ಅಭಿಜಿತ್ (ಮಮ್ಮುಟ್ಟಿ) ಸಾಫ್ಟ್‌ವೇರ್ ಇಂಜಿನಿಯರ್. ಕಾದಂಬರಿ ಓದುತ್ತಾ ಕಳೆದು ಹೋದ ಪುಟಗಳ ಹುಡುಕಾಟಕ್ಕೆ ಎಲ್ಲವನ್ನೂ ಬಿಟ್ಟವನು ಸೇರುವುದು ಕರ್ನಾಟಕದ ಮಂಜಿನಡ್ಕಕ್ಕೆ. ಪುಸ್ತಕದ ಲೇಖಕನ ಮನೆಯನ್ನೂ ಹುಡುಕುತ್ತಾನೆ. ಲೇಖಕನ ಮಗಳು ನಂದಿತಾ (ಪೂನಂ ಬಾಜ್ವಾ) ಕಾಲಿಗೆ ಗೆಜ್ಜೆ ಕಟ್ಟಿದ್ದೇನೋ ಎಂಬಂತೆ ಹೊರಟು ನಿಂತಿರುತ್ತಾಳೆ.
ಹೀಗಿರುವ ನಂದಿತಾಳಿಗೆ ತನ್ನ ಉದ್ದೇಶವನ್ನೂ ತಿಳಿಸುತ್ತಾನೆ ಅಭಿಜಿತ್. ಅದಕ್ಕೆ ಬೇಕಾದ ಸಹಕಾರ ನಂದಿತಾಳಿಂದ ಸಿಗುತ್ತದೆ. ವಾಸ್ತವದಲ್ಲಿ ಕಾದಂಬರಿಯಲ್ಲಿನ ರೇಣುಕಾಳನ್ನೇ (ಪೂನಂ ಬಾಜ್ವಾ) ನಂದಿತಾಳಲ್ಲಿ ಅಭಿಜಿತ್ ನೋಡುತ್ತಾನೆ. ನೋಡುತ್ತಾ ನೋಡುತ್ತಾ ತಾನು ಅರುಣ್ (ಮಮ್ಮುಟ್ಟಿ) ಆಗುತ್ತಾನೆ. ಆದರೆ ಅಲ್ಲಿ ನಡೆದಿರುವುದು ನಂದಿನಿಯ ಚಾಕಚಕ್ಯತೆ. ಅದೇನು ಅನ್ನೋದನ್ನು ಚಿತ್ರಮಂದಿರದಲ್ಲೇ ನೋಡಿ.
ಶಿಕಾರಿ'ಯ ಬಗ್ಗೆ ಮೊದಲನೇ ಕಂಪ್ಲೇಂಟು ಕಥೆ ಜಾಸ್ತಿಯಾಯ್ತು ಮತ್ತು ಸಿನಿಮಾ ಉದ್ದವಾಯ್ತು ಅನ್ನೋದು. ನಿರ್ದೇಶಕ ಅಭಯ ಸಿಂಹರದ್ದು ಅತ್ತ ಕಲಾತ್ಮಕ ಚಿತ್ರವೂ ಅಲ್ಲದ, ಇತ್ತ ಕಮರ್ಷಿಯಲ್ ಚಿತ್ರವೂ ಆಗದ ತೊಳಲಾಟ. ಆದರೂ ಅವರು ಎರಡನೇ ಚಿತ್ರದಲ್ಲಿ ಸಾಕಷ್ಟು ಬೆಳೆದಿದ್ದಾರೆ. ಇಂತಹ ಬೇಕೆನಿಸುವ ನಿರ್ದೇಶಕರ ಸಾಲಿಗವರು ಸೇರುತ್ತಾರೆ.
ಒಂದು ನಿರ್ದಿಷ್ಟ ವರ್ಗದ ಪ್ರೇಕ್ಷಕರನ್ನು ಕುತೂಹಲದಿಂದ ನೋಡುವಂತೆ ಮಾಡುವ ಉದ್ದೇಶ ನಿರ್ದೇಶಕರದ್ದು. ಅದಕ್ಕಾಗಿ ಬಾಕ್ಸಾಫೀಸ್ ಚಮತ್ಕಾರಗಳು ಬೇಕಿಲ್ಲ, ಅಚ್ಚರಿಗಳ ಅಗತ್ಯವಿಲ್ಲ, ಮನರಂಜನೆ ಅನಿವಾರ್ಯವಲ್ಲ ಎಂಬ ಸ್ಪಷ್ಟತೆಯೂ ಅವರಲ್ಲಿದ್ದಂತಿದೆ. ಆದರೂ ಕಾದಂಬರಿಯಲ್ಲಿ ಪುಟಗಳು ಕಳೆದು ಹೋದಂತೆ ಎಲ್ಲೋ ಏನೋ ಕಳೆದ ಅನುಭವ ಪ್ರೇಕ್ಷಕರಿಗಾದರೆ ಅದಕ್ಕೆ ಬೇರೆ ಯಾರನ್ನೂ ದೂರಲಾಗದು.
ಇನ್ನು ಮಮ್ಮುಟ್ಟಿಗೆ ಇಂತಹ ಚಿತ್ರಗಳೇನೂ ಹೊಸತಲ್ಲ. ಕನ್ನಡದಲ್ಲೇ ಡಬ್ಬಿಂಗ್ ಮಾಡಿರುವುದು ಉತ್ತಮ ಪ್ರಯತ್ನ. ಎರಡೆರಡು ಪಾತ್ರಗಳು ಪೂನಂ ಬಾಜ್ವಾಗೆ ಭಾರವೆನಿಸಿಲ್ಲ. ಶರತ್ ಲೋಹಿತಾಶ್ವ ಇದ್ದಕ್ಕಿದ್ದಂತೆ ಅಬ್ಬರಿಸಿ ಗಮನ ಸೆಳೆಯುತ್ತಾರೆ.
ಇಷ್ಟಿದ್ದೂ ಚಿತ್ರವನ್ನು ನೋಡಿಸಿಕೊಂಡು ಹೋಗುವಲ್ಲಿ ಕ್ಯಾಮರಾಮೆನ್ ವಿಕ್ರಮ್ ಶ್ರೀವಾತ್ಸವ್ ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಪಾತ್ರ ಮಹತ್ವದ್ದು ಎಂದು ನೆನಪಿಸಿಕೊಳ್ಳಲೇಬೇಕು.
ತಾಂತ್ರಿಕತೆ, ಜಾಗೃತಿ, ಸಂಸ್ಕೃತಿಯಲ್ಲೂ ಶ್ರೀಮಂತವಾಗಿರುವ 'ಶಿಕಾರಿ' ನೋಡಿದದವರಿಗೆ ನಷ್ಟವಂತೂ ಖಂಡಿತಾ ಇಲ್ಲ.