ಆತ ಭಾಸ್ಕರ್ (ದಿಗಂತ್). ಉಂಡಾಡಿ ಗುಂಡನಾದರೂ ಬಾಸ್ ಎಂದೇ ಕರೆಸಿಕೊಳ್ಳುವವನು. ಕೆಲಸ ಒಂದು ಬಿಟ್ಟು ಬೇರೆ ಯಾವುದಕ್ಕೂ ಭಾಸ್ಕರ್ ಸೈ. ಆತನಿಗೊಬ್ಬ ಕ್ಷೌರಿಕ ಗೆಳೆಯ ಸುಂದರ್ (ಶರಣ್). ಸುಂದರನ ಸಲೂನ್‌ನಲ್ಲೇ ದಿನಗಳೆಯುವ ಭಾಸ್ಕರ್, ಆತನ ದುಡ್ಡಲ್ಲೇ ಮಜಾ ಉಡಾಯಿಸುತ್ತಾನೆ. ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಅನ್ನೋ ಹಾಗೆ. ಆದರೂ ಪ್ರೀತಿಗೆ ಹುಡುಗಿಯೊಬ್ಬಳು ಸಿಕ್ಕಿರುತ್ತಾಳೆ.
ಆದರೂ ದುರಾದೃಷ್ಟ. ಭಾಸ್ಕರ್ ಪಿಯುಸಿ ಪಾಸ್ ಮಾಡಲೂ ಒದ್ದಾಡುತ್ತಿರುತ್ತಾನೆ. ಹೇಗಾದರೂ ಪಾಸ್ ಆಗಲೇ ಬೇಕೆಂದು ಅಡ್ಡದಾರಿಯಲ್ಲಿ ಹೋದವನು ಸಿಕ್ಕಿ ಬೀಳುತ್ತಾನೆ. ಅದೂ ತನ್ನ ಹುಡುಗಿ ಚಂದ್ರಿಕಾ (ಐಂದ್ರಿತಾ ರೇ) ಕೈಯಲ್ಲಿ.
ಚಂದ್ರಿಕಾಳನ್ನೇ ಮದುವೆಯಾಗಬೇಕು ಅನ್ನುವ ಆಸೆಯೇ ಭಾಸ್ಕರ್ ಬದುಕನ್ನು ಬದಲಾಯಿಸುತ್ತದೆ. ನೆಟ್ಟಗೆ ಮಾಡಲೊಂದು ಕೆಲಸವಿಲ್ಲದ ನಿನಗೆ ನಮ್ಮ ಮಗಳನ್ನು ಕೊಡಬೇಕಾ ಎಂಬ ಲೇವಡಿಯೇ ಟ್ಯೂಷನ್ ಕ್ಲಾಸ್ ತೆರೆಯುವಂತೆ ಮಾಡುತ್ತದೆ. ಅಲ್ಲಿ ಯಶಸ್ವಿಯೂ ಆಗುತ್ತಾನೆ ಭಾಸ್ಕರ. ಆದರೆ ಮಗಳನ್ನು ಕೊಡುವುದಿಲ್ಲ ಎನ್ನಲು ಚಂದ್ರಿಕಾಳ ತಂದೆಗೆ ಇನ್ನೊಂದು ಕಾರಣ ಸಿಗುತ್ತದೆ. ಹೀಗಿರುವ ಭಾಸ್ಕರ ಕೊನೆಗೆ ಏನು ಮಾಡುತ್ತಾನೆ? ಇದು ಕಥೆ.
ತಾವಿಬ್ಬರೂ ತೆರೆಯಲ್ಲೂ ಜೋಡಿಯಾಗಲು ಅವಕಾಶ ಸಿಗುತ್ತದೆ ಅನ್ನೋ ಕಾರಣಕ್ಕೆ ಪಕ್ಕನೆ ದಿಗಂತ್ ಮತ್ತು ಐಂದ್ರಿತಾ ರೇ ಈ ಚಿತ್ರವನ್ನು ಒಪ್ಪಿಕೊಂಡು, ಹಾಗೆಯೇ ಮಾಡಿದ್ದರೂ ಸಹ ಪ್ರೇಕ್ಷಕರಿಗೆ ಎಲ್ಲೂ ಮೋಸವಾಗುವುದಿಲ್ಲ. ದಿಗಂತ್ ಅಂತೂ ಇಡೀ ಚಿತ್ರವನ್ನು ಆವರಿಸಿಕೊಂಡು ಬಿಡುತ್ತಾರೆ. ಅವರಿಗೆ ಹೇಳಿ ಮಾಡಿಸಿದ ಪಾತ್ರವಿದು. ಇದಕ್ಕೆ ತಕ್ಕ ಸಾಥ್ ಐಂದ್ರಿತಾರದ್ದು. ಮನರಂಜನೆಯನ್ನೇ ಎದುರು ನೋಡುತ್ತಿರುವವರನ್ನು ಇವರಿಬ್ಬರೂ ನೋಡಿಸಿಕೊಂಡು ಹೋಗುತ್ತಾರೆ. ಅದೆಷ್ಟು ಅಂದರೆ, 'ಮನಸಾರೆ'ಯಲ್ಲೂ ಈ ಜೋಡಿ ಮಾಡಿರದಷ್ಟು ಮೋಡಿಯಲ್ಲಿ.
ತಮಿಳಿನ 'ಬಾಸ್ ಎಂಗಿರಾ ಭಾಸ್ಕರನ್' ರಿಮೇಕ್ ಚಿತ್ರವಾದರೂ ಎಲ್ಲೂ ಕೊರತೆಯೆನಿಸುವುದಿಲ್ಲ. ಆ ಮಟ್ಟಿಗೆ ನಿರ್ದೇಶಕ ಪ್ರಭು ಶ್ರೀನಿವಾಸ್ ಪ್ರಾಮಾಣಿಕರು. ಇತರ ಕೆಲವು ಚಿತ್ರಗಳಿಂದ ಕೆಲವು ದೃಶ್ಯಗಳನ್ನು ಎಗರಿಸುವಷ್ಟು ಒಲವು ಕೂಡ ಅವರಲ್ಲಿದೆ.
ಶರಣ್ ಹಾಸ್ಯ ಮತ್ತೆ ಮತ್ತೆ ಬೇಕೆನಿಸುತ್ತದೆ. ಅವರ ಟೈಮಿಂಗ್ ಅಂತೂ ಅದ್ಭುತ. ರಘು ಮುಖರ್ಜಿಯವರದ್ದು ಬಂದು ಹೋಗುವ ಪಾತ್ರ.
ಇದಕ್ಕೆ ತಕ್ಕಂತೆ ಮನೋ ಮೂರ್ತಿ ಸಂಗೀತ. ಸುಮಧುರ ಸಂಗೀತದ ಗೀತೆಗಳು ದಿಗಂತ್-ಐಂದ್ರಿತಾ ಒಲವನ್ನು ಇಮ್ಮಡಿಗೊಳಿಸುತ್ತವೆ. ನೀ ಮೋಹಿಸು, ಹೇ ಚಂದ್ರಿಕಾ ಹಾಡುಗಳು ನೆನಪಿನ ಅಂಗಳದಲ್ಲಿ ಮನೆ ಮಾಡಿ ಬಿಡುತ್ತವೆ.
ಕೆಲವು ಕಡೆ ಮೂಲ ಚಿತ್ರವನ್ನೂ ಮೀರಿಸುವಂತೆ ಮೂಡಿ ಬಂದಿರುವ 'ಪಾರಿಜಾತ' ಈ ಬಾರಿಯ ವಾಲೆಂಟೈನ್ಸ್ ಡೇ ಎದುರು ನೋಡುತ್ತಿರುವ ಜೋಡಿಗಳಿಗೆ ಖಂಡಿತಾ ಸುವಾಸನೆ ತರುವುದರಲ್ಲಿ ಸಂಶಯವಿಲ್ಲ.