ಇಡೀ ಚಿತ್ರ ಆಸ್ಪತ್ರೆಯೊಂದರ ಸುತ್ತ ಸುತ್ತುತ್ತದೆ. ಡಾ. ಅರ್ಜುನ್ (ರಮೇಶ್) ಅಲ್ಲಿನ ಡಾಕ್ಟರ್. ಜತೆಗಿದ್ದವನ ಕುತಂತ್ರದಿಂದ 22 ಮಂದಿ ಹೃದಯ ಸಮಸ್ಯೆಯಿರುವ ಮಕ್ಕಳು ಆಸ್ಪತ್ರೆ ಸೇರಿರುತ್ತಾರೆ. ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುವ ಅನಿವಾರ್ಯತೆ ಡಾ. ಅರ್ಜುನ್‌ನದ್ದು. ಆದರೆ ಇದಕ್ಕೆ ಆಸ್ಪತ್ರೆ ಮಾಲಕ ಒಪ್ಪಿಕೊಳ್ಳುವುದಿಲ್ಲ. ನಾವಿಲ್ಲಿ ಆಸ್ಪತ್ರೆ ಮಾಡಿರೋದು ಸಮಾಜ ಸೇವೆಗಲ್ಲ, ಸಂಪಾದಿಸೋದಿಕ್ಕೆ ಅಂತ ಹೇಳುತ್ತಾನೆ.
ಹೃದ್ರೋಗ ತಜ್ಞ ರಮೇಶ್ ಹೃದಯದ ಉಸಾಬರಿ ಮಾಲಿನಿ (ಮೋನಾ ಪರ್ವೇಶ್) ಕೈಯಲ್ಲಿರುತ್ತದೆ. ಹೀಗಿರುವಾಗ ಆಕೆಯಿಂದಾದ ಅಪಘಾತದಲ್ಲಿ ಅಣ್ಣಾ ಡಾನ್ (ರಾಜೇಶ್ ಕಾರಂತ್) ಸಾಯುತ್ತಾನೆ. ಡಾನ್ ಸತ್ತಿರುವ ಸಂಗತಿ ಆತನ ಸಹೋದರ ಡಾನ್ ಮುತ್ತುವಿಗೆ (ರಾಜು ತಾಳಿಕೋಟೆ) ಗೊತ್ತಿರುವುದಿಲ್ಲ. ಬಚಾವ್ ಆಗಬೇಕೆನ್ನುವ ಮಾಲಿನಿ, ಡೆಡ್ ಬಾಡಿಯೊಂದಿಗೆ ಅರ್ಜುನ್ ಆಸ್ಪತ್ರೆಗೆ ಬರುತ್ತಾಳೆ.
ಮುಂದೆ ಐಸಿಯು, ಡೆಡ್ ಬಾಡಿ, ಭಿಕ್ಷುಕ, ಅಪಹರಣ, ಉಚಿತ ಶಸ್ತ್ರಚಿಕಿತ್ಸೆಗಳು, ಅದಲು-ಬದಲು ಪ್ರಸಂಗಗಳು ಕುತೂಹಲ ಹುಟ್ಟಿಸುತ್ತವೆ. ಈ ಪ್ರಸಂಗಗಳು ಕೊಡೋ ಕಿಕ್ ಏನು ಅನ್ನೋದನ್ನು ಚಿತ್ರಮಂದಿರದಲ್ಲೇ ಹೋಗಿ ನೋಡಬೇಕು.
ವಾಸ್ತವದಲ್ಲಿ ಹೇಳುವುದಾದರೆ ಈ ಚಿತ್ರದ ಕಥೆಗೆ ಲಾಜಿಕ್ಕೇ ಇಲ್ಲ. ಆದರೆ ಚಿತ್ರ ನೋಡುವಾಗ ಲಾಜಿಕ್ ಬಗ್ಗೆ ಯೋಚನೆ ಮಾಡಲು ಸಮಯ ಇರುವುದಿಲ್ಲ. ಇದೇ ಚಿತ್ರದ ಪ್ಲಸ್ ಪಾಯಿಂಟ್. ಅದ್ಧೂರಿತನವಿಲ್ಲ ಅನ್ನೋ ಒಂದು ದೂರನ್ನು ಬದಿಗಿಟ್ಟರೆ, ಚಕಚಕನೆ ಉರುಳುವ ದೃಶ್ಯಗಳು, ಬಿಗಿ ಹಿಡಿತದ ಚಿತ್ರಕತೆ ಪ್ರೇಕ್ಷಕರನ್ನು ಕುಣಿಸುತ್ತದೆ.
ಇಡೀ ಕುಟುಂಬ ಜತೆಯಾಗಿ ನೋಡಬಹುದಾದ ಚಿತ್ರವಿದು. ಪ್ರತಿ ಫ್ರೇಮಿನಲ್ಲೂ ನಗಿಸಲು ಯತ್ನಿಸಿರುವ ರಮೇಶ್ ನಿರ್ದೇಶಕರಾಗಿ ಫುಲ್ ಮಾರ್ಕ್ ಪಡೆದಿದ್ದಾರೆ. ನಟರಾಗಿಯೂ ಗೆದ್ದಿದ್ದಾರೆ. ಅವರು ಸಂಭಾಷಣೆ ಹೇಳುವ ಶೈಲಿ, ಟೈಮಿಂಗ್‌ಗೆ ನಮೋನಮಃ. ಆದರೆ ರಾಜು ತಾಳಿಕೋಟೆ ಬಂದಾಗಲೆಲ್ಲ ರಮೇಶ್ ಡಲ್ಲೋಡಲ್ಲು.
ಕಚಗುಳಿ ಇಡುವ ಸಂಭಾಷಣೆ, ಸುಂದರ ಛಾಯಾಗ್ರಹಣ ಇಲ್ಲಿ ಬೋನಸ್. ನಾಯಕಿ ಮೋನಾ ಪರ್ವೇಶ್ ಚೊಚ್ಚಲ ಚಿತ್ರದಲ್ಲೇ ಸಿಕ್ಸರ್ ಬಾರಿಸಿದ್ದಾರೆ. ರಾಜೇಂದ್ರ ಕಾರಂತ್ ಎರಡೆರಡು ಅವತಾರಗಳಲ್ಲಿ ಗಮನ ಸೆಳೆಯುತ್ತಾರೆ.
ವೀಕೆಂಡಿಗೆ ಮನೆಯಲ್ಲಿ ಮೂರ್ಖರ ಪೆಟ್ಟಿಗೆ ಮುಂದೆ ಕೂರುವುದಕ್ಕಿಂತ ಚಿತ್ರಮಂದಿರಕ್ಕೆ ಹೋಗಿ 'ನಮ್ಮಣ್ಣ ಡಾನ್' ನೋಡಿಕೊಂಡು ನಕ್ಕು ಹಗುರಾಗಿ ಬನ್ನಿ.