ಮಲಯಾಳಂನ 'ಬಾಡಿಗಾರ್ಡ್' ರಿಮೇಕಿಗೆ ಜಗ್ಗೇಶ್ ನಾಯಕ ಎಂಬ ಸುದ್ದಿಗಳು ಬಂದಾಗಲೇ ಹಲವು ಶಂಕೆಗಳು ಹುಟ್ಟಿಕೊಂಡಿದ್ದವು. ಆ ಪಾತ್ರಕ್ಕೆ ಜಗ್ಗೇಶ್ ಹೊಂದಿಕೊಳ್ಳುತ್ತಾರಾ ಅನ್ನೋ ಜಿಜ್ಞಾಸೆಗಳೂ ಇದ್ದವು. ಚಿತ್ರ ನೋಡುವಾಗ ಅದು ಮತ್ತೆ ನೆನಪಾಗುತ್ತದೆ. ಜಗ್ಗೇಶ್ ಹೊಡೆದಾಡೋದು, ಅಳೋದನ್ನು ಹಾಸ್ಯದಿಂದಲೇ ಸ್ವೀಕರಿಸಿದ್ದವರು ತೀರಾ ಗಂಭೀರ ಪಾತ್ರವೊಂದಕ್ಕೆ ಹೋದಾಗ ಇನ್ನೇನು ಮಾಡಲು ಸಾಧ್ಯವಿದೆ!
ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ ಶೀರ್ಷಿಕೆಯೇ ಹೇಳುವಂತೆ ಇಲ್ಲಿ ನಾಯಕ ಜಯಕೃಷ್ಣ (ಜಗ್ಗೇಶ್) ಬಾಡಿಗಾರ್ಡ್. ಅಪ್ಪನ ಕೆಲಸವನ್ನು ಬಳುವಳಿಯಂತೆ ಮುಂದುವರಿಸಿದವನು. ಬಾಡಿಗಾರ್ಡ್ ಆಗುವುದು ಡಾನ್ ಅಶೋಕಣ್ಣನ (ಗುರುದತ್) ಮಗಳು ಅಮ್ಮುವಿಗೆ (ಡೈಸಿ ಶಾ). ಜಯಕೃಷ್ಣನ ಶೌರ್ಯ ಗೊತ್ತಿದ್ದ ಅಶೋಕಣ್ಣ ಅಪಾರ ನಂಬಿಕೆಯನ್ನೂ ಇಟ್ಟಿರುತ್ತಾನೆ.
ಹೀಗಿದ್ದಾಗ ಅಮ್ಮುವಿಗೆ ಜಯಕೃಷ್ಣ ಮೇಲೆ ಪ್ರೀತಿ ಹುಟ್ಟುತ್ತದೆ. ಆದರೆ ಆಕೆ ಅದನ್ನು ನೇರವಾಗಿ ವ್ಯಕ್ತಪಡಿಸುವ ಬದಲು ಫೋನಿನಲ್ಲಿ ಕಾಡುತ್ತಾಳೆ. ಯಾವತ್ತೂ ತಾನು ಯಾರೆಂದು ನಿಜ ಹೇಳಿದವಳಲ್ಲ. ಹೀಗಿದ್ದಾಗ ಜಯಕೃಷ್ಣನ ಮೇಲೆ ಅಶೋಕಣ್ಣನಿಗೆ ಸಂಶಯ ಜೋರಾಗುತ್ತದೆ. ಆಗ ಜಯಕೃಷ್ಣನನ್ನು ಉಳಿಸಲು ತನ್ನ ಗೆಳತಿ ಪೂರ್ಣಾಳನ್ನು (ಸ್ಫೂರ್ತಿ) ಅಮ್ಮು ಕಳುಹಿಸುತ್ತಾಳೆ.
ವಾಸ್ತವದಲ್ಲಿ ಜಯಕೃಷ್ಣನನ್ನು ಪೂರ್ಣಾ ಕೂಡ ಪ್ರೀತಿಸಿರುತ್ತಾಳೆ. ಹೌದು, ಫೋನ್‌ನಲ್ಲಿ ಪ್ರೀತಿಸುತ್ತಿದ್ದುದು ನಾನೇ ಅಂತ ಜಯಕೃಷ್ಣನನ್ನು ನಂಬಿಸುತ್ತಾಳೆ. ಅವಳನ್ನೇ ನಾಯಕ ಮದುವೆಯೂ ಆಗುತ್ತಾನೆ. ಅವರಿಗೊಂದು ಮಗು ಹುಟ್ಟುತ್ತಲೇ ತಾಯಿಯಿಲ್ಲದ ತಬ್ಬಲಿಯಾಗುತ್ತದೆ.
ಒಂದಷ್ಟು ವರ್ಷಗಳ ನಂತರ ನಾಯಕ ಅಶೋಕಣ್ಣನಲ್ಲಿಗೆ ಹೋಗುತ್ತಾನೆ. ಆಗ ಪೂರ್ಣಾ ತನ್ನ ಡೈರಿಯಲ್ಲಿ ಬರೆದ ಸತ್ಯ ಜಯಕೃಷ್ಣನಿಗೆ ಗೊತ್ತಾಗುತ್ತದೆ. ಕೊನೆಗೆ ಜಯಕೃಷ್ಣ ಮತ್ತು ಅಮ್ಮು ಒಂದಾಗುತ್ತಾರೆ. ಇದು ಚಿತ್ರದ ಕತೆ.
ಚಿತ್ರ ಭಾವನಾತ್ಮಕವಾಗಿ ತೀವ್ರವಾಗಿ ತಟ್ಟುವ ಶಕ್ತಿ ಹೊಂದಿದ್ದರೂ, ಜಗ್ಗೇಶ್‌ರಿಂದಾಗಿ ಅದನ್ನು ಅನುಭವಿಸುವುದು ಕಷ್ಟವಾಗುತ್ತದೆ. ಅದಕ್ಕೆ ಕಾರಣ, ಅವರ ಇದುವರೆಗಿನ ಸಿನಿಮಾಗಳು. ಹಾಗೆಂದು ಅವರು ಕೆಟ್ಟದಾಗಿ ನಟಿಸಿದ್ದಾರೆಂದು ಅರ್ಥವಲ್ಲ. ಅವರ ನಟನೆಯ ಗಂಭೀರತನ ಪ್ರೇಕ್ಷಕರಿಗೆ ಪಥ್ಯವಾಗುವುದಿಲ್ಲ, ಅಷ್ಟೇ. ಅವರು ಇನ್ನೂ ಕಾಲೇಜಿಗೆ ಹೋಗುತ್ತಾರೆಂದರೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಅವರ ವಯಸ್ಸಿಗೂ, ಚಿತ್ರದ ಪಾತ್ರಕ್ಕೂ ಯಾವ ರೀತಿಯಿಂದಲೂ ಹೊಂದಾಣಿಕೆಯಾಗುವುದಿಲ್ಲ.
ನಿರ್ದೇಶಕ ಟಿ.ಎ. ಆನಂದ್ ಹೆಚ್ಚೇನೂ ಶ್ರಮವಹಿಸಿಲ್ಲ. ಡೈಸಿ ಶಾ, ಸ್ಫೂರ್ತಿ ಕೆಟ್ಟದಾಗಿ ನಟಿಸಿಲ್ಲ. ವಿನಯ್ ಚಂದ್ರ ಸಂಗೀತದಲ್ಲಿ ಎರಡು ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. ಕ್ಯಾಮರಾಮ್ಯಾನ್ ಅಶೋಕ್ ವಿ. ರಾಮನ್, ರಾಜೇಂದ್ರ ಕಾರಂತ್ ಸಂಭಾಷಣೆ ಬಗ್ಗೆ ಎರಡು ಮಾತಿಲ್ಲ.
ಇತ್ತೀಚೆಗಷ್ಟೇ ಹಿಂದಿಯಲ್ಲಿ ಬಿಡುಗಡೆಯಾಗಿದ್ದ ಹಿಂದಿ 'ಬಾಡಿಗಾರ್ಡ್'ಗೂ ಇದಕ್ಕೂ ಯಾವ ರೀತಿಯಿಂದಲೂ ಹೋಲಿಕೆ ಸಲ್ಲದು.
ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!