Webdunia - Bharat's app for daily news and videos

Install App

ಅಲೆಮಾರಿ ವಿಮರ್ಶೆ; ಪರದೇಸಿಯ ಭೂಗತ ಕನಸು

Webdunia
WD
ಚಿತ್ರ: ಅಲೆಮಾರಿ
ತಾರಾಗಣ: ಯೋಗೀಶ್, ರಾಧಿಕಾ ಪಂಡಿತ್, ಉಮಾಶ್ರೀ, ರಮೇಶ್ ಭಟ್, ರಾಜು ತಾಳಿಕೋಟೆ, ಆದಿ ಲೋಕೇಶ್
ನಿರ್ದೇಶನ: ಸಂತು
ಸಂಗೀತ: ಅರ್ಜುನ್ ಜನ್ಯ

ಸಂತು ಅವರಿಗೆ ನಿರ್ದೇಶಕನಾಗಿ 'ಅಲೆಮಾರಿ' ಮೊದಲ ಚಿತ್ರ. 'ಜೋಗಿ' ಪ್ರೇಮ್ ಶಿಷ್ಯ ಇವರು. ಆದರೆ ಮೊದಲ ಚಿತ್ರದಲ್ಲೇ ಗುರುವನ್ನು ಮೀರಿಸುವ ಸೂಚನೆ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇನ್ನೊಬ್ಬ ಆಸ್ತಿಯಾಗುವ ಸಂಕೇತಗಳು ಅವರ ಸ್ವಮೇಕ್ ಚಿತ್ರದಿಂದ ಬಂದಿವೆ.

ಮೋಹನ್ (ಯೋಗೀಶ್) ಭೂಗತ ಲೋಕವನ್ನು ಮೂಸಿದ ಅಲೆಮಾರಿ. ಆತ ಪರದೇಸಿಯೂ ಹೌದು. ಕನಸುಗಾರನೂ ಹೌದು. ಕಟ್ಟರ್ ಬ್ರಾಹ್ಮಣರ ಕಾಲೇಜು ಹುಡುಗಿ ನೀಲಿ (ರಾಧಿಕಾ ಪಂಡಿತ್) ಅವನ ಕನಸಿನ ಹುಡುಗಿ. ಸಂಗೀತ ಗುರು ಶ್ರೀಧರ್ ಶಾಸ್ತ್ರಿ (ರಮೇಶ್ ಭಟ್) ಮಗಳು.

ತನ್ನದೇ ಉಸಿರಿನಂತೆ ನೀಲಿಯನ್ನು ಮೋಹನ್ ಪ್ರೀತಿಸುತ್ತಾನೆ. ಇಲ್ಲವೆಂದರೂ ಮತ್ತೆ ಮತ್ತೆ ಇಲ್ಲವೆನ್ನಲಾಗದೆ ಆಕೆಯೂ ಶರಣಾಗುತ್ತಾಳೆ ಎಂದಾಗ ಅಪ್ಪನಿಂದ ತಡೆ. ನಿನ್ನ ಮದುವೆಯ ದಿನವೇ ನನ್ನ ಬದುಕಿನ ಕೊನೆಯ ದಿನ ಎಂಬ ಬೆದರಿಕೆ. ಮೋಹನ್ ಪ್ರೀತಿಗೆ ನೀಲಿ ಅನಿವಾರ್ಯವಾಗಿ ಎಳ್ಳು ನೀರು ಬಿಡುತ್ತಾಳೆ.

ಹಾಗೆ ಹೇಳುವ ಶಾಸ್ತ್ರಿಯ ಹೃದಯ ರಿಪೇರಿಗೆ ಅದೇ ಮೋಹನ್ ಬೇಕಾಗುತ್ತಾನೆ. ನಿಜಕ್ಕೂ ಶಾಸ್ತ್ರಿ ಹೃದಯ ರಿಪೇರಿಯಾಗುತ್ತದೆ. ನೀಲಿಯ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಗುತ್ತದೆ. ಆದರೆ ಅಷ್ಟರಲ್ಲಿ ಮೋಹನನ ಹಣೆಬರಹ ಬದಲಾಗಿರುತ್ತದೆ. ಭೂಗತ ಜಗತ್ತಿನ ಬೇಟೆಗೆ ಮೋಹನ್ ನಿಜಕ್ಕೂ ಹುಚ್ಚನಂತೆ ಅಲೆಮಾರಿಯಾಗುತ್ತಾನೆ.

ಇತ್ತ ನೀಲಿ ಶಬರಿಯಾಗುವುದಿಲ್ಲ. ಆದರೂ ಮೋಹನನ ನಿರೀಕ್ಷೆ ಆಕೆಯಲ್ಲಿ ನಿರಂತರವಾಗಿರುತ್ತದೆ. ಅದು ಸುಳ್ಳೂ ಆಗುವುದಿಲ್ಲ. ವಿವಾಹಿತೆ ನೀಲಿ ಮತ್ತು ಮೋಹನನ ನಡುವೆ ಏನಾಗುತ್ತದೆ? ನಾಯಕ ಯಾವುದರಲ್ಲಿ ಅಲೆಮಾರಿಯಾಗುತ್ತಾನೆ? ಅವರ ಪ್ರೀತಿ ನಿಜಕ್ಕೂ ಗೆಲ್ಲುತ್ತದೆಯೇ? ಇದು ಚಿತ್ರದ ಉಳಿದ ಭಾಗ.

ಮೊದಲ ಚಿತ್ರದಲ್ಲೇ ಸಂತು ಗೆದ್ದಿದ್ದಾರೆ. ದೃಶ್ಯಗಳನ್ನು ಪೋಣಿಸಿರುವ ರೀತಿ, ದುರಂತ ಕಥೆಯೊಂದರಲ್ಲಿ ಕಾಮಿಡಿ, ಸಂಗೀತ, ಪ್ರೀತಿ, ದ್ವೇಷಗಳನ್ನು ಸಮರ್ಪಕವಾಗಿ ಸೇರಿಸಿರುವುದು ಅವರ ಜಾಣತನದ ಸಂಕೇತ. ಕೆಲವು ಕಡೆ ಬೋರ್ ಹೊಡೆಸುತ್ತಾರೆ, ಸುಮ್ಮನೆ ಎಳೆದಿದ್ದಾರೆ ಎಂಬ ಗಂಭೀರ ದೂರನ್ನು ಅವರು ಗಂಭೀರವಾಗಿ ಪರಿಗಣಿಸಿದರೆ ಉತ್ತಮ.

ನಾಯಕ ಯೋಗೀಶ್ ಅವರದ್ದು ಹೈ ವೋಲ್ಟೇಜ್ ನಿರ್ವಹಣೆ. 'ಸಿದ್ಲಿಂಗು' ಚಿತ್ರದಲ್ಲಿ ತನ್ನ ಒಂದು ಆಯಾಮ ತೋರಿಸಿದ್ದ ಯೋಗಿ, ಇಲ್ಲಿ ನಿಜಕ್ಕೂ ಅದ್ಭುತ. ಅವರ ಮ್ಯಾನರಿಸಂಗಳನ್ನು ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲವೇನೋ ಎಂಬಷ್ಟು ಮೋಡಿ ಮಾಡುತ್ತಾರೆ. ನಟನಾಗಿ ಅವರು ತುಂಬಾ ಬೆಳೆದಿರುವುದು ಚಿತ್ರದಿಂದ ಚಿತ್ರಕ್ಕೆ ಸ್ಪಷ್ಟ. ಇಂತಹ ಪಾತ್ರವನ್ನು ಇಷ್ಟು ಚಿಕ್ಕ ವಯಸ್ಸಿನಲ್ಲೇ ಮಾಡುವ ಧೈರ್ಯ ತೋರಿರುವುದು ಪ್ರಶಂಸಾರ್ಹ.

ಇನ್ನು ನಾಯಕಿ ರಾಧಿಕಾ ಪಂಡಿತ್. ಅವರ ಅಭಿನಯ ಹೇಗಿದೆ ಎಂದು ಸುಲಭವಾಗಿ ಹೇಳುವುದಾದರೆ, ಕನ್ನಡದ ಈಗಿನ ನಂಬರ್ ವನ್ ನಟಿ ರಮ್ಯಾರನ್ನು ಪದಚ್ಯುತಗೊಳಿಸುವಷ್ಟು ಎಂದು ಗಟ್ಟಿಯಾಗಿ ಹೇಳಬಹುದು. ಇದೇ ರೀತಿ ಮುಂದುವರಿದರೆ ಖಂಡಿತಾ ರಮ್ಯಾರನ್ನು ಅವರು ಹಿಂದಿಕ್ಕುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರಿಲ್ಲಿ ಅಲೆಮಾರಿಯ ಕನಸಿನ ಹುಡುಗಿಯಾಗಿ ಕಣ್ರೆಪ್ಪೆಗಳನ್ನು ಒದ್ದೆ ಮಾಡಿಸುತ್ತಾರೆ.

ಶಾಸ್ತ್ರಿ ಪಾತ್ರದ ರಮೇಶ್ ಭಟ್ ಬೊಂಬಾಟ್, ಉಮಾಶ್ರೀ ವೇಸ್ಟ್, ರಾಜು ತಾಳಿಕೋಟೆ ಕಿರಿಕಿರಿ, 'ಜೋಶ್' ರಾಕೇಶ್‌ ವಿಫಲ ಯತ್ನ. ಇತರ ಕೆಲವು ಹುಳುಕುಗಳಿದ್ದರೂ, ಅವೆಲ್ಲವನ್ನೂ ಕ್ಯಾಮರಾ ಮತ್ತು ಸಂಗೀತ ಮುಚ್ಚಿ ಹಾಕುತ್ತದೆ. ಅರ್ಜುನ್ ಜನ್ಯ ಅವರಂತೂ ಮೆರೆದಿದ್ದಾರೆ.

' ಅಲೆಮಾರಿ'ಯ ಅಲೆದಾಟವನ್ನು ಸ್ವಲ್ಪ ಕಡಿಮೆ ಮಾಡುತ್ತಿದ್ದರೆ, ಒಂದಷ್ಟು ತಿದ್ದುವ ಕೆಲಸವನ್ನೂ ಮಾಡುತ್ತಿದ್ದರೆ, ಇದಕ್ಕಿಂತ ಉತ್ತಮ ಸ್ವಮೇಕ್ ಸಿನಿಮಾ ಇತ್ತೀಚೆಗೆ ಕನ್ನಡದಲ್ಲಿ ಬಂದೇ ಇಲ್ಲ ಎನ್ನಬಹುದಿತ್ತು!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments