ಇಡೀ 'ಭೀಮಾ ತೀರದಲ್ಲಿ' ಚಿತ್ರದಲ್ಲಿ ತುಂಬಿರೋದು ರೋಷ. ವಿಜಯ್ ಹೊಡೆದಾಡುವುದರಲ್ಲಿ ನಿಸ್ಸೀಮ ಎಂಬ ಕಾರಣಕ್ಕಷ್ಟೇ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದೂ ಭಾಸವಾಗುತ್ತದೆ. ಫ್ಯಾಮಿಲಿ ಪ್ರೇಕ್ಷಕರ ಪಾಲಿಗೆ ವಿಜಯ್ ಭೀಭತ್ಸರಾಗುತ್ತಾರೆ. ಕೆಲವು ದೃಶ್ಯಗಳಿಗೆ ಕಣ್ಣು ಮುಚ್ಚಿಕೊಳ್ಳಲೇ ಬೇಕು ಎಂಬಂತಿದೆ. ಇಷ್ಟು ಕ್ರೂರತೆಯ ನಡುವೆ ಅಲ್ಲಲ್ಲಿ ಸೆಂಟಿಮೆಂಟ್ ಕಾಡುತ್ತದೆ. ತಾಯಿಯ ಜತೆಗಿನ ದೃಶ್ಯಗಳಲ್ಲಿ ವಿಜಯ್ ಕಣ್ಣಾಲಿಗಳನ್ನು ಒದ್ದೆ ಮಾಡಿಸುತ್ತಾರೆ.
ಇದುವರೆಗಿನ ಚಿತ್ರಗಳಲ್ಲಿ ಬೆದರು ಬೊಂಬೆಯಾಗಿದ್ದ ಪ್ರಣೀತಾಗೆ ಈ ಚಿತ್ರದಲ್ಲಿ ಅಭಿನಯಕ್ಕೆ ಅವಕಾಶ ಸಿಕ್ಕಿದೆ. ಉಮಾಶ್ರೀ ತಾಯಿ ಪಾತ್ರ ಸಿಕ್ಕಿದರೆ ಹೇಗೆ ಪರಕಾಯ ಪ್ರವೇಶ ಮಾಡುತ್ತಾರೆಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಶ್ರೀನಿವಾಸಮೂರ್ತಿ, ಲೋಕನಾಥ್, ಶರತ್ ಲೋಹಿತಾಶ್ವ ಎಲ್ಲೂ ಕೊರತೆ ಮಾಡಿಲ್ಲ.
ಅಭಿಮನ್ ರಾಯ್ ಸಂಗೀತ ಹೊಡೆ-ಬಡಿ ಸದ್ದಿನ ನಡುವೆ ಕ್ಷೀಣವಾಗಿದೆ. ಗಂಭೀರ ಚಿತ್ರವಾದ ಕಾರಣ, ಹಾಡುಗಳೇ ಬೇಕಿರಲಿಲ್ಲ. ಕ್ಯಾಮರಾ ಹಿಡಿದಿರುವ ನಿರ್ಮಾಪಕ ಅಣಜಿ ನಾಗರಾಜ್ ಭರವಸೆ ಮೂಡಿಸುತ್ತಾರೆ.
ನೀವು ವಿಜಯ್ ಅಭಿಮಾನಿಯಾಗಿದ್ದರೆ, ಅದರಲ್ಲೂ ಕ್ರೌರ್ಯತೆಯೇ ಬೇಕಿದ್ದರೆ, ನಿಮ್ಮ ಹೃದಯ ನಿಜಕ್ಕೂ ಗಟ್ಟಿಯಿದ್ದರೆ ಖಂಡಿತಾ ಚಿತ್ರಮಂದಿರದತ್ತ ಹೆಜ್ಜೆ ಹಾಕಬಹುದು.