Webdunia - Bharat's app for daily news and videos

Install App

ಜಾನು ಚಿತ್ರವಿಮರ್ಶೆ: ಇದು ಕಥೆಯಲ್ಲ ಜೀವನ

Webdunia
SUJENDRA


ಚಿತ್ರ: ಜಾನು
ತಾರಾಗಣ: ಯಶ್, ದೀಪಾ ಸನ್ನಿಧಿ, ರಂಗಾಯಣ ರಘು, ಸಾಧು ಕೋಕಿಲಾ
ನಿರ್ದೇಶನ: ಪ್ರೀತಮ್ ಗುಬ್ಬಿ
ಸಂಗೀತ: ವಿ. ಹರಿಕೃಷ್ಣ

ಪ್ರೀತಮ್ ಗುಬ್ಬಿ ತನ್ನ ಮೊದಲ ಚಿತ್ರ 'ಹಾಗೆ ಸುಮ್ಮನೆ'ಯಲ್ಲೂ ಇಷ್ಟು ನಿರಾಸೆ ಮಾಡಿರಲಿಲ್ಲ. ಅದರಲ್ಲೂ 'ಮುಂಗಾರು ಮಳೆ'ಯ ಕಥೆಗಾರ ಹೀಗೆ ಮಾಡುವುದೇ? ಹೀಗಂತ ಸಿನಿಮಾ ನೋಡಿದವರು ಯಾರಾದರೂ ಹೇಳದೇ ಇದ್ದರೆ, ಅವರು ಗಡದ್ದಾಗಿ ನಿದ್ದೆ ಮಾಡಿದ್ದಾರೆ ಎಂದೇ ಅರ್ಥ!

ಆಕೆಯ ಹೆಸರು ರುಕ್ಮಿಣಿ (ದೀಪಾ ಸನ್ನಿಧಿ). ಬೆಳಗಾವಿ ಹುಡುಗಿ, ತುಂಬು ಜವ್ವನೆ. ಹೇಳದೆ ಕೇಳದೆ ಮೈಸೂರು ದಸರಾಕ್ಕೆ ಹೊರಟು ಬಿಡುತ್ತಾಳೆ. ಅಲ್ಲಿ ಹೋಟೇಲ್ ನಡೆಸುತ್ತಿದ್ದ ಸಿದ್ಧಾರ್ಥ್ (ಯಶ್) ಮತ್ತು ರಾಮಯ್ಯ (ರಂಗಾಯಣ ರಘು) ಅವರಿಗೆ ತಗಲಾಕ್ಕೊಳ್ಳುತ್ತಾಳೆ. ಹೆಣ್ಣು ಹುಡುಗಿ, ಜೋಪಾನವಾಗಿ ಬಿಟ್ಟು ಬಾರಪ್ಪ ಎನ್ನುತ್ತಾನೆ ರಾಮಯ್ಯ.

ಮೈಸೂರಿನಿಂದ ಬೆಳಗಾವಿಗೆ 'ಪ್ರೇಮ'ಯಾತ್ರೆ. ಪ್ರೇಕ್ಷಕರಿಗೆ ಆಕಳಿಕೆ, ಕೆಲವರಿಗೆ ನಿದ್ದೆ, ಇನ್ನು ಕೆಲವರಿಗೆ ಡೇ ಔಟ್! ಅಷ್ಟರಲ್ಲಿ ಆಕ್ಷನ್ ಸೀನ್ ಬಂದೆರಗುತ್ತದೆ. ನಾಯಕ ಸಿದ್ಧಾರ್ಥನಿಗೆ ಹಿಗ್ಗಾಮುಗ್ಗ ಹೊಡೆದು ಬಿಡುತ್ತಾರೆ ರುಕ್ಮಿಣಿ ಅಪ್ಪನ ಕಡೆಯವರು. ತಪ್ಪೆಂದು ಗೊತ್ತಾದಾಗ ಅದೇ ಮನೆಯ ಅತಿಥಿಯಾಗುವ ಭಾಗ್ಯ.

ಈಗ ತ್ರಿಬಲ್ ಟ್ರಬಲ್! ರುಕ್ಮಿಣಿ ಬೇಕೆಂದು ಇನ್ನಿಬ್ಬರು ಹುಟ್ಟಿಕೊಳ್ಳುತ್ತಾರೆ. ಸಿದ್ದಾರ್ಥನೋ, ಅದೇ ಹಳೆಯ ಪಾಲಿಸಿಯನ್ನು ಪಾಲಿಸುತ್ತಾನೆ. ಪ್ರೇಕ್ಷಕರ ಕಥೆ ಹರೋಹರ.

ಪ್ರೀತಮ್ ಗುಬ್ಬಿ ಯಾಕಾದರೂ ಮೈಸೂರು-ಬೆಳಗಾವಿ ರೂಟ್ ಆರಿಸಿಕೊಂಡರೋ? ಸಿಕ್ಕಾಪಟ್ಟೆ ಬೋರ್ ಹೊಡೆಸುತ್ತಾರೆ. ಇಲ್ಲದ ಕಥೆಯನ್ನು ಜಗಿಜಗಿದು ಉಗುಳದೆ ಮುಂದೆ ಹೋಗುತ್ತಾರವರು. ಮುಂದೇನು ನಡೆಯುತ್ತದೆ ಎನ್ನುವುದನ್ನು ನಿಧಾನವಾಗಿ ಅಂದಾಜಿಸಿದರೂ ಸಾಕು ಎಂಬಷ್ಟು ಅಚ್ಚರಿ!

ಆದರೆ ಯಶ್ ತುಂಬಾ ಇಷ್ಟವಾಗುತ್ತಾರೆ. ಅನಗತ್ಯ ಆಕ್ಷನ್ ದೃಶ್ಯಗಳು ಎನಿಸಿದರೂ, ಅಲ್ಲವರು ಗಮನ ಸೆಳೆಯುತ್ತಾರೆ. ದೀಪಾ ಸನ್ನಿಧಿಯಂತೂ ಹುಚ್ಚು ಹಿಡಿಸುವಂತಿದ್ದಾರೆ. ಅವರ ಗ್ಲಾಮರ್‌ಗೆ ಯಶ್ ಲುಕ್ ಸರಿಯಾಗಿ ಹೊಂದಾಣಿಕೆಯಾಗುತ್ತದೆ. ಇವರನ್ನು ಬಿಟ್ಟು ನೆನಪಲ್ಲಿ ಉಳಿಯುವ ಇನ್ನೊಬ್ಬರು ಶೋಭರಾಜ್.

ಕೃಷ್ಣ ಕ್ಯಾಮರಾಕ್ಕೆ 'ಮುಂಗಾರು ಮಳೆ' ಬಿದ್ದಿಲ್ಲ. ಹರಿಕೃಷ್ಣ ಸಂಗೀತದ ಮೂರು ಹಾಡುಗಳು ಜೀವ ತುಂಬಿಸುತ್ತವೆ. ಬೋರ್ ಕಾರ್ಯಕ್ರಮಗಳ ನಡುವೆ ಬರುವ ಸುಂದರ ಜಾಹೀರಾತುಗಳಂತೆ ಹಾಡುಗಳು ಕೇಳಿಸುತ್ತವೆ, ಕಾಣಿಸುತ್ತವೆ.

ಪ್ರೀತಮ್ ಗುಬ್ಬಿಯವರು ಕಥೆಗೊಂದಿಷ್ಟು ಹೆಚ್ಚು ಗಮನ ಕೊಟ್ಟಿರುತ್ತಿದ್ದರೆ, ನಿರೂಪನೆಗೂ ಕಷ್ಟಪಡುತ್ತಿದ್ದರೆ, ಇಡೀ ಚಿತ್ರದ ಮೇಲೆ ನಿಯಂತ್ರಣ ಉಳಿಸಿಕೊಂಡಿರುತ್ತಿದ್ದರೆ ಮಾತು ಬೇರೆ ಇತ್ತು. ಈಗ ಏನೆಂದು ಹೇಳಲಿ? ಯಶ್-ದೀಪಾರಂತೂ ಸೂಪರ್. ಏನು ಮಾಡುತ್ತೀರೋ? ನಿಮ್ಮಿಷ್ಟ!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments