Select Your Language

Notifications

webdunia
webdunia
webdunia
webdunia

ಚಿತ್ರ ವಿಮರ್ಶೆ: ಸಹನೆ ಪರೀಕ್ಷಿಸುವ 'ನೀ ಇಲ್ಲದೆ'

ಚಿತ್ರ ವಿಮರ್ಶೆ: ಸಹನೆ ಪರೀಕ್ಷಿಸುವ 'ನೀ ಇಲ್ಲದೆ'
PR
ಈಗಾಗಲೇ ಬಂದು ಹೋಗಿರುವ ಸಿನಿಮಾಗಳ ಹಳೆಯ ಕಥೆಯ ಎಳೆಯೊಂದನ್ನು ಹಿಡಿದುಕೊಂಡು ನಿರ್ದೇಶಕ ಶಿವ ಗಣಪತಿ 'ನೀ ಇಲ್ಲದೆ' ಎಂಬ ಹೆಸರಿನ ಯಾರೂ ನೋಡಲಾಗದಂಥ ಚಿತ್ರವನ್ನು ತೆರೆಗೆ ತಂದಿದ್ದಾರೆ.

ಚಿತ್ರದಲ್ಲಿರುವ ಯಾವ ಪಾತ್ರದ ನಿರ್ವಹಣೆಯಲ್ಲೂ ಗಂಭೀರತೆ ಕಾಣುವುದಿಲ್ಲವಾದುದರಿಂದ ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕನೂ ಏನನ್ನೂ ಈ ಚಿತ್ರದಲ್ಲಿ ಗಂಭೀರವಾಗಿ ತೆಗೆದುಕೊಳ್ಳಲಾಗದೆ ಸುಸ್ತು ಬಿದ್ದರೆ ಆಶ್ಚರ್ಯವಿಲ್ಲ.

ಪ್ರೀತಿ ಪ್ರೇಮವೂ ಅಲ್ಲದ, ಸಾಹಸಮಯವೂ ಅಲ್ಲದ ಕಲಸುಮೇಲೋಗರದ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರು ಒಂದಷ್ಟು ರೀಲು ಸುತ್ತಿದ್ದಾರೆಂದಷ್ಟೇ ಹೇಳಬಹುದು. ಜಾಳು ಜಾಳು ನಿರೂಪಣೆ, ಸತ್ವ ಹೀನ ಚಿತ್ರಕಥೆ, ಅರ್ಥ ರಹಿತ ಸನ್ನಿವೇಶಗಳು, ಕಳಪೆ ಛಾಯಾಗ್ರಹಣ ಒಟ್ಟಿನಲ್ಲಿ ಪ್ರೇಕ್ಷಕನ ಸಹನೆ ಪರೀಕ್ಷಿಸುತ್ತವೆ.

ನಿರ್ದೇಶಕರು ಈ ಚಿತ್ರದಲ್ಲಿ ಏನನ್ನು ಹೇಳಹೊರಟಿದ್ದಾರೆಂಬುದೇ ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ. ನಾಯಕ ರಘು ಮುಖರ್ಜಿ ಹಾಗೂ ನಾಯಕಿ ಪೂಜಾ ಗಾಂಧಿ ಇನ್ನಾದರೂ ಚಿತ್ರಕ್ಕೆ ಒಪ್ಪಿಗೆ ಕೊಡುವಾಗ ಉತ್ತಮ ಪಾತ್ರವಿರುವ ಚಿತ್ರವನ್ನು ಆರಿಸಿಕೊಳ್ಳುವುದು ಒಳಿತು.

ಪರದೆಯ ಮೇಲೆ ಯಾವ ಮುಖವೂ ಸರಿಯಾಗಿ ಕಾಣುವುದಿಲ್ಲ. ಎಲ್ಲೆಲ್ಲೂ ಕತ್ತಲೆಯೇ ಆವರಿಸಿದೆ. ಶೂಟಿಂಗ್ ಜತೆಗೆ ಎಡಿಟಿಂಗ್ ಕೂಡಾ ಕಳಪೆ ಮಟ್ಟದ್ದು. ಸೆನ್ಸಾರ್ ಮಂಡಳಿ ಈ ಚಿತ್ರವನ್ನು ನೋಡಿದೆಯೋ ಇಲ್ಲವೋ ಎಂಬ ಸಂಶಯ ಪ್ರೇಕ್ಷಕನನ್ನು ಕಾಡಿದರೂ ಆಶ್ಚರ್ಯವಿಲ್ಲ.

ಚಿತ್ರಕಥೆಗೆ ಒಂದು ಸ್ಪಷ್ಟ ದಿಕ್ಕು ತೋರಿಸದೆ ಇರುವುದೇ ವಿನೂತನ ಹೆಜ್ಜೆ ಎಂದು ನಿರ್ದೇಶಕರು ಭಾವಿಸಿಕೊಂಡಂತಿದ್ದು, ಆ ಪ್ರಕಾರವೇ ಚಿತ್ರ ಮುಂದುವರಿಯುತ್ತಾ ಪ್ರೇಕ್ಷಕನ ತಲೆಗೆ ಚಿಟ್ಟು ಹಿಡಿಸುತ್ತದೆ. ಚಿತ್ರಮಂದಿರಕ್ಕೆ ಪ್ರೇಕ್ಷಕನನ್ನು ಸೆಳೆಯುವ ಯಾವ ಯೋಗ್ಯತೆಯೂ ಈ ಚಿತ್ರಕ್ಕಿಲ್ಲ.

ನಿರುದ್ಯೋಗಿ ಸಂಗೀತಗಾರ ಸಂಜಯ್ (ರಘು ಮುಖರ್ಜಿ) ಹಾಡುಗಾರ್ತಿ ಶರಣ್ಯಳ (ಪೂಜಾ ಗಾಂಧಿ) ಹಿಂದೆ ಬಿದ್ದು ಅವಳನ್ನು ಒಲಿಸಿಕೊಳ್ಳಲು ಎನೇನೋ ಕಸರತ್ತು ಮಾಡಿ ಅದರಲ್ಲಿ ಯಶಸ್ವಿಯಾಗುವುದಷ್ಟೇ ಒಟ್ಟು ಕಥೆ. ಕೊನೆಗೂ ಗೊಂದಲದಲ್ಲೇ ಚಿತ್ರ ಮುಗಿದು ಪ್ರೇಕ್ಷಕ ಸಮಾಧಾನದ ನಿಟ್ಟುಸಿರು ಬಿಟ್ಟು ಚಿತ್ರಮಂದಿರದಿಂದ ಹೊರ ತೆರಳಬೇಕಾಗುತ್ತದೆ.

Share this Story:

Follow Webdunia kannada