಮಾಡಿಲ್ಲ ಅನ್ನೋದು. ಕೆಲವೊಂದು ಹುಳುಕುಗಳಿವೆ, ಕೆಲವೆಡೆ ಪ್ರಮಾದಗಳಾಗಿವೆ -- ಅವುಗಳನ್ನು ಬದಿಗಿಟ್ಟು ನಮ್ಮ ಮಿತಿಯಲ್ಲಿ ನೋಡುವುದಾದರೆ, ನಿಜಕ್ಕೂ ಇದೊಂದು ಅದ್ಭುತವಾದ ಪ್ರಯತ್ನ.

ಚಿತ್ರದ ಕಥೆ ಎಲ್ಲರಿಗೂ ಗೊತ್ತಿರುವಂತದ್ದೇ. ಬ್ರಿಟಿಷರ ವಿರುದ್ಧದ ಕಿತ್ತೂರು ರಾಣಿ ಚೆನ್ನಮ್ಮ ಹೋರಾಟದ ಹಿನ್ನೆಲೆಯಲ್ಲಿ ಆಕೆಯ ಬಂಟ ಸಂಗೊಳ್ಳಿ ರಾಯಣ್ಣನ ಸಾಹಸ, ಗೆರಿಲ್ಲಾ ಯುದ್ಧ ತೆರೆದುಕೊಳ್ಳುತ್ತಾ ಹೋಗುತ್ತದೆ.

ಬ್ರಿಟಿಷರಿಗೆ ಕಪ್ಪ ಕೊಡಲು ನಿರಾಕರಿಸುವ ಕಿತ್ತೂರು ಮೊದಲ ಯುದ್ಧದಲ್ಲಿ ರಾಯಣ್ಣನ ಬಲದಿಂದ ಆಂಗ್ಲರನ್ನು ಸೋಲಿಸುತ್ತದೆ. ಆದರೆ ಎರಡನೇ ಯುದ್ಧದಲ್ಲಿ ಬ್ರಿಟಿಷರು ತಂತ್ರ ಪ್ರಯೋಗಿಸುತ್ತಾರೆ. ದೊಡ್ಡ ಸೇನೆಯನ್ನು ಹರಿಯ ಬಿಡುತ್ತಾರೆ. ಕಿತ್ತೂರು ಸೋಲುತ್ತದೆ. ರಾಣಿ ಚೆನ್ನಮ್ಮಳನ್ನು ಯುದ್ಧ ಕೈದಿಯನ್ನಾಗಿಸಿ ಗೃಹಬಂಧನದಲ್ಲಿಡಲಾಗುತ್ತದೆ. ಇದರ ಹಿಂದೆ ರಾಜದ್ರೋಹದ ನೆರಳಿರುತ್ತದೆ.

ಈ ನಡುವೆ ಬಂಧನದಲ್ಲಿರುವಾಗಲೇ ರಾಯಣ್ಣನೂ ಸತ್ತು ಹೋದ ಎಂಬ ಸುದ್ದಿ ಬರುತ್ತದೆ. ಇದು ಬ್ರಿಟಿಷರ ಕುತಂತ್ರ ಎಂಬುದನ್ನು ಅರಿಯದ ರಾಣಿ ಅಲ್ಲೇ ಕೊನೆಯುಸಿರೆಳೆಯುತ್ತಾಳೆ. ಅತ್ತ ರಾಯಣ್ಣ ಜೈಲಿನಿಂದ ಬಿಡುಗಡೆಯಾದ ಮೇಲೆ ಬ್ರಿಟಿಷರ ವಿರುದ್ಧ ಹೊಸ ಹೋರಾಟಕ್ಕೆ ಸಿದ್ಧತೆ ನಡೆಸುತ್ತಾನೆ. ಗೆರಿಲ್ಲಾ ಯುದ್ಧದಲ್ಲಿ ಬ್ರಿಟಿಷರಿಗೆ ಹೊಡೆತ ನೀಡುತ್ತಾನೆ. ಅಷ್ಟರಲ್ಲಿ ಮತ್ತೆ ತನ್ನವರಿಂದಲೇ ಮೋಸ. ಬ್ರಿಟಿಷರ ಕೈ ಸೆರೆಯಾಗುವ ರಾಯಣ್ಣನನ್ನು ನೇಣುಗಂಬಕ್ಕೇರಿಸಲಾಗುತ್ತದೆ.

ನಾವು ನೀವೆಲ್ಲರೂ ಕೇಳಿರುವ ಇಂತಹ ಒಬ್ಬ ಧೀರೋದಾತ್ತ ಸೈನಿಕನ ಕಥೆಯನ್ನು ಅದ್ಭುತವಾಗಿ ತೋರಿಸಿದ್ದಾರೆ ನಿರ್ದೇಶಕ ನಾಗಣ್ಣ. ಆರಂಭದಲ್ಲಿ 19ನೇ ಶತಮಾನಕ್ಕೆ ಹೋದವರು ಮತ್ತೆ ಅಲ್ಲಿಂದ ವಾಪಸ್ ಬರುವುದು ಚಿತ್ರ ಮುಗಿದ ನಂತರವೇ. ಯುದ್ಧವೇ ಇರಲಿ, ಭಾವನಾತ್ಮಕ ಸನ್ನಿವೇಶಗಳೇ ಇರಲಿ, ಪ್ರತಿಯೊಂದರಲ್ಲೂ ತಾಜಾತನ, ಶ್ರೀಮಂತಿಕೆ ಎದ್ದು ಕಾಣುತ್ತದೆ. ರಾಯಣ್ಣನ ಮೇಲೆ ಈ ಪರಿಯ ಭರವಸೆ, ಭಕ್ತಿಗಳನ್ನು ಹೊಂದಿರುವ ನಿರ್ಮಾಪಕ ಆನಂದ್ ಅಪ್ಪುಗೋಳ್ ಧನ್ಯ ಎಂಬ ಭಾವನೆ ಮೂಡುತ್ತದೆ.

ಕನಿಷ್ಠ 20 ನಿಮಿಷಗಳಷ್ಟು ಕತ್ತರಿ ಪ್ರಯೋಗ ಮಾಡಿದ್ದರೆ ಚೆನ್ನಾಗಿತ್ತು. ಆದರೂ ವೀರ ಸೈನಿಕನ ಹೋರಾಟದ ಕಥೆಯನ್ನು ಚೊಕ್ಕ ಮಾಡಿದ ಹೊಣೆಗಾರಿಕೆ ಟಿ. ಕೇಶವಾದಿತ್ಯ ಅವರದ್ದು. ಅದಕ್ಕಿಂತಲೂ ಅವರು ಬರೆದಿರುವ ಸಂಭಾಷಣೆ ಇಡೀ ಚಿತ್ರದ ಜೀವಾಳವೆನಿಸುತ್ತದೆ. ಕೆಲವು ಕಡೆ ಪ್ರಮುಖ ಪಾತ್ರಗಳು ಕೈ ಕೊಟ್ಟವೇನೋ ಎಂದು ಭಾಸವಾದರೂ ಒಟ್ಟಾರೆ ಚಿತ್ರ ಹೈಕ್ಲಾಸ್. ಕ್ಲೈಮ್ಯಾಕ್ಸ್ ಅಂತೂ ಹೃದಯಂಗಮ. ಈಗಿನ ಪೀಳಿಗೆಯಲ್ಲಿ ಕ್ಷೀಣಿಸಿರುವ ದೇಶಭಕ್ತಿಯನ್ನು ಬಡಿದೆಬ್ಬಿಸುವಂತಿದೆ.

ತೆರೆಯನ್ನು ಸಮರ್ಥವಾಗಿ ಆವರಿಸಿಕೊಂಡಿದ್ದಾರೆ ದರ್ಶನ್. ರಾಯಣ್ಣ ಪಾತ್ರದಲ್ಲವರದ್ದು ಪರಾಕಾಯ ಪ್ರವೇಶ. ಸಂಭಾಷಣೆ ಹೇಳುವ ಶೈಲಿ, ದೇಹಭಾಷೆ, ಭಾವನಾತ್ಮಕ ಸನ್ನಿವೇಶಗಳು ಎಲ್ಲದರಲ್ಲೂ ತನ್ನಲ್ಲಿರುವ ನಟನನ್ನು ಪ್ರದರ್ಶನ ಮಾಡಿದ್ದಾರೆ. ಜಯಪ್ರದಾ ಪಾತ್ರಕ್ಕೆ ಮೆರುಗು ನೀಡಿದ್ದಾರೆ. ಶ್ರೀನಿವಾಸ ಮೂರ್ತಿ, ಶಿವಕುಮಾರ್, ಶಶಿಕುಮಾರ್, ದೊಡ್ಡಣ್ಣ ಗಮನ ಸೆಳೆಯುತ್ತಾರೆ. ರಾಯಣ್ಣನ ತಾಯಿ ಪಾತ್ರ ಮಾಡಿರುವ ಉಮಾಶ್ರೀ ಎಲ್ಲರಿಗಿಂತ ಬೇರೆಯೇ ಆಗಿ ನಿಲ್ಲುತ್ತಾರೆ.

ನಾಯಕಿಯೆಂದು ಹೇಳಲಾಗುತ್ತಿದ್ದ ನಿಖಿತಾರದ್ದು ಮಲ್ಲಮ್ಮನ ಪಾತ್ರ. ಎಲ್ಲೋ ಬಂದು ಹಾಡೊಂದರಲ್ಲಿ ಕುಣಿದು ಮಾಯಾವಾಗುವ ಅವರ ಪಾತ್ರಕ್ಕೆ ನಂತರ ವಿಳಾಸವೇ ಇರುವುದಿಲ್ಲ.

ಇನ್ನು ಯುದ್ಧ ಸನ್ನಿವೇಶಗಳ ಚಿತ್ರಣಕ್ಕೆ ಸಾಹಸ ನಿರ್ದೇಶಕ ರವಿವರ್ಮಾ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಅದಕ್ಕೆ ತಕ್ಕಂತೆ ವಿ. ಹರಿಕೃಷ್ಣ ಹಿನ್ನೆಲೆ ಸಂಗೀತ, ರಮೇಶ್ ಬಾಬು ಕ್ಯಾಮರಾ. ಆದರೆ ಯಶೋವರ್ಧನ್ ಸಂಗೀತದ ಹಾಡುಗಳು ಕಿವಿಯನ್ನು ಇಂಪಾಗಿಸುವುದಿಲ್ಲ.

ಒಟ್ಟಾರೆ ಇದೊಂದು ಐತಿಹಾಸಿಕ ಚಿತ್ರರತ್ನ. ಕುಟುಂಬ ಸಮೇತರಾಗಿ ನೋಡಿದರೆ ಹಬ್ಬ, ದೇಶಭಕ್ತಿಯನ್ನು ಉಸಿರಾಡುವ ಹೃದಯಗಳಿಗೆ ಆಮ್ಲಜನಕ. ಮಿಸ್ ಮಾಡಿಕೊಳ್ಳಬೇಡಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shruti Haasan, ಚೆನ್ನೈಗೆ ಸೋಲಾಗುತ್ತಿದ್ದ ಹಾಗೇ ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ನಟಿ, Video Viral

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

Show comments