ಚಿತ್ರದ ಕಥೆ ಪುರಾತನ ಸಿನಿಮಾಗಳ ರೀತಿಯಲ್ಲೇ ಆರಂಭವಾಗುತ್ತದೆ. ಆದರೆ ನಂತರ ಪಡೆದುಕೊಳ್ಳುವ ತಿರುವುಗಳು ಪ್ರೇಕ್ಷಕರನ್ನು ಕುರ್ಚಿಯ ತುದಿಗೆ ತಂದು ನಿಲ್ಲಿಸಿ ಬಿಡುತ್ತವೆ. ಇದಕ್ಕೆ ಸರಿಯೆಂಬಂತೆ ತಂತ್ರಜ್ಞಾನದ ಬಳಕೆ. ಉಪ್ಪಿಯಂತೂ ಚಿಂದಿ ಉಡಾಯಿ ಬಿಡ್ತಾರೆ. ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಥೇಟ್ ಉಪ್ಪಿ ಬ್ರಾಂಡ್ ಸಿನಿಮಾ.
ಅರುಣ್ ಕುಮಾರ್ ಮತ್ತು ವಿಷ್ಣು ಎಂಬ ಎರಡು ಪಾತ್ರಗಳು, ಪಾತ್ರಗಳೇ ಅಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಸಂಶಯ ಪಿಶಾಚಿ, ವ್ಯಗ್ರ, ಭಾವುಕ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಉಪ್ಪಿಗೆ ಫುಲ್ ಮಾರ್ಕ್. ಪೊಲೀಸ್ ಅಧಿಕಾರಿ ಅರುಣ್‌ಗೆ ಸಹಾಯಕ್ಕಿರಲಿ ಅಂತ ಬರುವ ರಾಗಿಣಿ ದ್ವಿವೇದಿ ಪ್ರೇಕ್ಷಕರ ಕಣ್ಣಿಗೆ ಕೊಂಚ ರಿಲ್ಯಾಕ್ಸ್ ಕೊಡುತ್ತಾರೆ.
ಕಣ್ಣೆವೆ ಮಿಟುಕಿಸುವುದರ ಒಳಗೆ ಒಂದು ತಿರುವು ಸಂಭವಿಸಿಬಿಡುವಷ್ಟು ಚಿತ್ರ ವೇಗವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಕಥೆ ತೀರಾ ಕ್ಲಿಷ್ಟವೆನಿಸುತ್ತದೆ. ಸಾಮಾನ್ಯ ಪ್ರೇಕ್ಷಕನ ತಲೆಗಂತೂ ಅರ್ಥವೇ ಆಗದು. ಚಿತ್ರಮಂದಿರದಿಂದ ಹೊರಗೆ ಬಂದ ನಂತರ, ಈ ಚಿತ್ರವನ್ನು ಇನ್ನೊಮ್ಮೆ ನೋಡುವ ಅನಿವಾರ್ಯತೆ ನಮ್ಮಲ್ಲೇ ಹುಟ್ಟಿಕೊಂಡು ಬಿಡುತ್ತದೆ. ಹಾಗಿದೆ ಕಥೆ.
ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಥ್ರಿಲ್ಲರ್ ಸಿನಿಮಾಗಳು ಬರುತ್ತಿರುವುದು ಅಪರೂಪ. ಬಂದರೂ, ಖ್ಯಾತನಾಮರು ನಟಿಸುವುದು ಕಡಿಮೆ. ಹಾಗಾಗಿ ಈ ಚಿತ್ರ ಮುಖ್ಯವಾಹಿನಿಯ ಪ್ರೇಕ್ಷಕರಿಗೂ ಇಷ್ಟವಾಗಬಹುದು. ಅದೇ ಮರ ಸುತ್ತಾಟ, ರೌಡಿಗಳ ಹಾರಾಟವನ್ನು ನೋಡಿ ಬೋರಾದವರಿಗೆ 'ಆರಕ್ಷಕ' ಡಿಫರೆಂಟ್ ಅನ್ನೋದರಲ್ಲಿ ಸಂಶಯವಿಲ್ಲ.
ಗುರುಕಿರಣ್ ಸಂಗೀತದ ಮೂರು ಹಾಡುಗಳು ಮತ್ತೆ ಮತ್ತೆ ಕೇಳುವಂತಿದೆ. ಆದರೆ ಅಣ್ಣಾ ಹಜಾರೆ ಕುರಿತ ಹಾಡು ಉಪ್ಪಿ ದನಿಯಲ್ಲಿಲ್ಲ, ಕೈಲಾಸ್ ಖೇರ್ ಹಾಡೇ ತೆರೆಯಲ್ಲೂ ಬಂದಿದೆ. ಇದು ಮಾತ್ರ ನಿರಾಸೆಯುಂಟು ಮಾಡುತ್ತದೆ. ಆ ಧ್ವನಿ ಉಪ್ಪಿಗೆ ಹೊಂದಿಕೊಳ್ಳುವುದೇ ಇಲ್ಲ.
ಪಿಎಚ್‌ಕೆ ದಾಸ್ ಕ್ಯಾಮರಾದ ಬಗ್ಗೆ ಎರಡು ಮಾತಿಲ್ಲ. ಕೆಲವು ದೃಶ್ಯಗಳು ಅತ್ಯದ್ಭುತವಾಗಿ ಕಣ್ಣುಗಳನ್ನು ತೇಲಿಸುತ್ತವೆ.
ಆಪ್ತಮಿತ್ರ, ಆಪ್ತರಕ್ಷಕದ ಗುಂಗಿನಿಂದ ಇನ್ನೂ ಹೊರ ಬರದ ವಾಸು, ಇಂಗ್ಲೀಷ್ ಚಿತ್ರವೊಂದರ ಸ್ಫೂರ್ತಿ ಪಡೆದು ಬರೆದಿರುವ ಕಥೆ ತಲೆ ಚಿಟ್ಟು ಹಿಡಿಸುತ್ತದೆ ಎಂಬ ಕಂಪ್ಲೇಂಟುಗಳ ನಡುವೆಯೂ ಚಿತ್ರ ಸಹ್ಯವಾಗಿದೆ. ಉಪ್ಪಿಯ 'ಮೆಂಟಲ್' ಅವತಾರಗಳನ್ನು ನೋಡುವ ಕಾರಣಕ್ಕಾದರೂ 'ಆರಕ್ಷಕ'ವನ್ನು ಮಿಸ್ ಮಾಡ್ಕೋಬೇಡಿ!