Select Your Language

Notifications

webdunia
webdunia
webdunia
webdunia

ಹಂಗೆಲ್ಲ ನಾನು 'ಐಟಂ ಗರ್ಲ್' ಆಗೋದಿಲ್ಲ: ಪೂಜಾ ಗಾಂಧಿ

ಹಂಗೆಲ್ಲ ನಾನು 'ಐಟಂ ಗರ್ಲ್' ಆಗೋದಿಲ್ಲ: ಪೂಜಾ ಗಾಂಧಿ
PR
'ಮುಂಗಾರು ಮಳೆ'ಯಲ್ಲಿ ಸಂಜನಾ ಗಾಂಧಿ ಹೆಸರಿನಲ್ಲಿ ಎಂದು ಆರಂಭವಾದ ಸಿನಿ ಜರ್ನಿಯಲ್ಲಿ 'ದಂಡುಪಾಳ್ಯ'ದ ಹಂತಕಿ ಲಕ್ಷ್ಮಿಯಾದ ಪೂಜಾ ಗಾಂಧಿಯದ್ದು ನಟಿಯಾಗಿ ಈಗ ಪುನರ್ಜನ್ಮ. ಸಾಲು ಸಾಲು ಫ್ಲಾಪ್ ಚಿತ್ರಗಳನ್ನು ಕೊಟ್ಟು ಬೇಡಿಕೆ ಕಳೆದುಕೊಂಡಿದ್ದಾಕೆಗೆ ಸಿಕ್ಕಾಪಟ್ಟೆ ಡಿಮ್ಯಾಂಡು. ಅಂದ ಮೇಲೆ ಐಟಂ ಸಾಂಗುಗಳನ್ನು ಮಾಡುತ್ತೀರಾ ಅಂತ ಕೇಳೋರಿಗೇನು ಕೊರತೆ?

'ದಂಡುಪಾಳ್ಯ' ಪೋಸ್ಟರುಗಳಲ್ಲಿ ಬೆತ್ತಲೆ ಬೆನ್ನು ತೋರಿಸಿದಾಗ, ಚಿತ್ರದಲ್ಲೇನೋ ಮಸಾಲೆ ಇರಬಹುದು ಎಂದೇ ಲೆಕ್ಕಾಚಾರ ಹಾಕಲಾಗಿತ್ತು. ಆ ನಿರೀಕ್ಷೆಯನ್ನು ಹುಸಿಗೊಳಿಸಿದ್ದರು ನಿರ್ದೇಶಕ ಶ್ರೀನಿವಾಸ ರಾಜು. ಆದರೂ ಗಾಂಧಿನಗರಿಯ ಮಂದಿಗೆ ಪೂಜಾ ಗಾಂಧಿ ಸಿಕ್ಕಾಪಟ್ಟೆ ಸೆಕ್ಸಿಯಾಗಿಯೇ ಕಾಣುತ್ತಿದ್ದಾರೆ. ಪೋಸ್ಟರು ನೋಡಿಯೇ ಈಕೆ ಐಟಂ ಹಾಡಿಗೆ ಒಪ್ಪಿಕೊಂಡರೆ ಸಾಕು ಎಂದು ಏದುಸಿರು ಬಿಡುತ್ತಿದ್ದಾರೆ.

ಸದ್ಯ ಪೂಜಾ ಗಾಂಧಿಗೆ ಬರುತ್ತಿರುವ ಸಾಕಷ್ಟು ಆಫರುಗಳಲ್ಲಿ ಐಟಂ ಹಾಡುಗಳದ್ದೇ ಕಾರುಬಾರು ಜೋರಾಗಿರುವಂತಿದೆ. ಆದರೆ ಪೂಜಾ ಗಾಂಧಿ ಮಾತ್ರ, ಇದಕ್ಕೆ ಸೊಪ್ಪು ಹಾಕುತ್ತಿಲ್ಲ. ಬೇಡಿಕೆ ಇದೆ ಎಂದ ಮಾತ್ರಕ್ಕೆ ಬೆನ್ನು ತೋರಿಸುವುದಿಲ್ಲ ಎಂದು ತನ್ನ ನಿಲುವಿಗೆ ಅಂಟಿಕೊಂಡಿದ್ದಾರೆ.

ಈಗ ಇದು ಸುದ್ದಿಯಾಗೋದಕ್ಕೆ ಕಾರಣ, ಲಕ್ಕಿ ಶಂಕರ್. ಇತ್ತೀಚೆಗಷ್ಟೇ ಅವರು 'ದಂಡುಪಾಳ್ಯ' ನೋಡಿದ್ದರು. ಅಷ್ಟಕ್ಕೇ ಪೂಜಾ ಗಾಂಧಿಗೆ ಮರುಳಾದ ಅವರು, ತನ್ನ 'ದೇವರಾಣೆ' ಚಿತ್ರದಲ್ಲಿ ಆಕೆ ಐಟಂ ಸಾಂಗು ಮಾಡಿದರೆ ಚೆನ್ನಾಗಿರುತ್ತದೆ ಅಂದುಕೊಂಡು ನೃತ್ಯ ನಿರ್ದೇಶಕರ ಮೂಲಕ ಎಡ ತಾಕಿದರು.

ಆರಂಭದಲ್ಲಿ ಓಕೆ ಅಂದಿದ್ದರಂತೆ ಪೂಜಾ ಗಾಂಧಿ. ಮಲಯಾಳಂನಲ್ಲಿ ಟಾಮ್ ಗರ್ಲ್ ಆಗಿ ಸಿಕ್ಕಾಪಟ್ಟೆ ಹಾಟ್ ಆಗಿರುವಾಗ, ಕನ್ನಡದಲ್ಲಿ ಇನ್ನೊಂದು ಐಟಂ ಡ್ಯಾನ್ಸ್ ಮಾಡಿದರೇನು ಎಂದು ಯೋಚಿಸಿದ್ದರೋ ಏನೋ? ಆದರೆ ಅವರ ಯೋಚನೆ ಕೆಲವೇ ದಿನಗಳಲ್ಲಿ ಬದಲಾಗಿತ್ತು. ಐಟಂ ಹಾಡಲ್ಲಿ ಕುಣಿಯೋದಿಲ್ಲ ಅಂತ ಮೆಸೇಜ್ ಕಳುಹಿಸಿದರಂತೆ.

ಅಂದರೆ, ಬೇಡಿಕೆ ಇದೆ ಎಂದ ಮಾತ್ರಕ್ಕೆ ಐಟಂ ಹಾಡುಗಳನ್ನು ಒಪ್ಪಿಕೊಳ್ಳುವ ದರ್ದು ತನಗಿಲ್ಲ ಎಂಬ ಸಂದೇಶ ನಮ್ಮ ಸ್ಯಾಂಡಲ್‌ವುಡ್ ನಿರ್ಮಾಪಕರಿಗೆ ಪೂಜಾ ಗಾಂಧಿಯವರಿಂದ ಬಂದಿದೆ.

ಬಿಡಿ, ಈ ಸಂದೇಶವನ್ನು ಸ್ವೀಕರಿಸಿರುವ ಲಕ್ಕಿ ಶಂಕರ್ '90' ಗುಂಗಿನಲ್ಲೇ ಬೇರೆ ಐಟಂಗಳ ಹುಡುಕಾಟ ಶುರು ಹಚ್ಚಿಕೊಂಡಿದ್ದಾರೆ. ಪೂಜಾ ಇಲ್ಲದಿದ್ದರೇನು? ಕರೆದಾಗ ಓಡಿ ಬರೋ ಮುಂಬೈ ಹುಡುಗಿಯರಿಲ್ಲವೇ ಎಂದು ಅವರೋ ಯೋಚಿಸಿರಬಹುದು!

Share this Story:

Follow Webdunia kannada