Webdunia - Bharat's app for daily news and videos

Install App

ಅಂದರ್ ಬಾಹರ್ ಚಿತ್ರವಿಮರ್ಶೆ: ಸುಳ್ಳಿನ ಕಂತೆಯೊಳಗಿನ ಜೀವನ

Webdunia
ಶನಿವಾರ, 6 ಏಪ್ರಿಲ್ 2013 (13:49 IST)
PR
ಚಿತ್ರ: ಅಂದರ್ ಬಾಹರ್
ತಾರಾಗಣ: ಶಿವರಾಜ್ ಕುಮಾರ್, ಪಾರ್ವತಿ ಮೆನನ್, ಅರುಂಧತಿ ನಾಗ್, ಶ್ರೀನಾಥ್
ನಿರ್ದೇಶನ: ಫನೀಶ್
ಸಂಗೀತ: ವಿಜಯ್ ಪ್ರಕಾಶ್

ನಿರ್ದೇಶಕ ಫನೀಶ್ ಉದ್ದೇಶ ಸ್ಪಷ್ಟವಾಗಿತ್ತು. ಆದರೂ ಟ್ರೆಂಡ್ ಮತ್ತು ಇಮೇಜ್‌ಗಳು ಅವರನ್ನು ಬಹುವಾಗಿ ಕಾಡಿದಂತಿವೆ. ಅದೇ ಕಾರಣದಿಂದ ಅಲ್ಲಲ್ಲಿ ಗೊಂದಲಗಳು ಕಾಣಿಸಿಕೊಂಡಿವೆ. ಸುದೀರ್ಘವೂ ಆಗಿದೆ. ಅಷ್ಟು ಬಿಟ್ಟರೆ ಕುಟುಂಬ ಸಮೇತ ನಿರುಮ್ಮಳವಾಗಿ ಕುಳಿತು ನೋಡಬಹುದಾದ ಚಿತ್ರ 'ಅಂದರ್ ಬಾಹರ್'.

ಶಿವರಾಜ್ ಕುಮಾರ್ ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಕೊಟ್ಟು ಬಹಳ ಕಾಲವಾಗಿತ್ತು. ಪ್ರತಿ ಸಿನಿಮಾಗಳಲ್ಲೂ ಬರೀ ರಕ್ತವನ್ನೇ ಹರಿಸುತ್ತಿದ್ದರು. ಆದರೆ ಈ ಬಾರಿ ಕಣ್ಣೀರು ಉಕ್ಕಿಸುತ್ತಾರೆ. ಅವರಿಗಿಂತಲೂ ಪಾರ್ವತಿ ಮೆನನ್ ಪ್ರೇಕ್ಷಕರ ಹೃದಯವನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತಾರೆ. ಎಂತಹ ಕಠಿಣ ಹೃದಯಿಗಳೂ ಅವರ ಭಾವಾಭಿನಯಕ್ಕೆ ಮೆದುವಾಗದೆ ಇರಲಾರರು.

ನಾಯಕ ಸೂರ್ಯ (ಶಿವರಾಜ್ ಕುಮಾರ್) ಭೂಗತ ದೊರೆ. ತನ್ನ ಸಹಚರನನ್ನು ಕೊಂದ ಎದುರಾಳಿ ಡಾನ್‌ನನ್ನು ಹೊಡೆದುರುಳಿಸಿ ಭೂಗತನಾಗುತ್ತಾನೆ. ಆದರೆ ವಾಸ್ತವದಲ್ಲಿ ಡಾನ್ ಸತ್ತಿರುವುದಿಲ್ಲ. ಆತನ ಹೆಂಡತಿಯಷ್ಟೇ ಸತ್ತಿರುತ್ತಾಳೆ. ಸೇಡು ತೀರಿಸಿಕೊಳ್ಳಲು ಡಾನ್ ಮುಂದಾಗುತ್ತಾನೆ. ಅತ್ತ ಪೊಲೀಸರೂ ಸೂರ್ಯನನ್ನು ಹುಡುಕುತ್ತಿರುತ್ತಾರೆ.

ಈ ನಡುವೆ ಆಸ್ಪತ್ರೆಯೊಂದರಲ್ಲಿ ಆಶ್ರಯ ಪಡೆಯುವ ಸೂರ್ಯನಿಗೆ ಸುಹಾಸಿನಿ (ಪಾರ್ವತಿ ಮೆನನ್) ಸಿಗುತ್ತಾಳೆ. ಆಕೆಯೋ, ಮನೆಯವರನ್ನು ಪ್ರೀತಿಸುವ ಪೊಲೀಸ್ ಅಧಿಕಾರಿಯನ್ನು ಮದುವೆಯಾಗಬೇಕು ಎಂದು ಕನಸು ಕಾಣುತ್ತಿದ್ದವಳು. ಇದು ಗೊತ್ತಾಗಿ ಸೂರ್ಯ ತಂತ್ರ ಪ್ರಯೋಗಿಸುತ್ತಾನೆ. ಮದುವೆಯೂ ಆಗುತ್ತಾನೆ. ಗಂಡ-ಹೆಂಡತಿ ನಡುವಿನ ಸಂಬಂಧಕ್ಕೆ ಅರ್ಥ ಸಿಗುತ್ತಾ ಹೋಗುತ್ತದೆ. ಸುಳ್ಳಿನ ಕಂತೆಯೊಳಗಿನ ಜೀವನ ತೆರೆದುಕೊಳ್ಳುತ್ತಾ ಹೋಗುತ್ತದೆ. ಅಷ್ಟರಲ್ಲಿ ಎದುರಾಳಿ ಡಾನ್ ಮತ್ತು ಪೊಲೀಸ್ ಅಧಿಕಾರಿ ಹಿಂದೆ ಬಿದ್ದಿರುತ್ತಾರೆ.

ಸುಹಾಸಿನಿಯನ್ನು ಕಳ್ಳದಾರಿಯಿಂದ ಸೂರ್ಯ ಮದುವೆಯಾಗಿದ್ದು ಯಾಕೆ? ಎದುರಾಳಿ ಡಾನ್‌ನಿಂದ ತನ್ನ ಪತ್ನಿಯನ್ನು ಸೂರ್ಯ ಬಚಾವ್ ಮಾಡುತ್ತಾನಾ? ತಾನೂ ಬಚಾವ್ ಆಗುತ್ತಾನಾ ಎನ್ನುವುದು ಮುಂದೆ ಗೊತ್ತಾಗುತ್ತದೆ.

ರೌಡಿಸಂ ಲೇಪ ಸಾಕು ಎಂಬ ಕಳಕಳಿ, ಶಿವಣ್ಣ ಚಿತ್ರವನ್ನಾಗಿಸುವ ಹಂಬಲದಲ್ಲಿ ಫನೀಶ್ ಕುಲುಮೆಯಲ್ಲಿ ಭೂಗತ ಜಗತ್ತಿನೊಳಗಿನ ರೊಮ್ಯಾಂಟಿಕ್ ಸಿನಿಮಾ ಹುಟ್ಟಿದೆ. ಇದು ಬದುಕು ಗಟ್ಟಿ ಮಾಡುವ ಪ್ರೀತಿಯನ್ನು ಹೇಳುತ್ತದೆ. ಚಿತ್ರದುದ್ದಕ್ಕೂ ಹಲವೆಡೆ ಅಚ್ಚರಿ, ಗೊಂದಲಗಳು ಸಿಗುತ್ತವೆ. ಅದ್ಭುತ ಆಕ್ಷನ್ ದೃಶ್ಯಗಳಿವೆ.

ಇಡೀ ಚಿತ್ರದ ಆಸ್ತಿ ಶಿವರಾಜ್ ಕುಮಾರ್. ಆದರೆ ಅವರನ್ನೂ ಕೆಲವು ಸನ್ನಿವೇಶಗಳಲ್ಲಿ ಮೀರಿಸಿರುವುದು ನಾಯಕಿ ಪಾರ್ವತಿ ಮೆನನ್. ಸ್ವತಃ ತಾನೇ ಡಬ್ಬಿಂಗ್ ಮಾಡಿದ್ದಾರೆ. ತನ್ನೆಲ್ಲ ಭಾವಗಳನ್ನು ಬಿಂಬಿಸಿರುವ ರೀತಿ ನಿಜಕ್ಕೂ ಅದ್ಭುತ. 'ಮಿಲನ'ದ ಪಾರ್ವತಿ ನಾನೇ ಎಂದವರು ಸಾರಿ ಸಾರಿ ಹೇಳುತ್ತಾರೆ. ನೀನಾಸಂ ಚೆಸ್ವಾ ಕನ್ನಡಕ್ಕೆ ಸಿಕ್ಕಿರುವ ಇನ್ನೊಬ್ಬ ಪ್ರತಿಭಾವಂತ ಖಳನಟ. ಅರುಂಧತಿ ನಾಗ್, ಶ್ರೀನಾಥ್, ಶಶಿಕುಮಾರ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಪಾತ್ರಗಳನ್ನು ಹೊರತುಪಡಿಸಿದರೆ ಚಿತ್ರದ ಹೀರೋ ಛಾಯಾಗ್ರಾಹಕ ಶೇಖರ್ ಚಂದ್ರ. ಆದರೆ ಸಂಕಲನಕಾರರಿಗೆ ಕತ್ತರಿ ಪ್ರಯೋಗ ಮಾಡುವಲ್ಲಿ ಗೊಂದಲ ಸಾಕಷ್ಟು ಕಾಡಿದಂತಿದೆ. ವಿಜಯ್ ಪ್ರಕಾಶ್ ಚೊಚ್ಚಲ ಸಂಗೀತ ಚೆನ್ನಾಗಿದೆ, ಆದರೆ ಸಿಕ್ಕಾಪಟ್ಟೆ ಹೊಗಳುವಂತಿಲ್ಲ.

ನಿರ್ದೇಶಕ ಫನೀಶ್ ಕನ್ನಡದ ಮತ್ತೊಬ್ಬ ಭರವಸೆಯ ನಿರ್ದೇಶಕರಾಗಿ ಮೊದಲ ಕೊಡುಗೆ ನೀಡಿದ್ದಾರೆ. ಗಂಡ-ಹೆಂಡತಿ ನಡುವಿನ ಸಂಬಂಧದ ಆಳ ಅರಿವು ನಿಮಗೂ ಬೇಕಿದ್ದರೆ, 'ಅಂದರ್ ಬಾಹರ್' ಹೇಳಿ ಮಾಡಿಸಿದ ಸಿನಿಮಾ. ಖಂಡಿತಾ ಇದೊಂದು ಭೂಗತ ಲೋಕದ ಕಥೆಯ ಸಿನಿಮಾವಲ್ಲ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

Show comments